ಕಾಶ್ಮೀರದಲ್ಲಿ ಉಗ್ರರ ದಾಳಿ: ಹುತಾತ್ಮರಾದ ಯೋಧರಿಗೆ ಕಾಫಿನಾಡಿನ ಹಲವಡೆ ಸಂತಾಪ ಸಭೆ

Update: 2019-02-15 17:54 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು, ಫೆ.15: ಜಮ್ಮು ಕಾಶ್ಮೀರದ ಆವಂತಿಪೋರಾದಲ್ಲಿ ಉಗ್ರರು ಗುರುವಾರ ನಡೆಸಿದ ಪೈಶಾಚಿಕ ಕೃತ್ಯದಲ್ಲಿ ವೀರಮರಣ ಹೊಂದಿದ ಯೋಧರಿಗೆ ಕಾಫಿನಾಡಿನ ಜನತೆ ಕಂಬನಿ ಮಿಡಿಯುತ್ತಿದ್ದು, ಜಿಲ್ಲಾದ್ಯಂತ ಗುರುವಾರ ರಾತ್ರಿಯಿಂದಲೇ ಸಾರ್ವಜನಿಕರು, ಸಂಘಸಂಸ್ಥೆಗಳು ಮೊಂಬತ್ತಿ ಬೆಳಗುವ ಮೂಲಕ ಹುತಾತ್ಮ ವೀರಯೋದರಿಗೆ ಶ್ರದ್ದಾಂಜಲಿ ಸಭೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.  

ಗುರುವಾರ ಮಧ್ಯಾಹ್ನದ ವೇಳೆಗೆ ಉಗ್ರರ ಕೃತ್ಯದಿಂದ ಯೋಧರು ವೀರಮರಣ ಹೊಂದಿದ ಸುದ್ದಿ ತಿಳಿಯುತ್ತಿದ್ದಂತೆ ಜಿಲ್ಲೆಯ ಜನತೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಕೃತ್ಯ ಎಸಗಿದ ಉಗ್ರರಿಗೆ ತಕ್ಕ ಶಿಕ್ಷೆ ಆಗಬೇಕು. ಇಂತಹ ಕೃತ್ಯಕ್ಕೆ ಪ್ರಚೋದನೆ ನೀಡುವ ವಿರೋಧಿ ರಾಷ್ಟ್ರಕ್ಕೆ ತಕ್ಕ ಉತ್ತರ ನೀಡಬೇಕು. ಕೇಂದ್ರ ಸರಕಾರ ಕೂಡಲೇ ಪಾಕಿಸ್ತಾನದ ವಿರುದ್ಧ ಯುದ್ಧ ಘೋಷಣೆ ಮಾಡಬೇಕೆಂಬ ಆಕ್ರೋಶ ಭಾವನೆ ವ್ಯಕ್ತಪಡಿಸುತ್ತಿದ್ದಾರೆ.

ಗುರುವಾರ ಮಧ್ಯಾಹ್ನದಿಂದ ಶುಕ್ರವಾರ ಸಂಜೆಯವರೆಗೂ ಉಗ್ರರ ಕೃತ್ಯದ ವಿಷಯಗಳನ್ನು ತಿಳಿಯಲು ಸಾರ್ವಜನಿಕರು ಎಲ್ಲೆಂದರಲ್ಲಿ ಸುದ್ದಿವಾಹಿನಿಗಳ ಮೊರೆ ಹೋಗಿದ್ದು, ರಸ್ತೆ ಬದಿಯ ಅಂಗಡಿಗಳಲ್ಲಿ, ಹೊಟೇಲ್‍ಗಳಲ್ಲಿ ಸುದ್ದಿ ವಾಹಿನಿಗಳಲ್ಲಿ ಬಿತ್ತರವಾಗುತ್ತಿದ್ದ ಭಯೋತ್ಪಾದಕರ ಕೃತ್ಯ ಸಂಬಂಧಿ ಸುದ್ದಿಗಳನ್ನು ಜನತೆ ಕುತೂಹಲದಿಂದ ನೋಡುತ್ತಿದ್ದ ದೃಶ್ಯಗಳು ಕಂಡು ಬಂದವು. ಟಿವಿಗಳಲ್ಲಿ ಬಿತ್ತರವಾಗುತ್ತಿದ್ದ ಹುತಾತ್ಮ ಯೋಧರ ಕುಟುಂಬದವರ ಆಕ್ರಂದನ, ಅನಾಥರಾದ ಯೋಧರ ಮಕ್ಕಳ ಕಂಡು ಮರುಕ ವ್ಯಕ್ತಪಡಿಸುತ್ತಿದ್ದ ದೃಶ್ಯ, ಅಂಗಡಿ, ಹೋಟೆಲ್‍ಗಳಲ್ಲಿ ಸಾಮಾನ್ಯವಾಗಿತ್ತು. 

