ಹುತಾತ್ಮ ಯೋಧರಿಗೆ ಕರ್ನಾಟಕ ಹೈಕೋರ್ಟ್‌ನಲ್ಲಿ ಶ್ರದ್ಧಾಂಜಲಿ

Update: 2019-02-15 16:04 GMT

ಬೆಂಗಳೂರು, ಫೆ.15: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ವಕೀಲರು, ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಅವಂತಿಪೋರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸಿಆರ್‌ಪಿಎಫ್ ಪಡೆಯ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಿದರು.    

ಶುಕ್ರವಾರ ಹೈಕೋರ್ಟ್‌ನ ಸಭಾಂಗಣ-1ರಲ್ಲಿ ಬೆಂಗಳೂರು ವಕೀಲರ ಸಂಘ ಆಯೋಜಿಸಿದ್ದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅವರು, ಉಗ್ರರ ದಾಳಿ ಖಂಡನಾರ್ಹವಾದದ್ದು, ಸೈನಿಕರು ಮತ್ತವರ ಕುಟುಂಬದ ಜೊತೆಗೆ ಇಡೀ ದೇಶ ನಿಲ್ಲಬೇಕಿದೆ ಎಂದು ಹೇಳಿದರು. ಹಾಲಿ ಮತ್ತು ಮಾಜಿ ಸೈನಿಕರು ನ್ಯಾಯಾಲಯಕ್ಕೆ ಸಲ್ಲಿಸುವ ಅರ್ಜಿಯನ್ನು ನ್ಯಾಯಾಧೀಶರು ಮೊದಲ ಆದ್ಯತೆ ಮೇರೆಗೆ ವಿಚಾರಣೆ ನಡೆಸಿ ತ್ವರಿತವಾಗಿ ಇತ್ಯರ್ಥಪಡಿಸಬೇಕು. ಅಲ್ಲದೆ, ವಕೀಲರೂ ಸೈನಿಕರಿಂದ ಶುಲ್ಕ ಪಡೆಯದೆ ಉಚಿತವಾಗಿ ವಕಾಲತ್ತು ವಹಿಸಿ ಅವರ ಪರ ವಾದ ಮಂಡಿಸಬೇಕು. ಅದುವೇ ನಾವು ಯೋಧರಿಗೆ ಸಲ್ಲಿಸುವ ಅತಿದೊಡ್ಡ ಸೇವೆ ಎಂದು ಸಲಹೆ ನೀಡಿದರು.

ಎರಡು ನಿಮಿಷ ಮೌನಾಚರಣೆ ಮಾಡುವ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News