ಪೊಲೀಸರ ಮೇಲೆ ಯುವಕರು ಹಲ್ಲೆ ನಡೆಸಿಲ್ಲ: ಮಾಧ್ಯಮಗಳ ವರದಿ ಸುಳ್ಳು - ಎಸ್ಪಿ ಸ್ಪಷ್ಟನೆ

Update: 2019-02-14 14:49 GMT

ಶಿವಮೊಗ್ಗ, ಫೆ. 14: ಗಾಂಜಾ ಹಾಗೂ ಮದ್ಯದ ಅಮಲಿನಲ್ಲಿದ್ದ ಯುವಕರ ಗುಂಪು ಸಾರ್ವಜನಿಕ ಸ್ಥಳದಲ್ಲಿಯೇ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದೆ ಎಂದು ಕೆಲ ಮಾಧ್ಯಮಗಳಲ್ಲಿ ಬಿತ್ತರವಾದ ಸುದ್ದಿಯು ಸತ್ಯಕ್ಕೆ ದೂರವಾಗಿದ್ದು, ಆ ರೀತಿಯ ಯಾವುದೇ ಘಟನೆ ನಡೆದಿಲ್ಲ ಎಂದು ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

ಈ ಕುರಿತಂತೆ ಪತ್ರಿಕಾ ಹೇಳಿಕೆ ನೀಡಿರುವ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ, ಫೆ. 11ರಂದು ಶಿವಮೊಗ್ಗ ನಗರದ ಲಕ್ಷ್ಮೀ ಟಾಕೀಸ್ ಬಳಿ ಗಾಂಜಾ ಮತ್ತು ಮದ್ಯದ ಅಮಲಿನಲ್ಲಿ ಕೆಲ ಯುವಕರ ತಂಡ ಸ್ಥಳಕ್ಕೆ ಆಗಮಿಸಿದ ಮಫ್ತಿಯಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದೆ ಎಂದು ಮಾಧ್ಯಮದಲ್ಲಿ ವರದಿ ಬಿತ್ತರವಾಗಿತ್ತು.

ಆದರೆ ನಡೆದ ಘಟನೆಯೇ ಬೇರೆಯಾಗಿದೆ. ಫೆ. 9ರಂದು ತಡರಾತ್ರಿ ಲಕ್ಷ್ಮೀ ಟಾಕೀಸ್ ಬಳಿ ಗಲಾಟೆ ನಡೆಯುತ್ತಿರುವ ಬಗ್ಗೆ ಜಯನಗರ ಠಾಣೆ ಸಬ್ ಇನ್‌ಸ್ಪೆಕ್ಟರ್‌ಗೆ ಮಾಹಿತಿ ಲಭಿಸಿದ್ದು, ಅವರು ಸ್ಥಳಕ್ಕೆ ಆಗಮಿಸಿದ್ದಾರೆ. ಈ ವೇಳೆ ರಸ್ತೆ ಅಪಘಾತಕ್ಕೆ ಸಂಬಂಧಿಸಿದಂತೆ ಕರಣ್ ಮೋದಿ ಹಾಗೂ ಚೇತನ್ ಎಂಬುವರು ಗಲಾಟೆ ಮಾಡಿಕೊಳ್ಳುತ್ತಿದ್ದರು. ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.

ವಾಹನ ಅಪಘಾತದ ಬಗ್ಗೆ ಜಗಳವಾಗುತ್ತಿದ್ದು, ಸಾರ್ವಜನಿಕರು ನೋಡುತ್ತಿದ್ದರು. ಉಳಿದಂತೆ ನಾವು ಮದ್ಯಪಾನವಾಗಲಿ, ಗಾಂಜಾ ನಶೆಯಲ್ಲಾಗಲಿ ಗಲಾಟೆ ಮಾಡಿಲ್ಲ ಎಂದು ತಿಳಿಸಿದ್ದಾರೆ. ತದನಂತರ ಇವರಿಬ್ಬರಿಗೂ ಬುದ್ದಿಮಾತು ಹೇಳಿ, ಇನ್ನು ಮುಂದೆ ಸಾರ್ವಜನಿಕ ಸ್ಥಳದಲ್ಲಿ ಗಲಾಟೆ ಮಾಡಿಕೊಳ್ಳದಂತೆ ಸೂಚಿಸಿ ಜಯನಗರ ಠಾಣೆ ಪೊಲೀಸರು ಕಳುಹಿಸಿದ್ದಾರೆ.

ಆದರೆ ಇವರಿಬ್ಬರು ಗಲಾಟೆ ಮಾಡಿಕೊಳ್ಳುವ ವೇಳೆ ಮಫ್ತಿಯಲ್ಲಿ ಯಾವುದೇ ಪೊಲೀಸರು ಸ್ಥಳಕ್ಕೆ ಹೋಗಿಲ್ಲ. ಹಾಗೆಯೇ ಪೊಲೀಸರ ಮೇಲೆ ಯಾವುದೇ ಹಲ್ಲೆಯೂ ನಡೆದಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News