ಸಕಲ ಸರಕಾರಿ ಗೌರವಗಳೊಂದಿಗೆ ಮಂಡ್ಯದ ಯೋಧ ಗುರು ಅಂತ್ಯಕ್ರಿಯೆ

Update: 2019-02-16 18:48 GMT

ಮಂಡ್ಯ,ಫೆ.16: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಎಚ್.ಗುರು ಅವರ ಅಂತ್ಯಕ್ರಿಯೆ ಹುಟ್ಟೂರು ಕೆಎಂ ದೊಡ್ಡಿ ಬಳಿ ಸರ್ಕಾರಿ ಜಾಗದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ನಡೆಯಿತು.

ಇಂದು ಮದ್ಯಾಹ್ನ ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣದ ಮೂಲಕ ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಮಂಡ್ಯಕ್ಕೆ ತರಲಾಗಿತ್ತು. ಬಳಿಕ ಸಂಜೆ ಗುಡಿಗೆರೆ ಕಾಲೋನಿಯಲ್ಲಿರುವ ಯೋಧನ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ಈ ಸಂದರ್ಭ ಪತ್ನಿ ಕಲಾವತಿ ಸೆಲ್ಯೂಟ್ ಹೊಡೆಯುವ ಮೂಲಕ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿದರು. ಯೋಧನ ಪೋಷಕರ ಹಾಗೂ ಹಾಗೂ ಸಂಬಂಧಿಕರ ಆಕ್ರಂಧನ ಮುಗಿಲು ಮುಟ್ಟಿತ್ತು.

ಬಳಿಕ ಮೆರವಣಿಗೆ ಮೂಲಕ ಕೆಎಂ ದೊಡ್ಡಿ ಬಳಿ ಸರ್ಕಾರಿ ಜಾಗಕ್ಕೆ ಮೃತದೇಹವನ್ನು ತರಲಾಯಿತು. ಈ ವೇಳೆ 3 ಸುತ್ತು ಕುಶಾಲುತೋಪು ಸಿಡಿಸಿ ಸರಕಾರಿ ಗೌರವ ಸಲ್ಲಿಸಲಾಯಿತು. ನಂತರ ಕುಮಾರಸ್ವಾಮಿ ರಾಷ್ಟ್ರ ಧ್ವಜ ಹಾಗೂ ಸರಕಾರದ ವತಿಯಿಂದ ಪರಿಹಾರದ ಚೆಕ್ ಅನ್ನು ಗುರು ಪತ್ನಿ ಕಲಾವತಿ ಅವರಿಗೆ ಹಸ್ತಾಂತರಿಸಿದರು. ಗುರು ಸಹೋದರ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು.

ಅಂತ್ಯಕ್ರಿಯೆಯ ವೇಳೆ ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ, ಗೃಹ ಸಚಿವ ಎಂ.ಬಿ ಪಾಟೀಲ್, ಸಚಿವರಾದ ಸಾ.ರಾ ಮಹೇಶ್, ಪುಟ್ಟರಾಜು, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶೋಭಾ ಕರಂದ್ಲಾಜೆ, ಪ್ರತಾಪ ಸಿಂಹ ಸಹಿತ ಹಲವಾರು ರಾಜಕೀಯ ಸಾಮಾಜಿಕ ಮುಖಂಡರು ಉಪಸ್ಥಿತರಿದ್ದರು.

ಕೆ.ಎಂ ದೊಡ್ಡಿ ಸ್ವಘೋಷಿತ ಬಂದ್
ಯೋಧ ಗುರು ಹುತಾತ್ಮರಾದ ಹಿನ್ನೆಲೆಯಲ್ಲಿ ಕೆ.ಎಂ ದೊಡ್ಡಿಯ ವರ್ತಕರು ಸ್ವಯಂಘೋಷಿತವಾಗಿ ಅಂಗಡಿ, ಮುಂಗಟ್ಟುಗಳನ್ನು ಬಂದ್ ಮಾಡಿ ಗೌರವ ಸೂಚಿಸಿದರು. ವಿವಿಧ ಕಡೆಗಳಲ್ಲಿ ಹುತಾತ್ಮ ಯೋಧನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅಂತಿಮ ನಮನ ಸಲ್ಲಿಸಿದರು.

ಶಾಲಾ ಕಾಲೇಜುಗಳಿಗೆ ರಜೆ
ಹುತಾತ್ಮ ಯೋಧ ಗುರುವಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಅವರು ವ್ಯಾಸಂಗ ಮಾಡಿದ ಕೆ.ಎಂ.ದೊಡ್ಡಿ ಸರಕಾರಿ ಪ್ರೌಢಶಾಲೆ ಹಾಗೂ ಕಾಲೇಜಿಗೆ ರಜೆ ಘೋಷಿಸಲಾಗಿತ್ತು. ವಿದ್ಯಾರ್ಥಿಗಳು, ಹುತಾತ್ಮ ಯೋಧನ ಮನೆಗೆ ಭೇಟಿ ನೀಡಿ, ಯೋಧನ ಸಾವಿಗೆ ಕಂಬನಿ ಮಿಡಿದರು. ಬಳಿಕ ಯೋಧನ ಭಾವಚಿತ್ರವನ್ನಿಡಿದು ಮೆರವಣಿಗೆ ನಡೆಸಿದರು. ಕೆಲವು ವಿದ್ಯಾರ್ಥಿಗಳು ವೀರಯೋಧನ ಕುಟುಂಬಕ್ಕೆ ಧೇಣಿಗೆ ಸಂಗ್ರಹಿಸಿದರು.

