ಹಾಸನ: ರಸ್ತೆ ನಿರ್ಮಾಣಕ್ಕಾಗಿ ಮೂರಕ್ಕೂ ಹೆಚ್ಚು ಎಕರೆ ಈದ್ಗಾ ಭೂಮಿ ಸ್ವಾಧೀನ

Update: 2019-02-14 18:09 GMT

► 15ನೇ ದಿನಕ್ಕೆ ಕಾಲಿಟ್ಟ ಧರಣಿ

► ನ್ಯಾಯ ಸಿಗುವವರೆಗೂ ಹೋರಾಟದ ಎಚ್ಚರಿಕೆ

ಹಾಸನ, ಫೆ.14: ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಂಡಿರುವ ಇಲ್ಲಿನ ಈದ್ಗಾ ಹಾಗೂ ಖಬರ್ ಸ್ಥಾನದ ಭೂಮಿ ಪರಿಹಾರ ನೀಡಬೇಕೆಂದು ಆಗ್ರಹಿ 14 ದಿನಗಳಿಂದ ಧರಣಿ ನಡೆಯುತ್ತಿರುವ ಸ್ಥಳಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವ ಸಹಿತ ಯಾರೊಬ್ಬ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಭೇಟಿ ನೀಡದಿರುವುದಕ್ಕೆ ಜಿಲ್ಲೆಯಾದ್ಯಂತ ಮುಸ್ಲಿಮರಿಂದ ಆಕ್ರೋಶ ವ್ಯಕ್ತವಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಹಾಸನ ನಗರದ ಈದ್ಗಾ ಹಾಗೂ ಖಬರ್ ಸ್ಥಾನದ ಸುಮಾರು 3 ಎಕರೆ ಭೂಮಿಯನ್ನು 1994ರಲ್ಲಿ ಸರಕಾರ ಸ್ವಾಧೀನ ಮಾಡಿತ್ತು. ಭೂಮಿ ಸ್ವಾಧೀನ ಮಾಡಿ ಎರಡು ದಶಕಗಳು ಕಳೆದರೂ ಇನ್ನೂ ಈ ಭೂಮಿಗೆ ಸರಕಾರ ಪರಿಹಾರ ನೀಡದ ಸರಕಾರದ ಧೋರಣೆಯನ್ನು ಖಂಡಿಸಿ ಹುಣಸಿನಕೆರೆ ಬಳಿಯ ಹೊಸ ಈದ್ಗಾ ಮೈದಾನದ ಮುಂದೆ 14 ದಿನಗಳಿಂದ ಕ್ಷೇತ್ರದ ಮುಸ್ಲಿಮರು ಧರಣಿ ನಡೆಸುತ್ತಿದ್ದಾರೆ.

ಆದರೆ ಸ್ಥಳಕ್ಕೆ ಜಿಲ್ಲೆಯ ಉಸ್ತುವಾರಿ ಸಚಿವ ಸಹಿತ ಯಾರೊಬ್ಬ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಭೇಟಿ ನೀಡಿ ನಮ್ಮ ಸಮಸ್ಯೆಯನ್ನು ಆಲಿಸಿಲ್ಲ ಎಂದು ಧರಣಿ ನಿರತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ದಶಕಗಳ ಹಿಂದೆ ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನ ಮಾಡಿರುವ ಇಲ್ಲಿನ ಈದ್ಗಾ ಹಾಗೂ ಖಬರ್‌ಸ್ಥಾನದ 3 ಎಕರೆ ಭೂಮಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ಸ್ವಾಧೀನ ಮಾಡಿರುವ ಭೂಮಿಗೆ ಪರ್ಯಾಯವಾಗಿ ಬೇರೆ ಕಡೆ ಸೂಕ್ತ ಭೂಮಿಯನ್ನು ಒದಗಿಸಬೇಕು ಎಂದು ಧರಣಿ ನಿರತರ ಆಗ್ರಹವಾಗಿದೆ. ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನ ಮಾಡಿರುವ ಭೂಮಿಯನ್ನು ರಿಂಗ್ ನಿರ್ಮಾನಕ್ಕಾಗಿ ಸರಕಾರ ಸಾವಿರಾರು ಕೋಟಿ ರೂ. ಅನುದಾನವನ್ನು ಮೀಸಲಿಡುತ್ತಿದೆ. ಆದರೆ ಸ್ವಾಧೀನ ಮಾಡಿರುವ ಈದ್ಗಾ ಭೂಮಿಗೆ ಪರಿಹಾರ ನೀಡದೆ ಕ್ಷೇತ್ರದ ಮುಸ್ಲಿಮರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿರುವ ಧರಣಿ ನಿರತರು ಹಾಸರ ವಿಧಾನಸೌಭಾ ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚು ಮುಸ್ಲಿಮರಿದ್ದು ಚುನಾವಣೆ ಬಂದಾಗ ಮುಸ್ಲಿಮರತ್ತ ಓಡಿ ಬರುವ ಜಿಲ್ಲೆಯ ಜನಪ್ರತಿನಿಧಿಗಳು ಮುಸ್ಲಿಮರ ಸಮಸ್ಯೆಯನ್ನು ಆಲಿಸಿ ನ್ಯಾಯಯುಕ್ತ ಬೇಡಿಕೆಯನ್ನು ಈಡೇರಿಸದೆ ಮುಸ್ಲಿಮರನ್ನು ಬರೇ ಚುನಾವಣೆಗಳಿಗೆ ಮಾತ್ರ ಬಳಸುತ್ತಿದೆ ಎಂದು ಆರೋಪಿಸಿದ್ದಾರೆ. ಈದ್ಗಾ ಭೂಮಿ ಹೋರಾಟಕ್ಕೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ.

