ವಿದ್ಯಾರ್ಥಿಗಳ ವೀಡಿಯೋ ಮಾಡಿ ಹಣಕ್ಕೆ ಬೇಡಿಕೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Update: 2019-02-15 17:47 GMT

ದಾವಣಗೆರೆ,ಫೆ.15: ಪೊಲೀಸರು ಎಂದು ಪರಿಚಯಿಸಿ ಇಬ್ಬರು ವಿದ್ಯಾರ್ಥಿಗಳ ವೀಡಿಯೋ ಮಾಡಿಕೊಂಡು, ಹಣಕ್ಕೆ ಬೇಡಿಕೆ ಇಟ್ಟಿದ್ದ ಹರಿಹರ ತಾಲೂಕಿನ ಮಲೆಬೆನ್ನೂರಿನ ಪಟ್ಟಣದ ಇಬ್ಬರು ಆರೋಪಿಗಳನ್ನು ಪೋಕ್ಸೋ ಕಾಯ್ದೆಯಡಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ಹರಿಹರ ತಾಲೂಕು ಮಲೆಬೆನ್ನೂರು ಪಟ್ಟಣದ ಅರಳಹಳ್ಳಿ ರಸ್ತೆ ವಾಸಿ ಎಂ.ವಜೀರ್ ಬಾಷಾ(34) ವಾಲ್ಮೀಕಿ ನಗರ ತರಗಾರ ಕೆಲಸಗಾರ ಅಬ್ದುಲ್ ಕರೀಂ(32) ಬಂಧಿತ ಆರೋಪಿಗಳು. ಕಳೆದ ಭಾನುವಾರ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಹರಿಹರ ತಾಲೂಕಿನ ದೇವರ ಬೆಳಕೆರೆ ಡ್ಯಾಂ ಬಳಿ ಹೋಗಿದ್ದರು.

ಡ್ಯಾಂ ಬಳಿ ಅಂದು ಸಂಜೆ 6ರ ವೇಳೆ ವಿದ್ಯಾರ್ಥಿಗಳು ತಮ್ಮನ್ನು ಮೊಬೈಲ್‍ನಲ್ಲಿ ವ್ಯಕ್ತಿಯೊಬ್ಬ ವೀಡಿಯೋ ಚಿತ್ರೀಕರಣ ಮಾಡುತ್ತಿದ್ದ ಬಗ್ಗೆ ಪ್ರಶ್ನಿಸಿದ್ದಾರೆ. ಡ್ಯಾಂ ನೋಡಲು ಬಂದಿರುವುದಾಗಿ ವಿದ್ಯಾರ್ಥಿಗಳು ಹೇಳಿದಾಗ ವೀಡಿಯೋ ಮಾಡುತ್ತಿದ್ದ ವ್ಯಕ್ತಿ ನಮ್ಮ ಮೇಲಾಧಿಕಾರಿಗೆ ನಿಮ್ಮ ವೀಡಿಯೋ ಕೊಡಬಾರದೆಂದರೆ 10 ಸಾವಿರ ರೂ. ನೀಡಬೇಕು ಎಂಬುದಾಗಿ ಬೆದರಿಸಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು ತಮಗೆ ಪರಿಚಯಸ್ಥ ಹಿರಿಯ ವಿದ್ಯಾರ್ಥಿನಿಗೆ ಫೋನ್ ಮಾಡಿ, ವಿಷಯ ಮುಟ್ಟಿಸಿದ್ದಾರೆ. ಅದಾದ ಸ್ವಲ್ಪ ಹೊತ್ತಿನಲ್ಲೇ ಹಿರಿಯ ವಿದ್ಯಾರ್ಥಿನಿ ತನ್ನ ತಂದೆ ಸಮೇತ ಸ್ಥಳಕ್ಕೆ ಬಂದಿದ್ದಾರೆ. ಅದನ್ನು ನೋಡುತ್ತಿದ್ದಂತೆಯೇ ಪೊಲೀಸರೆಂದು ಹೇಳಿಕೊಂಡ ಇಬ್ಬರೂ ವ್ಯಕ್ತಿಗಳು ವಿದ್ಯಾರ್ಥಿಯ ಕೈಯಲ್ಲಿದ್ದ ವಾಚನ್ನು ಬಲವಂತವಾಗಿ ಕಿತ್ತುಕೊಂಡು ಓಡಿ ಹೋಗಿದ್ದಾರೆ. ನಂತರ ವಿದ್ಯಾರ್ಥಿಗಳು ಪಾಲಕರೊಂದಿಗೆ ಪೊಲೀಸ್ ಠಾಣೆಗೆ ತೆರಳಿ, ಈ ಕುರಿತು ದೂರು ನೀಡಿದ್ದರು.

ಆರೋಪಿಗಳ ಪತ್ತೆಗಾಗಿ ಎಸ್ಪಿ ಆರ್. ಚೇತನ್ ಮಹಿಳಾ ಠಾಣೆ ಪ್ರಭಾರ ಪೊಲೀಸ್ ನಿರೀಕ್ಷಕರು ಹಾಗೂ ಡಿಸಿಐಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಲಕ್ಷ್ಮಣ ನಾಯ್ಕ ನೇತೃತ್ವದ ವಿಶೇಷ ತಂಡ ಆರೋಪಿಗಳಿಗಾಗಿ ಜಾಲ ಬೀಸಿತ್ತು. ತಂಡವು ಎಂ. ವಜೀರ್ ಸಾಬ್ ಹಾಗೂ ಅಬ್ದುಲ್ ಕರೀಂ ಎಂಬಿಬ್ಬರು ಆರೋಪಿಗಳನ್ನು ಘಟನೆ ನಡೆದ 24 ಗಂಟೆಯಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳ ವಿರುದ್ಧ ಪೋಕ್ಸೋ ಸೇರಿದಂತೆ ವಿವಿಧ ಸೆಕ್ಷನ್‍ನಡಿ ಕೇಸ್ ದಾಖಲಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News