ಬಂಜಾರ ಸಮಾಜ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕು: ಸಂಸದ ಜಿ.ಎಂ ಸಿದ್ದೇಶ್ವರ

Update: 2019-02-15 17:37 GMT

ದಾವಣಗೆರೆ,ಫೆ.15: ಸಮಾಜದಲ್ಲಿ ಮತ್ತೊಬ್ಬರಿಗೆ ತೊಂದರೆ ಕೊಡದೆ ಕೃಷಿ, ಕೂಲಿ ಕೆಲಸ ಮಾಡಿಕೊಂಡು ಸ್ವಾಭಿಮಾನದಿಂದ ಬದುಕು ಸಾಗಿಸುತ್ತಿರುವ ಸಮುದಾಯವೆಂದರೆ ಅದು ಬಂಜಾರ ಸಮುದಾಯ. ಈ ಸಮುದಾಯದ ಜನರು ಹೆಚ್ಚು ಸುಶಿಕ್ಷಿತ ಸಮುದಾಯವಾಗಿ ರೂಪುಗೊಳ್ಳಬೇಕು ಎಂದು ಸಂಸ ಜಿ.ಎಂ. ಸಿದ್ದೇಶ್ವರ ಆಶಿಸಿದರು.

ಜಿಲ್ಲಾಡಳಿತ ದಾವಣಗೆರೆ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಬೆಂಗಳೂರು ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಬಾಯಾಗಢ್‍ನಲ್ಲಿ ಏರ್ಪಡಿಸಿದ್ದ ಸಂತ ಸೇವಾಲಾಲ್‍ರವರ 280ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದ ಈ ಸ್ಥಳವು ಇಂದು ರಾಷ್ಟ್ರೀಯ ಸ್ಮಾರಕವಾಗಿದೆ. ಇಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸ ಕಾರ್ಯಗಳಾಗಬೇಕಿದ್ದು ಅದಕ್ಕೆ ಮುಂದಿನ ದಿನಗಳಲ್ಲಿ ಬೇಕಾದ ಅನುದಾನ ಒದಗಿಸಲು ಪ್ರಯತ್ನಿಸುತ್ತೇನೆ. ಮುಂದಿನ ದಿನಗಳಲ್ಲಿ ಇದೊಂದು ಸಂತ ಸೇವಾಲಾಲ್ ಅವರ ರಾಷ್ಟ್ರೀಯ ಸ್ಮಾರಕವಾಗಿ ಇಡೀ ಪ್ರಪಂಚದಾದ್ಯಂತ ಗುರುತಿಸಲ್ಪಡುತ್ತದೆ ಎಂದು ಅಭಿಪ್ರಾಯಪಟ್ಟರು.

ಇಲ್ಲಿ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡ ನಂತರ ಇದೊಂದು ಪ್ರವಾಸೋದ್ಯಮ ಕೇಂದ್ರವಾಗಿ ಹೊರಹೊಮ್ಮಲಿದೆ. ಈ ಜನಾಂಗದ ಬಹತೇಕರು ಸಮಾಜದಲ್ಲಿ ಗೌರವದಿಂದ ಕೃಷಿ, ಕೂಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ವಿದ್ಯಾವಂತರು ಪ್ರಸ್ತುತಕ್ಕೆ ತಕ್ಕಂತೆ ಬುದ್ದಿವಂತರಾಗುತ್ತಿದ್ದಾರೆ. ಮಾಜಿ ಮುಖ್ಯ ಮಂತ್ರಿಗಳು ಬಂಜಾರ ಅಭಿವೃದ್ಧಿ ನಿಗಮ ಮಾಡಿ ಈ ಜನಾಂಗದ ಸರ್ವೋತೋಮುಖ ಅಭಿವೃದ್ಧಿಗೆ ಸಹಕರಿಸಿದ್ದಾರೆ. ಪ್ರಸ್ತುತ ಮತ್ತು ಹಿಂದಿನ ಶಾಸಕರು ಕೂಡ ಅಗತ್ಯ ಅನುದಾನ ನೀಡಿ ಈ ಸ್ಥಳದ ಅಭಿವೃದ್ಧಿಯಲ್ಲಿ ಪಾಲ್ಗೋಂಡಿದ್ದಾರೆ ಎಂದ ಅವರು, ಬಂಜಾರ ಸಮಾಜ ದೊಡ್ಡ ಸಮಾಜ. ಸೂರಗೊಂಡನಕೊಪ್ಪದ ಭಾಯಾಗಡ್ ಒಂದು ಪುಣ್ಯಕ್ಷೇತ್ರ. ಸಂತ ಸೇವಾಲಾಲರ ಜನ್ಮ ದಾವಣಗೆರೆ ಜಿಲ್ಲೆಯಲ್ಲಿಯಾದರೆ ಅವರ ಅಂತ್ಯಕ್ರಿಯೆ ಆಗಿದ್ದು ಮಹಾರಾಷ್ಟ್ರದ ವಾಸಿಂ ಜಿಲ್ಲೆಯ ಅಕ್ಕಂ ತಾಲೂಕಿನಲ್ಲಿ ಎಂದರು.