ಅಲ್ಲದೆ ಕ್ಷೇತ್ರದ ಶಾಸಕ ಪ್ರೀತಂ ಗೌಡ ಅವರು ಕೂಡಾ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಇದನ್ನು ಸಹಿಸದ ಜಿಲ್ಲೆಯ ಕೆಲವು ರಾಜಕಾರಣಿಗಳು ಈ ಹೋರಾಟ ರಾಜಕೀಯ ಪ್ರೇರಿತ ಎಂದು ಆರೋಪಿಸುತ್ತಿದ್ದಾರೆ. ಹೀಗೆ ಆರೋಪ ಮಾಡುವವರು ಮೊದಲು ನಮ್ಮ ಬೇಡಿಕೆಯನ್ನು ಈಡೇರಿಸಲಿ. ಬಳಿಕ ನಾವು ಹೋರಾಟವನ್ನು ಕೈಬಿಡುತ್ತೇವೆ. ಬಳಿಕ ಈ ಬಗ್ಗೆ ಯಾವುದೇ ರಾಜಕೀಯ ನಡೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಈದ್ ನಮಾಝ್, ಮೀಲಾದುನ್ನಬಿ ಹಾಗೂ ಇತರ ಧಾರ್ಮಿಕ ಸಭೆ ಸಮಾರಂಭ ನಡೆಸಲು ಇಲ್ಲಿನ ಮುಸ್ಲಿಮರಿಗೆ ಇದೊಂದೇ ಆಸ್ತಿಯಾಗಿದೆ. ಅಲ್ಲದೆ ಮೃತರಾದ ಮುಸ್ಲಿಮರ ಅಂತ್ಯಸಂಸ್ಕಾರಗಳು ಕೂಡಾ ಇಲ್ಲಿಯೇ ನಡೆಯುತ್ತದೆ. ಇನ್ನು ಕೆಲವು ಸಮಯ ಕಳೆದರೆ ಅಂತ್ಯಸಂಸ್ಕಾರಕ್ಕೂ ಜಾಗ ಇಲ್ಲದಾಗುತ್ತದೆ. ಹಾಗಾಗಿ ಸರಕಾರ ನಗರದ ವ್ಯಾಪ್ತಿಯಲ್ಲಿ ಕನಿಷ್ಟ 5 ಎಕರೆ ಜಮೀನನ್ನು ಮಂಜೂರು ಮಾಡಬೇಕು ಎಂದು ಧರಣಿ ನಿರತರು ಆಗ್ರಹಿಸಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೆ ನಾವು ಹೋರಾಟವನ್ನು ಮುಂದುವರಿಸುತ್ತೇವೆ. ಈ ಬಗ್ಗೆ ಯಾರು ಯಾವುದೇ ಅಪಚಾರ ಮಾಡಿದರೂ ಹೋರಾಟವನ್ನು ನಿಲ್ಲಿಸುವುದಿಲ್ಲ. ಸಮಸ್ಯೆ ಪರಿಹಾರವಾದ ಬಳಿಕವಷ್ಟೇ ಹೋರಾಟ ಕೈಬಿಡಲಾಗುವುದು ಎಂದು ಧರಣಿ ನಿರತರು ಎಚ್ಚರಿಕೆ ನೀಡಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಮುಸ್ಲಿಮರ ಪರವಾಗಿ ದ್ವನಿ ಎತ್ತಲು ಒಬ್ಬ ನಾಯಕ ಇಲ್ಲದಿರುವುದೇ ಇಂತಹ ಪರಿಸ್ಥಿತಿಗೆ ಕಾರಣ. ಅಧಿವೇಶನ ಆರಂಭವಾಗಿರುವುದು 7 ದಿನಗಳ ಹಿಂದೆ. ಅದರ ನಡುವೆ ಎರಡು ದಿನ ಅಧಿವೇಶನ ಇರಲಿಲ್ಲ. ಈ ಸಮಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿಲ್ಲೆಗೆ ಬಂದು ಹೋಗಿದ್ದಾರೆ. ಆದರೂ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸುವ ಕೆಲಸ ಮಾಡಿಲ್ಲ. ಚುನಾವಣೆಗಳು ಬಂದಾಗ ರಾಜಕಾರಣಿಗಳಿಗೆ ಬೇಕಾಗುವ ಮುಸ್ಲಿಮರು ಚುನಾವಣೆ ಮುಗಿದ ಬಳಿಕ ಅಗತ್ಯ ಇರುವುದಿಲ್ಲ. 

ಅಬ್ದುಲ್ ಸಮದ್, ಸಮಾಜಿಕ ಕಾರ್ಯಕರ್ತ

 ರಸ್ತೆಗಾಗಿ ಜಮೀನು ಈದ್ಗಾ ಭೂಮಿಯನ್ನು ಸ್ವಾಧೀನ ಮಾಡಿ 23 ವರ್ಷ ಕಳೆದರೂ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದರೆ ಏನು ಅರ್ಥ. ಪರಿಹಾರಕ್ಕಾಗಿ ಹೋರಾಟ ಮಾಡುವವರನ್ನು ವಿರೋಧಿಸುವವರು ಸಮಸ್ಯೆಯ ಪರಿಹಾರಕ್ಕೆ ಯಾಕೆ ಪ್ರಯತ್ನ ಮಾಡುತ್ತಿಲ್ಲ. ಹೋರಾಟ ನ್ಯಾಯ ಸಮ್ಮತವಾಗಿದ್ದು ಪರಿಹಾರ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು.

 ಮುಬಶಿರ್ ಅಹಮದ್, ಹೋರಾಟಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News