ಪುಲ್ವಾಮದಲ್ಲಿ ಯೋಧರ ಮೇಲೆ ಉಗ್ರರ ದಾಳಿಗೆ ಎಸ್‌ಡಿಪಿಐ ಖಂಡನೆ

Update: 2019-02-15 15:09 GMT

ಬೆಂಗಳೂರು, ಫೆ.15: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಭಾರತೀಯ ಯೋಧರ ಮೇಲೆ ನಡೆದ ಉಗ್ರರ ದಾಳಿಯನ್ನು ಖಂಡಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಕೇಂದ್ರದ ಮೋದಿ ಸರಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದೆ.

ಈ ಕುರಿತು ಶುಕ್ರವಾರ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ, ಈ ರೀತಿಯ ಭೀಕರ ದಾಳಿ ನಡೆದಿರುವುದಕ್ಕೆ ತಮಗೆ ತೀವ್ರ ಆಘಾತ ಹಾಗೂ ನೋವು ಉಂಟಾಗಿದೆ. ಇಂತಹ ದಾಳಿ ನಡೆಯದಂತೆ ಮಾಡಲು ಭಾರತೀಯ ಸೇನೆ ತನ್ನೆಲ್ಲಾ ಶಕ್ತಿಯನ್ನು ಬಳಸಿ ಇಂತಹ ಕೃತ್ಯಗಳನ್ನು ಕೊನೆಗೊಳಿಸಬೇಕು ಎಂದಿದ್ದಾರೆ.

2,500 ಸಿಆರ್‌ಪಿಎಫ್ ಯೋಧರು ಪ್ರಯಾಣಿಸುವಾಗ ಅವರಿಗೆ ಏಕೆ ಸರಿಯಾದ ಸುರಕ್ಷತೆಯನ್ನು ಒದಗಿಸಿಲ್ಲ. ಸಿಆರ್‌ಪಿಎಫ್‌ನ ಮುಂದೆ ಮತ್ತು ಹಿಂದೆ ಹೆದ್ದಾರಿಯಲ್ಲಿ ಪ್ರಯಾಣಿಸುವ ಎಲ್ಲ ವಾಹನಗಳು ಮತ್ತು ವ್ಯಕ್ತಿಗಳನ್ನು ಪರಿಶೀಲಿಸಲು ರಾಷ್ಟ್ರೀಯ ಹೆದ್ದಾರಿಯಲ್ಲಿ ತಪಾಸಣಾ ಕೇಂದ್ರಗಳನ್ನು ಏಕೆ ನಿರ್ಮಿಸಿಲ್ಲ. ಗುಪ್ತಚರ ಮತ್ತು ರಾ ಸಂಸ್ಥೆಗಳಿಗೆ ಶಂಕಿತ ಉಗ್ರರ ಚಲನವಲನಗಳನ್ನು ಪತ್ತೆ ಹೆಚ್ಚಲು ಏಕೆ ಸಾಧ್ಯವಾಗಿಲ್ಲ ಎಂದು ಫೈಝಿ ಪ್ರಶ್ನೆ ಮಾಡಿದ್ದಾರೆ.

ಕಣಿವೆಯ ಜನರೊಂದಿಗೆ ರಾಜಕೀಯ ಮಾತುಕತೆ ನಡೆಸಲು ಸ್ಥಾಪಿಸಿದ ಸಮಿತಿ ಏನಾಯಿತು. ಈ ಪ್ರಶ್ನೆಗಳಿಗೆ ಪ್ರಧಾನಿ ಕಾರ್ಯಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ಉತ್ತರಿಸಬೇಕು. ಇಡೀ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಮತ್ತು ಇಂತಹ ದಾಳಿಗಳು ಭವಿಷ್ಯದಲ್ಲಿ ಮರುಕಳಿಸದಂತೆ ಬೇಕಾದ ಎಲ್ಲ ಅಗತ್ಯ ಕ್ರಮಗಳನ್ನು ತಕ್ಷಣ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News