ಪಾಂಡವಪುರ: ಆಸ್ಪತ್ರೆ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದ ಮಹಿಳೆ

Update: 2019-02-14 14:18 GMT

ಪಾಂಡವಪುರ, ಫೆ.14: ಇಲ್ಲಿನ ಉಪವಿಭಾಗೀಯ ಸರಕಾರಿ ಸಾರ್ವಜನಿಕ ಆಸ್ಪತ್ರೆ ಮುಖ್ಯ ಆಡಳಿತಾ ವೈದ್ಯಾಧಿಕಾರಿ ಹಾಗೂ ಆಸ್ಪತೆ ಸಿಬ್ಬಂದಿಗಳ ನಿರ್ಲಕ್ಷ್ಯತೆಯಿಂದಾಗಿ ಕಟ್ಟಡದ ಮೇಲಂತಸ್ಥಿನಿಂದ ಬಿದ್ದು ವಯೋವೃದ್ಧೆಯೊಬ್ಬರು ಸಾವನ್ನಪ್ಪಿರುವ ಘಟನೆ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ನಡೆದಿದೆ.

ತಾಲೂಕಿನ ಎಣ್ಣೆಹೊಳೆಕೊಪ್ಪಲಿನ ನಿವಾಸಿ ಶಾರದಮ್ಮ (62) ಎಂಬಾಕೆ ಮೃತ ವಯೋವೃದ್ಧೆಯಾಗಿದ್ದಾರೆ.

ಘಟನೆ ವಿವರ : ಪಾಂಡವಪುರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಸುಮಾರು 2 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು,ಲಿಫ್ಟ್ ರೂಂಗೆ ಬಾಗಿಲು ಅಳವಡಿಸದೆ ಇದ್ದುದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆಗೆಂದು ಮೊಮ್ಮಗಳೊಂದಿಗೆ ಬಂದಿದ್ದ ಶಾರದಮ್ಮ ಅವರು ಕತ್ತಲೆಯಲ್ಲಿಯೇ ಶೌಚಾಲಯದ ಕೊಠಡಿ ಇರಬಹುದೆಂದು ಊಹೆ ಮಾಡಿಕೊಂಡು ಲಿಫ್ಟ್ ರೂಂಗೆ ಕಾಲಿಟ್ಟು ಮೇಲಿನಿಂದ ಕೆಳಗ್ಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ವಯೋವೃದ್ಧೆಯೊಬ್ಬರು ಆಸ್ಪತ್ರೆ ಮೇಲಂತಸ್ಥಿನಿಂದ ಬಿದ್ದು ಸಾವನ್ನಪ್ಪಿದ ಘಟನೆಯಿಂದಾಗಿ ಪಾಂಡವಪುರ ಉಪವಿಭಾಗೀಯ ಆಸ್ಪತ್ರೆ ಬಳಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ವಿ.ಆರ್.ಶೈಲಜಾ ಹಾಗೂ ತಹಸೀಲ್ದಾರ್ ಪ್ರಮೋದ್ ಎಲ್.ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬುಧವಾರ ಮಧ್ಯರಾತ್ರಿಯೇ ಆಸ್ಪತ್ರೆ ವೈದ್ಯರು ಮೃತ ವಯೋವೃದ್ಧೆಯ ಮರಣೋತ್ತರ ಪರೀಕ್ಷೆಯನ್ನು ನಡೆಸಿರುವುದರಿಂದ ಮೃತರ ಸಂಬಂಧಿಕರು ಹಾಗೂ ಸಾರ್ವಜನಿಕರಲ್ಲಿ ಹಲವಾರು ಅನುಮಾನಗಳು ವ್ಯಕ್ತವಾಗಲು ಕಾರಣವಾಗಿದೆ.

ವಾರಸುದಾರರಿಗೆ ಮೃತ ದೇಹವನ್ನು ಗುರುವಾರ ಮಧ್ಯಾಹ್ನ ಹಸ್ತಾಂತರಿಸಲಾಯಿತು. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News