ಕುದುರೆಮುಖ: ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ಮೇಲೆ ಪೆಟ್ರೋಲ್ ಬಾಂಬೆಸೆತ

Update: 2019-02-17 15:59 GMT

ಕಳಸ, ಫೆ.17: ಇಲ್ಲಿಗೆ ಸಮೀಪದ ಕುದುರೆಮುಖ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯ ಬಸ್ರಿಕಲ್ ಅರಣ್ಯ ಚೆಕ್ ಪೋಸ್ಟ್ ಗೆ ಶನಿವಾರ ಮಧ್ಯರಾತ್ರಿ ದುಷ್ಕರ್ಮಿಗಳು ಬಾಟಲಿಗೆ ಪೆಟ್ರೋಲ್ ಮತ್ತು ಸೀಮೆ ಎಣ್ಣೆ ತುಂಬಿಸಿ ಬೆಂಕಿ ಕೊಟ್ಟು ಎಸೆದಿರುವ ಘಟನೆ ವರದಿಯಾಗಿದೆ.

ಕಳಸ ಹೋಬಳಿ ಸಂಸೆ ಗ್ರಾಪಂ ವ್ಯಾಪ್ತಿಯಲ್ಲಿರುವ ಸಂಸೆ ಕುದುರೆಮುಖ ಹೆದ್ದಾರಿಯ ಮಧ್ಯೆಯಲ್ಲಿರುವ ಬಸ್ರಿಕಲ್ ಗ್ರಾಮದಲ್ಲಿರುವ ಅರಣ್ಯ ಇಲಾಖೆಯ ತನಿಖಾ ಕೇಂದ್ರಕ್ಕೆ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸಿದಿದ್ದು, ಈ ಚೆಕ್‍ಪೋಸ್ಟ್ ನಲ್ಲಿ ಶನಿವಾರ ರಾತ್ರಿ ಪಾಳಯದಲ್ಲಿ ಉದಯ ಕುಮಾರ್ ಮತ್ತು ಶಶಾಂಕ್ ಎಂಬ ಅರಣ್ಯ ಉಲಾಖೆ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಶನಿವಾರ ಮಧ್ಯರಾತ್ರಿ ತನಿಖಾ ಠಾಣೆಯ ಕೊಠಡಿಯೊಳಗೆ ವಿಶ್ರಾಂತಿ ತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಏಕಾಏಕಿ ಪೆಟ್ರೋಲ್ ತುಂಬಿದ ಸುಮಾರು ಆರು ಬಾಟಲಿಗಳನ್ನು ಚೆಕ್ ಪೋಸ್ಟ್ ಗೆ ಪಕ್ಕದಲ್ಲಿದ್ದ ಶಾಲೆಯ ಕಡೆಯಿಂದ ಎಸೆದಿದ್ದಾರೆಂದು ತಿಳಿದು ಬಂದಿದೆ. 

