ಸಿದ್ದಾಪುರ: ಯುನೈಟೆಡ್ ಮುಸ್ಲಿಂ ಸಂಘಟನೆಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಭೆ

Update: 2019-02-15 16:15 GMT

ಸಿದ್ದಾಪುರ (ಕೊಡಗು), ಫೆ.15: ಕಾಶ್ಮೀರದಲ್ಲಿ ಉಗ್ರರ ದಾಳಿಗೆ ಬಲಿಯಾದ ಯೋಧರಿಗೆ ನಮನ ಸಲ್ಲಿಸುವ ಸಲುವಾಗಿ ಸ್ಥಳೀಯ ಯುನೈಟೆಡ್ ಮುಸ್ಲಿಂ ಸಂಘಟನೆಯ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಸೇರಿ ಶ್ರದ್ಧಾಂಜಲಿ ಸಭೆ ನಡೆಸಿದರು. 

ಇಲ್ಲಿಯ ಬಸ್ ನಿಲ್ದಾಣದಲ್ಲಿ ಜಮಾಯಿಸಿದ ಪ್ರಮುಖರು ಹುತಾತ್ಮರ ಆತ್ಮಕ್ಕೆ ಶಾಂತಿ ಕೋರಿ ಮೌನ ಪ್ರಾರ್ಥನೆ ಸಲ್ಲಿಸಿದರು.

ಗ್ರಾ.ಪಂ ಅಧ್ಯಕ್ಷ ಎಂ.ಕೆ ಮಣಿ ಮಾತನಾಡಿ, ದೇಶದ ರಕ್ಷಣೆಯ ಬೆನ್ನೆಲುಬಾಗಿ ನಿಂತಿರುವ ವೀರ ಯೋಧರ ಮೇಲೆ ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದಿದ್ದು, ರಾಜ್ಯದ ಯೋಧ ಸೇರಿದಂತೆ 40ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿರುವುದು ವಿಷಾದನೀಯ. ಇಂತಹ ಘಟನೆಗಳು ಮರುಕಳಿಸದಂತೆ ಸರಕಾರ ದಿಟ್ಟ ಹೆಜ್ಜೆ ಇಡಬೇಕಾಗಿದೆ ಎಂದರು.

ಸಾಮಾಜಿಕ ಹೋರಾಟಗಾರ ಪಿ.ಆರ್ ಭರತ್ ಮಾತನಾಡಿ, ದೇಶದ ಯೋದರ ಮೇಲೆ ನಡೆದಿರುವ ಭಯೋತ್ಪಾದಕರ ದಾಳಿ ಅತ್ಯಂತ ಖಂಡನೀಯ. ದೇಶದ ಗೆಡಿಯನ್ನು ಕಾಯುವ ಸೈನಿಕರಿಗೆ ಇವತ್ತು ರಕ್ಷಣೆ ಇಲ್ಲದಂತಾಗಿದೆ. ಗಡಿ ರಕ್ಷಣೆಗಾಗಿ ಶೇಕಡ 39 ರಷ್ಟು ಹಣವನ್ನು ವಿನಿಯೋಗಿಸಿದರೂ ಭಯೋತ್ಪಾದಕರು ಗಡಿಯೊಳಗೆ ಧೈರ್ಯವಾಗಿ ಒಳ ನುಗ್ಗುವ ಮಟ್ಟಕ್ಕೆ ದೇಶ ತಲುಪಿರುವುದು ದೊಡ್ಡ ದುರಂತ. ರಫೇಲ್ ಹಗರಣದ ಬಗ್ಗೆ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ಕೆಲವೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ಸಹ ನಡೆಯಲಿರುವುದರಿಂದ ಈ ದಾಳಿಯ ಬಗ್ಗೆ ಜನರಲ್ಲಿ ಹಲವು ಸಂಶಯಗಳು ಕಾಡತೊಡಗಿದೆ. ಈ ದಾಳಿಯ ಬಗ್ಗೆ ಸರಕಾರ ಸಮಗ್ರ ತನಿಖೆ ನಡೆಸಬೇಕು. ಆಳುವ ವರ್ಗ ದೇಶದೊಳಗೆ ಜಾತಿ, ಧರ್ಮದ ಹೆಸರಿನಲ್ಲಿ ಸಂಘರ್ಷಗಳನ್ನು ಮಾಡುವುದನ್ನು ಬಿಟ್ಟು ದೇಶದಲ್ಲಿರುವ ಎಲ್ಲಾ ಜನಾಂಗವನ್ನು ಒಟ್ಟುಗೂಡಿಸಲು ಮುಂದಾಗಬೇಕು. ಭಯೋತ್ಪಾದಕರನ್ನು ಹಾಗೂ ಶತ್ರು ಸೈನ್ಯವನ್ನು ಬಗ್ಗು ಬಡಿಯಲು ಇರುವ ವ್ಯವಸ್ಥೆಯನ್ನು ಸರಕಾರ ಮಾಡಬೇಕೆಂದರು.

ಸಾಮಾಜಿಕ ಕಾರ್ಯಕರ್ತ ಎ.ಎಸ್ ಮುಸ್ತಫ, ದೇಶದ ಯೋಧರ ಮೇಲೆ ನಡೆದಿರುವ ದಾಳಿ ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದಿರುವ ದಾಳಿಯಾಗಿದೆ. ಹುತಾತ್ಮ ಯೋಧರ ಕುಟುಂಬಕ್ಕೆ ಸ್ಥೈರ್ಯ ತುಂಬಲು ಪ್ರತಿಯೊಬ್ಬರೂ ಮುಂದಾಗಬೇಕಾಗಿದೆ ಎಂದರು.

ಈ ಸಂದರ್ಭ ಯುನೈಟೆಡ್ ಮುಸ್ಲಿಂ ಸಂಘಟನೆಯ ಅಧ್ಯಕ್ಷ ಕೆ.ಯು ಮಜೀದ್, ತಾ.ಪಂ ಸದಸ್ಯೆ ಚಿನ್ನಮ್ಮ, ಪ್ರಮುಖರಾದ ಕೆ.ಎ ಅಸ್ಕರ್, ಎಂ.ಎಸ್ ಶಾಹಿನುಲ್ಲಾ, ಶೌಕತ್ ಅಲಿ, ಪ್ರೇಮ, ಬಶೀರ್, ಅಶ್ರಫ್, ಅಬ್ದುಲ್ ಶುಕೂರ್, ಎನ್.ಡಿ ಕುಟ್ಟಪ್ಪ, ಮುಹಮ್ಮದ್, ಮೂಸಾ, ಮಹದೇವ, ಪ್ರತೀಶ ಸೇರಿದಂತೆ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News