ವಿಟಿಯು ವಿಭಜನೆಗೆ ಮುಂದಾದರೆ ಪ್ರತ್ಯೇಕ ರಾಜ್ಯದ ಕೂಗಿಗೆ ಅವಕಾಶ ಮಾಡಿಕೊಟ್ಟಂತೆ: ಅರುಣ್ ಶಹಪೂರ್

Update: 2019-02-14 17:14 GMT

ಬೆಂಗಳೂರು, ಫೆ.14: ರಾಜ್ಯ ಸರಕಾರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಭಜನೆಗೆ ಮುಂದಾದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೆ ಜೀವ ಬರುವ ಅಪಾಯವಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ್ ಶಹಪೂರ್ ಅಭಿಪ್ರಾಯಿಸಿದರು. ಗುರುವಾರ ನಗರದ ಗಾಂಧಿ ಭವನದಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿ ಪರಿಷತ್ ಏರ್ಪಡಿಸಿದ್ದ ವಿಟಿಯು ವಿಭಜನೆ ಕುರಿತು ಶಿಕ್ಷಣ ತಜ್ಞರ ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣ ಕ್ಷೇತ್ರದ ಸಮಗ್ರ ಚಿಂತನೆ ಇಲ್ಲದೇ, ಸಮ್ಮಿಶ್ರ ಸರಕಾರ ವಿಟಿಯು ವಿಂಗಡಣೆಗೆ ಮುಂದಾಗಿದೆ ಎಂದು ಆರೋಪಿಸಿದರು.

ಯಾವುದೆ ವಿವಿಗಳು ರಾಜಕೀಯ ಹಸ್ತಕ್ಷೇಪ ಮುಕ್ತವಾಗಿರಬೇಕು. ಆದರೆ, ಸರಕಾರ ಮತದಾರರನ್ನು ಓಲೈಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವಿಂಗಡಿಸಲು ಮುಂದಾಗಿದೆ. ಒಂದು ವೇಳೆ ಭಂಡತನಕ್ಕೆ ಬಿದ್ದು ವಿಂಗಡಿಸಿದರೆ ರಾಜ್ಯದ ವಿಂಗಡಣೆಗೆ ಇದೇ ಮುನ್ನುಡಿ ಬರೆದಂತಾಗುತ್ತದೆ ಎಂದು ಅವರು ಹೇಳಿದರು.

ವಿವಿ ವಿಂಗಡಣೆಗೆ ಸಂಬಂಧಿಸಿ ಇತ್ತೀಚಿಗೆ ಪಕ್ಷಾತೀತವಾಗಿ ಎಂ.ಬಿ.ಪಾಟೀಲ್, ಬಸವರಾಜ ಹೊರಟ್ಟಿ, ಮಹಾಂತೇಶ್ ಕವಟಿಗಿಮಠ ಸೇರಿದಂತೆ ಉತ್ತರ ಕರ್ನಾಟಕ ಶಾಸಕರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯನ್ನು ಭೇಟಿ ಮಾಡಿ, ವಿಟಿಯು ವಿಂಗಡಣೆ ಮಾಡಬಾರದೆಂದು ಒತ್ತಾಯಿಸಲಾಗಿದೆ. ಒಂದು ವೇಳೆ ವಿಟಿಯು ವಿಭಜನೆಗೆ ಮುಂದಾದರೆ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ವಿಟಿಯು ಮೊದಲ ಕುಲಪತಿ ರಾಜಶೇಖರ ಮಾತನಾಡಿ, ವಿಟಿಯು ವಿಭಜನೆ ಮಾಡಬಾರದು ಎಂದು ಹತ್ತು ಇಪ್ಪತ್ತು ಬಾರಿ ಹೋರಾಟ ಮಾಡಿದರೂ ಸರಕಾರ, ಮುಖ್ಯಮಂತ್ರಿಗಳು ಈ ಬಗ್ಗೆ ಯೋಚಿಸುತ್ತಿಲ್ಲ. ಹೀಗಾಗಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವ ಅಗತ್ಯವಿದೆ ಎಂದು ತಿಳಿಸಿದರು.

ಶಿಕ್ಷಣ ತಜ್ಞ ಶ್ರೀನಿವಾಸ ಬಳ್ಳಿ ಮಾತನಾಡಿ, ಎಲ್ಲ ವಿವಿಗಳಿಗೂ ಬೆಂಗಳೂರಿನಲ್ಲಿಯೇ ಕೇಂದ್ರಗಳಾಗಿವೆ. ವಿಟಿಯು ಮಾತ್ರ ಉತ್ತರ ಕರ್ನಾಟಕದ ಭಾಗದಲ್ಲಿದೆ. ಅದನ್ನು ಬೇರ್ಪಡಿಸಿದರೆ ಸರಿಯಲ್ಲ. ಉತ್ತರ ಕರ್ನಾಟಕ ಶಿಕ್ಷಣ ಅಭಿವೃದ್ಧಿಗೆ ವಿಟಿಯು ಇದ್ದು, ಅದನ್ನು ವಿಂಗಡಿಸಿ ಸರಕಾರ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News