ಕಾಶ್ಮೀರದಲ್ಲಿ ಉಗ್ರರ ದಾಳಿ ಪ್ರಕರಣ: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆ ?

Update: 2019-02-16 16:16 GMT

ಬೆಂಗಳೂರು, ಫೆ.16: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ದೇಶದೆಲ್ಲೆಡೆ ಜಾತಿ, ಧರ್ಮ ಮೀರಿ ಒಗ್ಗೂಡಿ ಭಾವಪೂರ್ಣ ನಮನ ಸಲ್ಲಿಸುತ್ತಿದ್ದಾರೆ. ಆದರೆ, ಮತ್ತೊಂದು ಕಡೆ ಸಾಮಾಜಿಕ ಜಾಲತಾಣಗಳ ಮೂಲಕ ಕೋಮುಸೌಹಾರ್ದ ಕದಡಲು ಕಿಡಿಗೇಡಿಗಳು ಯತ್ನಿಸುತ್ತಿದ್ದಾರೆ.

ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಈ ಧರ್ಮಿಯರು ಶ್ರದ್ದಾಂಜಲಿ ಸಲ್ಲಿಸಲಿಲ್ಲ. ಶತ್ರುರಾಷ್ಟ್ರಗಳಿಗೆ ಇವರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದೆಲ್ಲಾ ಆರೋಪಿಸಿ, ಹಳೆಯ ವಿಡಿಯೋಗಳನ್ನು ಫೇಸ್‌ಬುಕ್, ವಾಟ್ಸಪ್ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳ ಮೂಲಕ ಹರಿಬಿಡಲಾಗುತ್ತಿದೆ.

‘ಹಿಂದೂ ಮಹಾಸಭಾ ಹಿಂದೂ ರಾಷ್ಟ್ರಸೇನಾ’ ಹೆಸರಿನ ಫೇಸ್‌ಬುಕ್ ಪೇಜ್‌ನಲ್ಲಿ ರಾಯಚೂರಿನ ತಲೇಖಾನ್ ಎಂಬಲ್ಲಿ ಯೋಧರ ಹತ್ಯೆಗೆ ಸಂಭ್ರಮಿಸಿದ್ದಾರೆ ಎನ್ನುವ ವಿಡಿಯೋ ಹರಿಬಿಡಲಾಗಿದೆ. ಅಷ್ಟೇ ಅಲ್ಲದೆ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸಬ್ ಇನ್‌ಸ್ಪೆಕ್ಟರ್ ಮಂಜುನಾಥ್ ಅವರು, ‘ಪಾಕಿಸ್ತಾನಕ್ಕೆ ಬೆಂಕಿ ಹಾಕಿ ಭಾರತ ಮಾತೆಗೆ ಹೂ ಹಾಕಿ ಎನ್ನುವ ಘೋಷಣೆ’ ಅನ್ನು ಅಪರಾಧ ಎಂದಿದ್ದಾರೆಂದು ಈ ಫೇಜ್ ಆರೋಪಿಸಿದೆ ಎಂದು ಹೇಳಲಾಗುತ್ತಿದೆ.

ಹತ್ಯೆಗೆ ಪ್ರಚೋದನೆ: ಕೆಪಿಸಿಸಿ ವಕ್ತಾರ ನಟರಾಜ ಗೌಡ ಅವರನ್ನು ಹತ್ಯೆ ಮಾಡಿ, ನೋಡಿಕೊಳ್ಳುತ್ತೇನೆ ಎಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿರುವ ಆರೋಪ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಾಗಿತ್ತು.

ಖಾಸಗಿ ಕನ್ನಡ ಸುದ್ದಿ ವಾಹಿನಿಯೊಂದರ ಚರ್ಚೆಯಲ್ಲಿ ಯೋಧರ ಹುತಾತ್ಮಕ್ಕೆ ಕೇಂದ್ರ ಸರಕಾರದ ವೈಫಲ್ಯವೇ ಕಾರಣ ಎಂದು ನಟರಾಜ ಗೌಡ ಹೇಳಿದ್ದರು. ಆದರೆ, ಇದನ್ನು ತಿರುಚಿ, ‘ಹಿಂದೂ ಸಾಮ್ರಾಟ್, ಧರ್ಮ ಸೇನೆ’ ಹೆಸರಿನ ಫೇಸ್‌ಬುಕ್ ಪುಟದ ಅಡ್ಮಿನ್ ಅತುಲ್ ಕುಮಾರ್ ಯಾನೆ ಮಧುಗಿರಿ ಮೋದಿ ಎಂಬಾತ ನಟರಾಜ ಗೌಡರನ್ನು ಹತ್ಯೆ ಮಾಡಿ ಎಂದು ಪ್ರಚೋದನೆ ನೀಡುವ ವಿಡಿಯೋ ಹರಿಬಿಟ್ಟಿದ್ದ.

ಈ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಶುಕ್ರವಾರ ಸೈಬರ್ ಕ್ರೈಂ ಪೊಲೀಸರಿಗೆ ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯ ಮಾಡಿದ್ದರು.

ಹೀಗೆ, ಇನ್ನೂ ಕೆಲ ಫೇಸ್‌ಬುಕ್ ಪೇಜ್‌ಗಳಲ್ಲೂ ಕೋಮುಸೌಹಾರ್ದ ಕದಡುವ ವಂದತಿಗಳನ್ನು ಹಬ್ಬಿಸಲಾಗುತ್ತಿದೆ. ಆದರೆ, ಈ ಸಂಬಂಧ ಇದುವರೆಗೂ ಎಲ್ಲಿಯೂ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲು ಆಗಿಲ್ಲ ಎಂದು ಗೊತ್ತಾಗಿದೆ.

ಸಂಭ್ರಮ, ಠಾಣೆಗೆ ದೂರು

ಪುಲ್ವಾಮಾದಲ್ಲಿ ಯೋಧರ ಮೇಲೆ ನಡೆಸಿದ ಉಗ್ರರ ಕೃತ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಸಂಭ್ರಮಿಸಿದ್ದಾರೆ ಎಂದು ಆರೋಪಿಸಿ ಅಬ್ದುಲ್ ಹನೀಫ್ ಸೇರಿದಂತೆ ಕೆಲವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಕರ್ನಾಟಕ ಸಂಘಟನೆಗಳ ಒಕ್ಕೂಟ ಅಧ್ಯಕ್ಷ ನಾಗೇಶ್ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದರು.

ಎನ್‌ಐಎಗೆ ಮಾಹಿತಿ?

ಉಗ್ರರು ನಡೆಸಿದ ಕೃತ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಸಮರ್ಥಿಸಿಕೊಂಡಿದ್ದ ಆರೋಪಿ ಅಬೀದ್ ಮಲ್ಲಿಕ್ ಕಣಿವೆ ರಾಜ್ಯ ಕಾಶ್ಮೀರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆಗೆ(ಎನ್‌ಐಎ) ಸಿಸಿಬಿ ವರದಿ ನೀಡಿದೆ ಎಂದು ತಿಳಿದುಬಂದಿದೆ. ಅಬೀದ್ ಮಲ್ಲಿಕ್ ಎಂಬ ವ್ಯಕ್ತಿ ಯೋಧರ ಮೇಲೆ ದಾಳಿ ನಡೆಸಿದ್ದ ಉಗ್ರರ ಕತ್ಯ ಬೆಂಬಲಿಸಿದ್ದ. ಈ ಸಂಬಂಧ ಸಾರ್ವಜನಿಕರೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News