ಜಿ.ಮಾದೇಗೌಡ, ಗಣ್ಯರಿಂದ ಸಾಂತ್ವನ
ಹುತಾತ್ಮ ಯೋಧನ ಕುಟುಂಬಕ್ಕೆ ಮಾಜಿ ಸಂಸದ ಜಿ.ಮಾದೇಗೌಡ, ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ಡಾ.ಅನ್ನದಾನಿ, ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ನರೇಂದ್ರಸ್ವಾಮಿ, ಮಲ್ಲಾಜಮ್ಮ, ಮುಖಂಡ ಯಮದೂರು ಸಿದ್ದರಾಜು ಸೇರಿದಂತೆ ಅನೇಕ ಗಣ್ಯರು ಸಾಂತ್ವನ ಹೇಳಿದರು.

3.82 ಲಕ್ಷ ಎಲ್‍ಐಸಿ ಚೆಕ್

ಹುತಾತ್ಮ ಯೋಧ ಗುರು ಅವರ ಕುಟುಂಬಕ್ಕೆ ಜೀವ ವಿಮಾ ನಿಗಮ ಕಂಪನಿ ಯಾವುದೇ ದಾಖಲೆಗಳನ್ನು ಪರಿಶೀಲಿಸದೆ 3 ಲಕ್ಷ 82 ಸಾವಿರ ರೂ.ಗಳ ಚೆಕ್ ನೀಡಿ ಗೌರವ ಸಲ್ಲಿಸಿತು.

ಈ ಸಂದರ್ಭದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಮಾತನಾಡಿ, ನಿಮ್ಮ ಮಗ ವೀರಯೋಧ ಕೋಟಿ ಕೋಟಿ ಹಣ ಸಂಪಾದಿಸಿದರೂ ಇಂತಹ ಗೌರವ ಸಿಗುವುದಿಲ್ಲ. ಅಂತಹ ಮಗನಿಗೆ ಜನ್ಮನೀಡಿರುವುದಕ್ಕೆ ನೀವು ಅದೃಷ್ಟವಂತರು. ಕೆಲವರು ಬದುಕಿದ್ದು ಸತ್ತಂತಿರುತ್ತಾರೆ. ನಿಮ್ಮ ಮಗ ಹುತಾತ್ಮನಾದರೂ ಇನ್ನೊಬ್ಬರಿಗೆ ಸ್ಪೂರ್ತಿಯಾಗಿ ಬದುಕಿದ್ದಾನೆಂದು ತಂದೆ ಹೊನ್ನಯ್ಯನವರಿಗೆ ಸಮಾಧಾನ ಮಾಡಿದರು.

ಎಲ್.ಐ.ಸಿ ಸಂಸ್ಥೆ ವ್ಯವಸ್ಥಾಪಕ ನಾಗರಾಜ್ ರಾವ್ ಹುತಾತ್ಮ ಯೋಧನ ಮನೆಗೆ ಭೇಟಿ ನೀಡಿ, ಡಿ.ಸಿ.ತಮ್ಮಣ್ಣ ಮೂಲಕ ಚೆಕ್ ಅನ್ನು ಯೋಧನ ತಂದೆ ಹೊನ್ನಯ್ಯ ಅವರಿಗೆ ಕೊಡಿಸಿದರು.

ದಿನೇಶ್ ಗುಂಡುರಾವ್ ಸಾಂತ್ವನ 

ಹುತಾತ್ಮ ಯೋಧನ ಕುಟುಂಬಕ್ಕೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಸಾಂತ್ವಾನ ಹೇಳಿದರು. ಸರಕಾರದಿಂದ ಎಲ್ಲಾ ಸೌಲಭ್ಯಗಳು ದೊರಕಲಿದೆ.  ಧೃತಿಗೆಡಬೇಡಿ. ನಿಮ್ಮ ಮಗ ವೀರ ಯೋಧನಾಗಿದ್ದಾನೆ ಎಂದು ಕುಟುಂಬಕ್ಕೆ ತಿಳಿಹೇಳಿ ಸಮಾಧಾನಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರದ ಚಲುವರಾಯಸ್ವಾಮಿ, ರಮೇಶ್‍ಬಾಬು ಬಂಡಿಸಿದ್ದೇಗೌಡ, ಮಧು ಮಾದೇಗೌಡ, ಬಿ.ರಾಮಕೃಷ್ಣ, ಮುಖಂಡ ವಿ.ಕೆ.ಜಗದೀಶ್, ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿನಾರಾಯಣ್‍ಗೌಡ ಸೇರಿದಂತೆ ಅನೇಕರಿದ್ದರು.

1 ಲಕ್ಷ ರೂ. ನೀಡಿದ ನಿಖಿಲ್ 

ಚಿತ್ರನಟ ನಿಖಿಲ್ ಕುಮಾರಸ್ವಾಮಿ ಹುತಾತ್ಮ ಯೋಧನ ಕುಟುಂಬಕ್ಕೆ ಸಾಂತ್ವಾನ ಹೇಳಿ 1 ಲಕ್ಷ ರೂ ವೈಯುಕ್ತಿಕ ಪರಿಹಾರ ನೀಡಿದರು.
ಯೋಧನ ಪತ್ನಿ ಅಸ್ವಸ್ಥಗೊಂಡಿದ್ದನ್ನು ಕಂಡು ಎಳನೀರು ನೀಡಿ ಸಮಾಧಾನಪಡಿಸಿದರು. ಯೋಧರ ಸಹೋದರರಿಗೂ ಧೈರ್ಯ ತುಂಬಿದರು.

ಈ ವೇಳೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಪುತ್ರ ಸಂತೋಷ್ ತಮ್ಮಣ್ಣ, ಡಿ.ರಮೇಶ್, ಚಿಕ್ಕತಿಮ್ಮೇಗೌಡ ಸೇರಿದಂತೆ ಹಲವರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News