ಪತ್ನಿ ಹಂತಕನಿಗೆ ಜೀವಾವಧಿ ಶಿಕ್ಷೆ

Update: 2019-02-15 17:32 GMT

ದಾವಣಗೆರೆ,ಫೆ.15: ಪತ್ನಿಗೆ ದೈಹಿಕ, ಮಾನಸಿಕ ಹಿಂಸೆ ನೀಡುವ ಮೂಲಕ ಆಕೆಯನ್ನು ಕೊಲೆ ಮಾಡಿದ್ದ ಆರೋಪಿ ಪತಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 23 ಸಾವಿರ ರೂ. ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಹರಪನಹಳ್ಳಿ ತಾಲೂಕಿನ ಹೊಂಬಳಘಟ್ಟ ಗ್ರಾಮ ನಿವಾಸಿ, ಸೈನಿಕ ಮಂಜುನಾಥ (31) ಶಿಕ್ಷೆಗೆ ಗುರಿಯಾದ ಆರೋಪಿ. ಜಗಳೂರು ತಾ. ತಾರೇಹಳ್ಳಿ ಗ್ರಾಮದ ನಾಗಪ್ಪ ಎಂಬುವರ ಮಗಳಾದ ಅನುರಾಧ ಅಲಿಯಾಸ್ ಪೂರ್ಣಿಮಾಳನ್ನು 2013ರಲ್ಲಿ ಮಂಜುನಾಥ ಮದುವೆಯಾಗಿದ್ದು, ಈ ದಂಪತಿಗೆ 1 ಗಂಡು ಮಗುವಿದೆ.

ಮದುವೆಗೆ ಮುಂಚೆ ಅನುರಾದ ಪಡೆದಿದ್ದ ಶೈಕ್ಷಣಿಕ ಸಾಲ ತಾನೇ ಭರಿಸುವುದಾಗಿ ಹೇಳಿ ಸೈನಿಕ ಮಂಜುನಾಥ ಮದುವೆಯಾಗಿದ್ದನು. ನಂತರ ತಾನು ಪತ್ನಿಯ ಶಿಕ್ಷಣ ಸಾಲ ತೀರಿಸಲಾರದೇ ಆಕೆಗೆ ದೈಹಿಕ, ಮಾನಸಿಕ ಹಿಂಸೆ ನೀಡುತ್ತಿದ್ದ ಎನ್ನಲಾಗಿದ್ದು, ಅನುರಾಧ ತನ್ನ ಗಂಡನ ಮನೆಯಲ್ಲಿ ಅಸ್ವಾಭಾವಿಕ ಮರಣ ಹೊಂದಿದ್ದಳು. ಈ ವಿಷಯ ಮುಚ್ಚಿ ಹಾಕಲು ಅನುರಾಧಳಿಗೆ ಮೂರ್ಛೆ ರೋಗ ಬರುತ್ತಿತ್ತೆಂದು ಆರೋಪಿ ಮಂಜುನಾಥ ಸುಳ್ಳು ಹೇಳಿ ಕೊಲೆ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದನು ಎಂದು ಹೇಳಲಾಗಿದೆ.

ಹರಪನಹಳ್ಳಿ ಡಿಎಸ್ಪಿ ಪಾಂಡುರಂಗಯ್ಯ ಪ್ರಕರಣದ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸುಧೀರ್ಘ ವಿಚಾರಣೆ ನಡೆದು, ನ್ಯಾಯಾಧೀಶರಾದ ಕುಲಕರ್ಣಿ ಅಂಬಾದಾಸ್ ಅವರು ಅನುರಾಧ ಅಲಿಯಾಸ್ ಪೂರ್ಣಿಮಾಳದ್ದು ಆತ್ಮಹತ್ಯೆಯಲ್ಲ. ಅದು ಕೊಲೆ ಎಂಬುದಾಗಿ ಸಾಕ್ಷ್ಯಾಧಾರಗಳಿಂದ ಸಾಬೀತಾಗಿದೆಯೆಂದು ತೀರ್ಮಾನಿಸಿ, ಅಪರಾಧಿ ಪತಿ ಮಂಜುನಾಥನಿಗೆ ಜೀವಾವಧಿ ಕಾರಾಗೃಹ ವಾಸ ಹಾಗೂ 23 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದರು. ಸರ್ಕಾರದ ಪರ ಸರ್ಕಾರಿ ಅಭಿಯೋಜಕ ಎಸ್.ವಿ. ಪಾಟೀಲ್ ವಾದ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News