ಹುತಾತ್ಮ ಯೋಧನ ಕುಟುಂಬಕ್ಕೆ ಜಮೀನು ನೀಡಿದ ಸುಮಲತಾ ಅಂಬರೀಶ್

Update: 2019-02-16 14:03 GMT

ಬೆಂಗಳೂರು, ಫೆ.16: ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವೀರ ಯೋಧ ಗುರು ಅಂತ್ಯಸಂಸ್ಕಾರ ಸ್ಥಳದ ಕುರಿತಂತೆ ಕೆಲ ಗೊಂದಲ ಉಂಟಾಗಿತ್ತು.

ಈ ಹಿನ್ನೆಲೆಯಲ್ಲಿ ಹಿರಿಯ ನಟಿ ಸುಮಲತಾ ಅಂಬರೀಶ್ ಯೋಧನ ಅಂತ್ಯಸಂಸ್ಕಾರಕ್ಕೆ ತಮ್ಮ ಕುಟುಂಬಕ್ಕೆ ಸೇರಿದ ಅರ್ಧ ಎಕರೆ ಜಮೀನನ್ನು ನೀಡಲು ಮುಂದಾಗಿದ್ದರು. ಆದರೆ, ಕಡೇ ಗಳಿಗೆಯಲ್ಲಿ ಅಂತ್ಯಕ್ರಿಯೆಯನ್ನು ಸರಕಾರಿ ಜಮೀನಿನಲ್ಲಿ ನಡೆಸಲು ನಿರ್ಧರಿಸಲಾಯಿತು.

ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಹೇಳಿಕೆ ನೀಡಿರುವ ಸುಮಲತಾ ಅಂಬರೀಶ್, ನಮ್ಮ ನೆಲದ ಸೈನಿಕ ಹುತಾತ್ಮ ಆದ ಸುದ್ದಿ ಕೇಳಿ ನನಗೆ ದುಃಖ ಆಗಿದೆ. ಸೈನಿಕನ ಅಂತ್ಯಸಂಸ್ಕಾರಕ್ಕೂ ಜಾಗ ನಿಗದಿ ಆಗಿಲ್ಲ ಅಂತಾ ಕೇಳಿ ಬೇಸರ ಆಯ್ತು. ಆಗ ನನಗನಿಸಿದ್ದು, ಮಂಡ್ಯದ ಗಂಡು, ಹುತಾತ್ಮ ಸೈನಿಕನಿಗೆ ನಾವು ಇಂತಹ ಅವಮಾನ ಮಾಡಬಾರದು. ಹೀಗಾಗಿ ಅಂಬರೀಶ್ ಅವರ ಹುಟ್ಟೂರು ದೊಡ್ಡರಸಿನಕೆರೆಯಲ್ಲಿ ನಮ್ಮ ಜಮೀನಿನ ಅರ್ಧ ಎಕರೆಯನ್ನು ಆ ಯೋಧನ ಅಂತ್ಯ ಸಂಸ್ಕಾರಕ್ಕೆ ಕೊಡಬೇಕು ಅಂದುಕೊಂಡೆ. ಆದರೆ, ಈಗ ಸರಕಾರ ಸಮಾಧಿಗೆ ಸ್ಥಳ ನಿಗದಿ ಮಾಡಿದೆ ಎಂದು ನನಗೆ ಗೊತ್ತಾಯಿತು.

ಆದರೂ, ಸೈನಿಕನ ಸ್ಮಾರಕಕ್ಕೆ ಕೊಡಬೇಕೆಂದು ನಿರ್ಧಾರ ಮಾಡಿದ ಮೇಲೆ ಆ ಭೂಮಿ ಅವರಿಗೇ ಸೇರಿದ್ದು. ಹೀಗಾಗಿ ಅಂಬರೀಶ್ ಹೆಸರಲ್ಲಿರೋ ಆ ಅರ್ಧ ಎಕರೆ ಜಮೀನನ್ನು ಸೈನಿಕನ ಕುಟುಂಬಕ್ಕೆ ನಾನು ಕೊಡುತ್ತಿದ್ದೇನೆ. ಸದ್ಯ ನಾನು ಮಲೇಷಿಯಾದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೇನೆ. ನಾನು ಬಂದ ತಕ್ಷಣ ಸೈನಿಕನ ಮನೆಗೆ ಹೋಗಿ ಅವರ ಹೆಸರಿಗೆ ಭೂಮಿಯನ್ನು ನೋಂದಣಿ ಮಾಡಿಸಿಕೊಡುತ್ತೇನೆ. ಇದು ಮಂಡ್ಯ ನೆಲದ ಮಗಳಾಗಿ, ಸೊಸೆಯಾಗಿ ನಾನು ಮಾಡುವ ಪುಟ್ಟ ಸೇವೆ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News