ಸ್ಪೀಕರ್ ರನ್ನು ಬೀದಿಗೆ ನಿಲ್ಲಿಸಿದ್ದು ಮುಖ್ಯಮಂತ್ರಿ ಕುಮಾರಸ್ವಾಮಿ: ಜಗದೀಶ್ ಶೆಟ್ಟರ್

Update: 2019-02-16 14:05 GMT

ಕೊಪ್ಪಳ, ಫೆ. 16: ‘ಆಪರೇಷನ್ ಕಮಲ’ ಆಡಿಯೋ ಬಿಡುಗಡೆ ಮಾಡುವ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ, ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ಅವರನ್ನು ಬೀದಿಗೆ ನಿಲ್ಲಿಸಿದರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡಗೆ ಆಡಿಯೋ ರೆಕಾರ್ಡ್ ಮಾಡುವಂತೆ ಹೇಳಿರುವುದು ಅಪರಾಧ. ಅಷ್ಟೇ ಅಲ್ಲದೆ, ಇಬ್ಬರು ವ್ಯಕ್ತಿಗಳ ನಡುವೆ ನಡೆಯುವ ಸಂಭಾಷಣೆಯನ್ನು ಕೇಳಿರುವುದು ಕದ್ದಾಲಿಕೆ. ಇಂತಹದ್ದೇ ಪ್ರಕರಣದಿಂದಾಗಿ ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಉಲ್ಲೇಖಿಸಿದರು.

ಬಜೆಟ್ ಅಧಿವೇಶನದ ಬಳಿಕ ಸ್ಪೀಕರ್ ರಮೇಶ್‌ಕುಮಾರ್ ಅವರ ಹೆಸರು ಪ್ರಸ್ತಾಪವಾಗಿರುವುದನ್ನು ಹೇಳಬಹುದಿತ್ತು. ಹೀಗಾಗಿ, ಕುಮಾರಸ್ವಾಮಿಯವರೆ ಅಪರಾಧಿ ಎಂದು ಆರೋಪಿಸಿದ ಅವರು, ಆಪರೇಷನ್ ಕಮಲ ಆಡಿಯೋ ತನಿಖೆಗೆ ನಮ್ಮ ವಿರೋಧವಿಲ್ಲ. ಆದರೆ, ಸಿಟ್ ತನಿಖೆ ಬೇಡ ಎಂದು ಹೇಳಿದ್ದೇವೆ ಅಷ್ಟೇ ಎಂದರು.

ರಾಜಕೀಯ ದ್ವೇಷ ಸಾಧನೆಗಾಗಿ ಕಾಂಗ್ರೆಸ್-ಜೆಡಿಎಸ್ ಸರಕಾರ ಆಡಿಯೋ ಪ್ರಕರಣದ ತನಿಖೆಯನ್ನು ಸಿಟ್‌ಗೆ ವಹಿಸಲು ಹೊರಟಿದೆ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರ ದ್ವಂದ್ವ ನೀತಿ ಸ್ಪಷ್ಟವಾಗಿದೆ. ನಾವು ಆಪರೇಷನ್ ಕಮಲ ಮಾಡಿಲ್ಲ ಎಂದು ಸ್ಪಷ್ಟಣೆ ನೀಡಿದರು.

ತಕ್ಕ ಉತ್ತರ: ಕಾಶ್ಮೀರದ ಪುಲ್ವಾಮಾದ ಉಗ್ರರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಸೈನಿಕರಿಗೆ ಸಂಪೂರ್ಣವಾದ ಅಧಿಕಾರವನ್ನು ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಭಯೋತ್ಪಾದನೆ ಸಂಪೂರ್ಣ ನಿಲ್ಲುವ ವಿಶ್ವಾಸವಿದೆ ಎಂದರು.

ಪಾಕಿಸ್ತಾನ ಭಯೋತ್ಪಾದನೆ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದೆ. ಈಗಾಗಲೇ ಪಾಕಿಸ್ತಾನವು ಎರಡು ಭಾಗವಾಗಿದೆ. ಇತ್ತ ಜಮ್ಮು-ಕಾಶ್ಮೀರದ ಸ್ಥಳೀಯ ನಿವಾಸಿಗಳೇ ಭಯೋತ್ಪಾದನೆಗೆ ಬೆಂಬಲ ನೀಡುತ್ತಿದ್ದಾರೆ. ಈ ಮೂಲಕ ವ್ಯವಸ್ಥೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News