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಸಂಸದನಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದು ಪುಣ್ಯದ ಕೆಲಸ. ಅತ್ಯಂತ ನಂಬಿಕೆ ಮತ್ತು ವಿಶ್ವಾಸಕ್ಕೆ ಹೆಸರಾದ ಸಮುದಾಯವಾಗಿದೆ ಎಂದರು.

ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿಯ ಪೋಷಕ ಸದಸ್ಯ ಹೀರಾನಾಯ್ಕ್ ಪ್ರಾಸ್ತಾವಿಕ ಮಾತನಾಡಿ, ಸಂತ ಸೇವಾಲಾಲ್‍ರರು ಫೆ.15, 1739 ರಲ್ಲಿ ಜನಿಸಿದ ಬಗ್ಗೆ ಸಂಶೋಧನೆ ದೃಢಪಡಿಸಿದೆ. 1982ರಲ್ಲಿ ಸಂತ ಸೇವಾಲಾಲ್ ಸಮಿತಿ ಸ್ಥಾಪನೆಯಾಗಿ ಸಮಾಜದ ಅಭಿವೃದ್ಧಿಗೆ ಪ್ರಯತ್ನ ಪ್ರಾರಂಭಿಸಿತು. ಸರ್ಕಾರದ ಉದಾರವಾದ ಅನುದಾನ ಹಾಗೂ ಶಾಸಕರ, ಜನಪ್ರತಿನಿಧಿಗಳ ಉದಾತ್ತ ಸಹಕಾರದೊಂದಿಗೆ ಸೇವಾಲಾಲ್ ಕ್ಷೇತ್ರ ಕ್ಷಿಪ್ರವನ್ನು ಅಭಿವೃದ್ದಿ ಹೊಂದಿದೆ. ಸಂತ ಸೇವಾಲಾಲರು ಒಬ್ಬ ದಾರ್ಶನಿಕರು, ಅವರ ಅನುಗ್ರಹ ಈ ಕ್ಷೇತ್ರ ಹಾಗೂ ನಮ್ಮೆಲ್ಲರ ಮೇಲಿದೆ. ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆಯಬೇಕೆಂದರು.

ಇದೇ ಸಂದರ್ಭ ಸಂತ ಸೇವಾಲಾಲ್‍ರವರ ಚರಿತ್ರೆವುಳ್ಳ ಪುಸ್ತಕವನ್ನು ವೇದಿಕೆಯಲ್ಲಿ ಗಣ್ಯರು ಬಿಡುಗಡೆ ಮಾಡಿದರು. ನಂತರ ಬಾಯಾಗಢ್‍ನಲ್ಲಿ ಅತಿಥಿ ಗೃಹ ಮತ್ತು ಧರ್ಮಶಾಲಾ ಕಟ್ಟಡಗಳ ಶಿಲಾನ್ಯಾಸ ನೇರವೇರಿಸಿದರು.

ಸೇವಾಲಾಲ್‍ರವರ ಜಯಂತಿ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಅಪಾರ ಮಾಲಾಧಾರಿ ಭಕ್ತರು ಪಾದಯಾತ್ರೆ ಮೂಲಕ ಬಾಯಾಗಢ್ ಕ್ಷೇತ್ರಕ್ಕೆ ಬಂದು ಸೇವಲಾಲ್‍ರ ದರ್ಶನ ಮಡೆದು ಪೂಜಾ ಕೈಂಕರ್ಯ ಪಾಲ್ಗೊಂಡರು

ಮಾಜಿ ಸಚಿವರಾದ ರುದ್ರಪ್ಪ ಎಂ.ಲಮಾಣಿ, ಚನ್ನಗಿರಿ ಮಾಜಿ ಶಾಸಕ ಮಹಿಮಾ ಜಿ ಪಟೇಲ್, ಹೊನ್ನಾಳಿ ವಿಧಾನಸಭಾ ಮಾಜಿ ಶಾಸಕ ಶಾಂತನಗೌಡ, ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹೀರಾಲಾಲ್, ಹೊನ್ನಾಳಿ ತಾ.ಪಂ ಸದಸ್ಯ ಪೀರಾನಾಯ್ಕ್, ರೇಖಾ ಉಮೇಶ್, ಮಹಾಮಠ ಸಮಿತಿಯ ಅಧ್ಯಕ್ಷ ಎಲ್. ಈಶ್ವರ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ್,  ತ್ಯಾವರಾನಾಯ್ಕ್, ಹೊಳಲ್ಕೇರೆ ತಾಲೂಕಿನ ರೂಪ್ಲನಾಯ್ಕ್, ಹರಿಹರ ತಾಲೂಕಿನ ದೇವಕಿಬಾಯಿ ದಿ. ರುದ್ರನಾಯ್ಕ್, ಚಂದ್ರಮ್ಮ ಹಾಲೇಶಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News