ಗುರು ಅಮರ್ ರಹೇ....

Update: 2019-02-16 18:19 GMT

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಂಭವಿಸಿದ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮಂಡ್ಯದ ಗುಡಿಗೆರೆಯ ಎಚ್.ಗುರು ಅವರ ಅಂತ್ಯ ಸಂಸ್ಕಾರ ಜಿಲ್ಲೆಯ ಮದ್ದೂರು ತಾಲೂಕಿನ ಕೆ.ಎಂ.ದೊಡ್ಡಿ ಬಳಿ ಸಕಲ ಸಕಲ ಸರಕಾರಿ ಗೌರವ ವಂದನೆಗಳೊಂದಿಗೆ ನಡೆಯಿತು. ಗುರುವಾರ ಸಂಭವಿಸಿದ ಭಯೋತ್ಪಾದನಾ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧ ಮಂಡ್ಯದ ಗುರು ಅವರ ಪಾರ್ಥಿವ ಶರೀರವನ್ನು ಹೊತ್ತ ವಾಯುಪಡೆಯ ವಿಶೇಷ ವಿಮಾನವು ಮಧ್ಯಾಹ್ನ ಒಂದು ಗಂಟೆಗೆ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಆ ವೇಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೊದಲಿಗೆ ಯೋಧನ ಪಾರ್ಥಿವ ಶರೀರಕ್ಕೆ ಗೌರವ ನಮನ ಸಲ್ಲಿಸಿದರು. ಇದಾದ ನಂತರ ಗುರು ಪಾರ್ಥಿವ ಶರೀರವನ್ನು ರಸ್ತೆ ಮಾರ್ಗವಾಗಿ ಮಂಡ್ಯದ ಹುಟ್ಟೂರು ಗುಡಿಗೆರೆಗೆ ತರಲಾಯಿತು. ಪಾರ್ಥಿವ ಶರೀರ ಇರುವ ವಾಹನ ಆಗಮಿಸುತ್ತಿರುವ ರಸ್ತೆಯ ಇಕ್ಕೆಲಗಳಲ್ಲಿ ಜನರು ಗುರು ಅಮರ್ ರಹೇ ಎಂಬ ಘೋಷಣೆ ಕೂಗಿದರು. ಅಲ್ಲದೇ ಅಂತಿಮ ದರ್ಶನ ಕೂಡ ಪಡೆದರು. ಇನ್ನು ಮಂಡ್ಯದಲ್ಲಿ ಗುರು ಪಾರ್ಥಿವ ಶರೀರರವನ್ನು ಕೆಲವು ಕಾಲ ಅವರ ಹುಟ್ಟೂರು ಗುಡಿಗೆರೆಯಲ್ಲಿರುವ ಮನೆಯ ಮುಂಭಾಗದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿತ್ತು. ಈ ವೇಳೆ ಯೋಧ ಗುರು ಅವರ ಹೆಂಡತಿ, ತಂದೆ, ತಾಯಿ ಹಾಗೂ ಕುಟುಂಬದವರು ಗುರು ಅವರ ಪಾರ್ಥಿವ ಶರೀರವಿದ್ದ ಪೆಟ್ಟಿಗೆ ಮೇಲೆ ಕಣ್ಣೀರಿಟ್ಟರು. ಬಳಿಕ ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಸಮೀಪದ ಮೆಳ್ಳಹಳ್ಳಿಯ ಹೆಬ್ಬಾಳ ಬಳಿಯ 10 ಗುಂಟೆ ಸರಕಾರಿ ಜಾಗದಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಲಾಯಿತು. ಅಂತ್ಯಕ್ರಿಯೆಯಲ್ಲಿ ಹುತಾತ್ಮ ಯೋಧ ಗುರು ಚಿತೆಗೆ ಅವರ ಸಹೋದರರು ಅಗ್ನಿ ಸ್ಪರ್ಶ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor