ಭಯೋತ್ಪಾದನೆ ಖಂಡಿಸಿ ಫೆ.19ಕ್ಕೆ ರಾಜ್ಯಾದ್ಯಂತ ಬಂದ್‌ಗೆ ಕನ್ನಡ ಒಕ್ಕೂಟ ಕರೆ

Update: 2019-02-16 17:03 GMT

ಬೆಂಗಳೂರು, ಫೆ.16: ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಭದ್ರತಾ ಪಡೆಗಳ ಮೇಲೆ ನಡೆಸಿದ ಆತ್ಮಹತ್ಯಾ ದಾಳಿಯನ್ನು ಖಂಡಿಸಿ ಮತ್ತು ಭಯೋತ್ಪಾದನೆ ನಿರ್ಮೂಲನೆಗೆ ಆಗ್ರಹಿಸಿ ಫೆ.19ರಂದು ಕನ್ನಡಪರ ಸಂಘಟನೆಗಳ ಒಕ್ಕೂಟ ರಾಜ್ಯಾದ್ಯಂತ ಬಂದ್‌ಗೆ ಕರೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂದ ಅಧ್ಯಕ್ಷ ವಾಟಾಳ್ ನಾಗರಾಜ್, ಯೋಧರ ಮೇಲೆ ನಡೆದಿರುವ ದಾಳಿಯನ್ನು ಇಡೀ ದೇಶವೇ ಖಂಡಿಸುತ್ತದೆ. ಈ ಆತ್ಮಹತ್ಯೆ ದಾಳಿ ಕೇಂದ್ರ ಸರಕಾರಕ್ಕೆ ಸವಾಲಾಗಿದೆ. ಭಾರತ ಮನಸ್ಸು ಮಾಡಿದರೆ ಭಯೋತ್ಪಾದನೆಯ ಸಂಘಟನೆಗಳು ಪುಡಿ-ಪುಡಿಯಾಗುತ್ತವೆ. ಆದರೆ, ದೇಶ ಹಾಗೂ ಸೈನ್ಯ ವಿಶ್ವ ಸಮುದಾಯಕ್ಕೆ ಬೆಲೆ ಕೊಡುತ್ತಿದೆ ಎಂದು ಹೇಳಿದರು.

ಭಯೋತ್ಪಾದನೆ ಮಾನವ ಕುಲದ ಅಪಾಯದ ಸಂಕೇತ. ಹೆಚ್ಚು ಬೆಳೆಯೋಕೆ ಬಿಡಬಾರದು. ಹೀಗಾಗಿ, ಪ್ರಧಾನಿ ಮಂತ್ರಿಯವರ ಸೈನಿಕರ ಹತ್ಯೆಯ ಪ್ರತೀಕಾರದ ಮಾತನ್ನು ಸ್ವಾಗತಿಸುತ್ತೇನೆ. ಪ್ರತೀಕಾರದ ನಡೆ ಸರಿಯಾಗಿದೆ. ಇಡೀ ದೇಶ ಪ್ರತೀಕಾರಕ್ಕೆ ಕಾತರಿಸುತ್ತಿದ್ದು, ಪಾಕಿಸ್ತಾನ ಜೈಶೆ ಮುಹಮ್ಮದ್ ಸಂಘಟನೆಗೆ ನೇರವಾಗಿ ಸಹಾಯ ಮಾಡುತ್ತಿದೆ. ಈ ಮೂಲಕ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ ಎಂದು ಆರೋಪ ಮಾಡಿದರು.

ಯುದ್ಧದಿಂದ ಅಪಾರ ಆಸ್ತಿ-ಪಾಸ್ತಿ ನಷ್ಟವಾಗುತ್ತದೆ, ಸಾವು-ನೋವುಗಳಾಗುತ್ತವೆ. ಮತ್ತಷ್ಟು ಸೈನಿಕರು ಸಾಯುತ್ತಾರೆ. ಅಲ್ಲದೆ, ಅವರ ಮಡದಿಯರು, ಮಕ್ಕಳು ಅನಾಥರಾಗುತ್ತಾರೆ ಎಂದು ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಭಯೋತ್ಪಾದನೆಗೆ ನೆರವು ನೀಡುತ್ತಿರುವವರನ್ನು ಮಟ್ಟ ಹಾಕಬೇಕು. ಉಗ್ರ ಸಂಘಟನೆಗಳನ್ನು ನಾಶ ಮಾಡಲು ಇಡೀ ವಿಶ್ವ ಸಮುದಾಯವೇ ಒಂದಾಗಬೇಕು. ಆದರೆ, ಹಲವು ರಾಷ್ಟ್ರಗಳು ಭಾರತಕ್ಕೆ ಸಾಂತ್ವನ ನೀಡುತ್ತಿರುವಾಗ, ಕೆಲವು ರಾಷ್ಟ್ರಗಳು ಭಾರತಕ್ಕೆ ಬೆಂಬಲ ಸೂಚಿಸದೇ ವೌನವಾಗಿರುವುದು ವಿಷಾದನೀಯ ಎಂದರು.

ವಿವಿಧ ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿದ್ದು, ಸರಕಾರಿ ಬಸ್‌ಗಳು, ಖಾಸಗಿ ವಾಹನಗಳು, ಹೊಟೇಲ್, ಖಾಸಗಿ ಶಿಕ್ಷಣ ಸಂಸ್ಥೆಗಳು, ಸರಕಾರಿ ಶಾಲಾ ಕಾಲೇಜ್, ಸಿನೆಮಾ ಮಂದಿರ, ಬಿಡಿಎ, ಬಿಬಿಎಂಪಿ ಎಲ್ಲ ಕಾರ್ಖಾನೆಗಳು, ಐಟಿ-ಬಿಟಿ ಬಂದ್ ಮಾಡಬೇಕು. ಆದರೆ, ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಎಲ್ಲ ಶಾಂತಿ ಸುವ್ಯವಸ್ಥೆಯಿಂದ ಇರಬೇಕು ಎಂದರು.

ಸಿಆರ್‌ಪಿಎಫ್ ಬೆಂಗಾವಲು ವಾಹನಗಳ ಮೇಲೆ ಆತ್ಮಹತ್ಯೆ ದಾಳಿ ನಡೆದಿರುವುದು ಗುಪ್ತಚಾರ ಇಲಾಖೆಯ ವೈಫಲ್ಯ. ಅಲ್ಲದೆ, ಚೀನಾದವರು ಜೈಶೆ ಮುಹಮ್ಮದ್ ಸಂಘಟನೆಯ ಬಗ್ಗೆ ಮೃಧು ಧೋರಣೆ ತೋರುತ್ತಿರುವುದು ಸರಿಯಲ್ಲ.

-ವಾಟಾಳ್ ನಾಗರಾಜ್, ಕನ್ನಡ ಒಕ್ಕೂಟದ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News