ಸಂಘ ಸಂಸ್ಥೆಗಳಿಂದ ಸಂತಾಪ, ಶ್ರದ್ಧಾಂಜಲಿ:

ಜಮ್ಮು ಕಾಶ್ಮೀರದ ಆವಂತಿಪೋರಾದಲ್ಲಿ ಉಗ್ರರು ನಡೆಸಿದ ಪೈಶಾಚಿಕ ಕೃತ್ಯದ ವಿರುದ್ಧ ಮಲೆನಾಡು ಜನತೆ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಶ್ರೀರಾಮಸೇನೆ, ವಿಶ್ವ ಹಿಂದೂ ಪರಿಷತ್ ಬಜರಂಗದಳ, ಸತಾ ಸಮಾಜ, ಜನಸೇನಾ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಅನೇಕ ಸಂಘಸಂಸ್ಥೆಗಳು ಉಗ್ರರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದವು. ಇಂತಹ ಕೃತ್ಯ ಖಂಡನೀಯ, ಇಂತಹ ಹೇಯ ಕೃತ್ಯ ಎಸಗಿದ ಉಗ್ರರಿಗೆ ಕೇಂದ್ರ ಸರಕಾರ ತಕ್ಕಪಾಠ ಕಲಿಸಬೇಕು. ಕೇಂದ್ರ ಸರಕಾರ ಕೈಗೊಳ್ಳುವ ನಿರ್ಧಾರಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದರು.

ಜಿಲ್ಲಾದ್ಯಂತ ಕಂಬನಿ: 
ಜಿಲ್ಲೆಯ ಚಿಕ್ಕಮಗಳೂರು, ಕಳಸ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ, ಕಡೂರು, ತರೀಕೆರೆ, ಮೂಡಿಗೆರೆ, ಬಣಕಲ್, ಗೋಣಿಬೀಡು, ಆಲ್ದೂರಿನಲ್ಲಿ ಸಾರ್ವಜನಿಕರು, ರಾಜಕೀಯ ಪಕ್ಷಗಳು, ವಿವಿಧ ಸಂಘ ಸಂಸ್ಥೆಗಳು, ವಿವಿಧ ಕನ್ನಡ ಪರ ಸಂಘಟನೆಗಳು ಶ್ರದ್ದಾಂಜಲಿ ಅರ್ಪಿಸುವ ಮೂಲಕ ವೀರ ಯೋಧರಿಗೆ ನಮನ ಸಲ್ಲಿಸಿದರು. ಅನೇಕ ಸಂಘ ಸಂಸ್ಥೆಗಳ ಕಾರ್ಯಕರ್ತರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಗುರುವಾರ ರಾತ್ರಿ ಕ್ಯಾಂಡಲ್ ದೀಪ ಹಿಡಿದು ಯೋಧರಿಗೆ ಶ್ರದ್ದಾಂಜಲಿ ಅರ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News