ಇಬ್ಬರಲ್ಲಿ ಮಂಗನ ಕಾಯಿಲೆ ರೋಗ ದೃಢ: 5 ಮಂದಿ ಮಣಿಪಾಲ ಆಸ್ಪತ್ರೆಗೆ ದಾಖಲು

Update: 2019-02-14 14:42 GMT

ಶಿವಮೊಗ್ಗ, ಫೆ. 15: ಕಳೆದೆರೆಡು ತಿಂಗಳಿನಿಂದ ಮಲೆನಾಡಿಗರನ್ನು ಬೆಂಬಿಡದೆ ಕಾಡುತ್ತಿರುವ ಮಂಗನ ಕಾಯಿಲೆ ಹಾವಳಿ ಮುಂದುವರಿದಿದ್ದು, ಸಾಗರ ತಾಲೂಕು ಕಾರ್ಗಲ್ ಸಮೀಪದ ಕುಳಕಾರು ಗ್ರಾಮದ ಇಬ್ಬರು ಮಂಗನ ಕಾಯಿಲೆ (ಕೆಎಫ್‌ಡಿ) ಯಿಂದ ಬಳಲುತ್ತಿರುವುದು ದೃಢಪಟ್ಟಿದೆ.

ಗೋವಿಂದ ಕುಳಕಾರು ಹಾಗೂ ಚಂದಯ್ಯ ಕುಳಕಾರು ಕೆಎಫ್‌ಡಿಗೆ ತುತ್ತಾದವರೆಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಇವರು ಜ್ವರದಿಂದ ಬಳಲುತ್ತಿದ್ದ ಇವರು, ಅರಳಗೋಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿದ್ದರು. ಅಲ್ಲಿನ ವೈದ್ಯರು ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಿದ್ದರು.

ಇಬ್ಬರ ರಕ್ತದ ಮಾದರಿ ಸಂಗ್ರಹಿಸಿ ಹೆಚ್ಚಿನ ತಪಾಸಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗಿತ್ತು. ಪ್ರಯೋಗಾಲಯದ ವರದಿಯಲ್ಲಿ ಕೆಎಫ್‌ಡಿಯಿರುವುದು ಕಂಡುಬಂದಿದೆ. ಸದ್ಯ ಇಬ್ಬರಿಗೂ ಮಣಿಪಾಲ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ದಾಖಲು: ಈ ನಡುವೆ ಕುಳಕಾರು ಗ್ರಾಮದ ರವಿರಾಜ ಜೈನ್, ರತ್ನಾವತಿ, ಸುರೇಶ್, ಪೆಲಿಕ್ಸ್ ನರೋನ್ಹಾ ಹಾಗೂ ಸುದರ್ಶನ ಎಂಬುವರಲ್ಲಿ ಶಂಕಿತ ಕೆಎಫ್‌ಡಿ ರೋಗ ಲಕ್ಷಣಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಗ್ರಾಮದ ಇಬ್ಬರಲ್ಲಿ ಕೆಎಫ್‌ಡಿಯಿರುವುದು ಹಾಗೂ ಹಲವರು ಜ್ವರದಿಂದ ಬಳಲುತ್ತಿರುವುದು ಕುಳಕಾರು ಗ್ರಾಮಸ್ಥರಲ್ಲಿ ತೀವ್ರ ಆತಂಕ ಉಂಟು ಮಾಡಿದೆ. ಕೆಲ ನಿವಾಸಿಗಳು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮಕ್ಕೆ ಭೇಟಿಯಿತ್ತು ಪರಿಶೀಲಿಸಿದ್ದಾರೆ.

ಪತ್ತೆ: ಶರಾವತಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಹಲವು ದಿನಗಳ ಕಾಲ ಮೃತ ಮಂಗಗಳ ಶೋಧ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ 70ಕ್ಕೂ ಅಧಿಕ ಮೃತ ಮಂಗಗಳ ಕಳೇಬರ ಪತ್ತೆ ಹಚ್ಚಲಾಗಿದೆ ಎಂದು ಸ್ಥಳೀಯ ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡುತ್ತವೆ.

ಬಾಕ್ಸ್

ಮಾನವ ಹಕ್ಕುಗಳ ಆಯೋಗದಿಂದ ಜಿಲ್ಲಾಡಳಿತಕ್ಕೆ ನೋಟಿಸ್

ಶಿವಮೊಗ್ಗ, ಫೆ. 15: ಮಂಗನ ಕಾಯಿಲೆ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳ ಕುರಿತಂತೆ ವರದಿ ಸಲ್ಲಿಸುವಂತೆ ಶಿವಮೊಗ್ಗ ಜಿಲ್ಲಾಧಿಕಾರಿಗೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗ ನೋಟಿಸ್ ಜಾರಿಗೊಳಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ದೂರು ದಾಖಲು: ಜಿಲ್ಲಾಡಳಿತ ಸಹ್ಯಾದ್ರಿ ಉತ್ಸವ ಆಯೋಜಿಸಿದ್ದ ವೇಳೆ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ಹಿನ್ನೆಲೆಯಲ್ಲಿ ಉತ್ಸವ ಮುಂದೂಡುವಂತೆ ಆಗ್ರಹಿಸಿದ್ದರು. ಹಾಗೆಯೇ ಮಂಗನ ಕಾಯಿಲೆ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ವಿಫಲವಾಗಿದೆ ಎಂದು ದೂರಿದ್ದರು.

 ಈ ಕುರಿತಂತೆ ಮುಖಂಡ ಶಶಿ ಸಂಪಳ್ಳಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಮಾಹಿತಿ ರವಾನಿಸಿದ್ದರು. ಱಮಂಗನ ಕಾಯಿಲೆಯಿಂದ 10 ಜನ ಮೃತಪಟ್ಟಿದ್ದು, ನೂರಾರು ಜನರು ರೋಗಕ್ಕೆ ತುತ್ತಾಗಿದ್ದಾರೆ. ರೋಗ ನಿಯಂತ್ರಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆೞಎಂದು ಆರೋಪಿಸಿದ್ದರು.

ಇದನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಗಂಭೀರವಾಗಿ ಪರಿಗಣಿಸಿ, ಈ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಸೂಚಿಸಿತ್ತು. ಅದರಂತೆ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಇದೀಗ ಆಯೋಗವು ಜಿಲ್ಲಾಧಿಕಾರಿಗೆ ಸೂಕ್ತ ಕ್ರಮಕೈಗೊಂಡಿರುವ ಬಗ್ಗೆ ಆರು ವಾರಗಳಲ್ಲಿ ವರದಿ ಸಲ್ಲಿಸುವಂತೆ ನೋಟೀಸ್ ನೀಡಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News