ಈ ದಾಳಿಯಿಂದ ಚೆಕ್‍ಪೋಸ್ಟ್ ಗೆ ಭಾರೀ ಹಾನಿ ಸಂಭವಿಸದಿದ್ದರೂ ಸ್ಫೋಟದ ಸದ್ದು ಹಾಗೂ ಬೆಂಕಿಯನ್ನು ಕಂಡ ಅರಣ್ಯ ಸಿಬ್ಬಂದಿ ಕೂಗಿಕೊಂಡು ಹೊರಬಂದಿದ್ದಾರೆಂದು ತಿಳಿದು ಬಂದಿದೆ. ಸಿಬ್ಬಂದಿಯು ಕೂಗುತ್ತಿದ್ದಂತೆ ಕಿಡಿಗೇಡಿಗಳು ತಂದಿದ್ದ ಕೆಲ ಪೆಟ್ರೋಲ್ ಬಾಂಬ್‍ಗಳನ್ನು ಸ್ಥಳದಲ್ಲೇ ಎಸೆದು ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಈ ಸಂದರ್ಭದಲ್ಲಿ ಅಕ್ಕ ಪಕ್ಕದಲ್ಲಿರುವ ಮನೆ ಹಾಗೂ ಅಂಗಡಿ ಮಾಲಕರು ಎದ್ದು ಬಂದಿದ್ದಾರೆ. ಆದರೆ ಸ್ಫೋಟದಿಂದ ಹೆದರಿದ ಆಸುಪಾಸಿನವರು ಮನೆಯಿಂದ ಹೊರಗಡೆ ಬರುವಷ್ಟರಲ್ಲಿ ದುಷ್ಕರ್ಮಿಗಳು ನಾಪತ್ತೆಯಾಗಿದ್ದಾರೆ ಎಂದು ಚೆಕ್‍ಪೋಸ್ಟ್ ಸಿಬ್ಬಂದಿ ಘಟನೆ ಬಗ್ಗೆ ವಿವರಣೆ ನೀಡಿದ್ದಾರೆ. ಘಟನೆಯಲ್ಲಿ ಅರಣ್ಯ ಇಲಾಖೆಯ ಒಂದು ರಿಜಿಸ್ಟರ್ ಪುಸ್ತಕ ಸ್ವಲ್ಪ ಮಟ್ಟಿಗೆ ಸುಟ್ಟು ಹೋಗಿದ್ದು, ಬೇರೆ ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂಯೆ ಜಿಲ್ಲಾ ಪೊಲೀಸ್ ಇಲಾಖೆಯ ಅಡಿಷನಲ್ ಎಸ್ಪಿ ಶೃತಿ, ಕುದುರೆಮುಖ ವೃತ್ತ ನಿರೀಕ್ಷಕ ರಾಮಚಂದ್ರ, ಕುದುರೆಮುಖ ಆರ್‍ಎಫ್‍ಒ ಮಧುಸೂದನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ವ್ಯವಸ್ಥಿತ ಸಂಚು: 6 ಮದ್ಯದ ಖಾಲಿ ಬಾಟಲಿಗೆ ಸೀಮೆಎಣ್ಣೆ, ಪೆಟ್ರೋಲ್ ಮತ್ತು ಮರಳನ್ನು ತುಂಬಿಸಿ ಅದಕ್ಕೆ ಹೊಸ ಬಿಳಿ ಬಟ್ಟೆಯಿಂದ ಭತ್ತಿಗಳನ್ನು ಮಾಡಿರುವ ದುಷ್ಕರ್ಮಿಗಳು ಅದಕ್ಕೆ ಬೆಂಕಿ ಕೊಟ್ಟು ಅದನ್ನು ಇಲಾಖೆಯ ಸಿಬ್ಬಂದಿ ಕುಳಿತುಕೊಳ್ಳವ ಸ್ಥಳವನ್ನು ಗುರಿ ಮಾಡಿ ಎಸೆದಿದ್ದಾರೆ. ಆದರೆ ಅದೃಷ್ಟವಶಾತ್ ಸಿಬ್ಬಂದಿ ಆ ಸಂದರ್ಭದಲ್ಲಿ ಸ್ಥಳವನ್ನು ಬದಲಾಯಿಸಿ ಕುಳಿತಿದ್ದರಿಂದ ಸಿಬ್ಬಂದಿಗೆ ಯಾವುದೇ ಅನಾಹುತ ಸಂಭವಿಸಿಲ್ಲ. ಬೆಂಕಿ ಕೊಟ್ಟು ಎಸೆದ ಬಾಟಲಿಗಳ ಪೈಕಿ ಕೆಲ ಪೆಟ್ರೋಲ್ ಬಾಂಬ್‍ಗಳಿಗೆ ಬೆಂಕಿ ಸರಿಯಾಗಿ ಹತ್ತದ ಕಾರಣ ಹಾಗೂ ಕೆಲ ಬಾಟಲಿಗಳು ಗುರಿ ತಪ್ಪಿ ರಸ್ತೆಗೆ ಬಿದ್ದಿರುವುದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಈ ಘಟನೆ ಸಂಬಂಧ ದುಷ್ಕರ್ಮಿ ಮೊದಲೇ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆಂದು ಘಟನಾ ಸ್ಥಳ ಪರಿಶೀಲಿಸಿದ ಪೊಲೀಸರು, ಅರಣ್ಯಾಧಿಕಾರಿಗಳು ಅಭಿಪ್ರಾಯಿಸಿದ್ದಾರೆ.

ಸ್ಥಳೀಯರಲ್ಲಿ ಭೀತಿ: ಬಸ್ರಿಕಲ್ ಚೆಕ್‍ಪೋಸ್ಟ್ ನಲ್ಲಿ ಶನಿವಾರ ಮಧ್ಯರಾತ್ರಿ ನಡೆದ ಘಟನೆಯಿಂದಾಗಿ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಚೆಕ್‍ಪೋಸ್ಟ್ ಆಸು ಪಾಸಿನಲ್ಲಿ ಅಂಗಡಿ ಮಳಿಗೆಗಳು, ಮನೆಗಳು, ಶಾಲೆ ಇದ್ದು, ಇವತ್ತು ಚೆಕ್‍ಪೋಸ್ಟ್ ಮೇಲೆ ದಾಳಿ ಮಾಡಿದ್ದಾರೆ. ನಾಳೆ ನಮ್ಮ ಅಂಗಡಿ ಮನೆಗಳ ಮೇಲೂ ದಾಳಿಯಾದರೆ ಏನು ಗತಿ ? ಘಟನೆಗೆ ಯಾರು ಕಾರಣ ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿ ಸ್ಥಳೀಯರಲ್ಲಿರುವ ಆತಂಕವನ್ನು ದೂರ ಮಾಡಬೇಕೆಂದು ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ಭೇಟಿ ನೀಡಿದ್ದ ವಾರ್ತಾಭಾರತಿಗೆ ತಿಳಿಸಿದ್ದಾರೆ. 

ಸಂಸೆ ಗ್ರಾಪಂ ವ್ಯಾಪ್ತಿ ಬಸ್ರಿಕಲ್ ಚೆಕ್ ಪೋಸ್ಟ್ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಮೊಬೈಲ್ ನೆಟ್‍ವರ್ಕ್ ಇಲ್ಲ. ಅಲ್ಲದೇ ಚೆಕ್‍ಪೋಸ್ಟ್ ನಲ್ಲಿ ಸಿಸಿ ಕ್ಯಾಮರಗಳನ್ನೂ ಅಳವಡಿಸಿಲ್ಲದಿರುವುದನ್ನು ಗಮನಸಿಯೇ ಈ ದುಷ್ಕೃತ್ಯ ಎಸಗಲಾಗಿದೆ. ಕೂಡಲೇ ಈ ಭಾಗದಲ್ಲಿ ಮೊಬೈಲ್ ಟವರ್ ಹಾಗೂ ಚೆಕ್ ಪೋಸ್ಟ್ ಗೆ ಸಿಸಿ ಕ್ಯಾಮರವನ್ನು ಅಳವಡಿಸಬೇಕೆಂದು ಸ್ಥಳೀಯರಾದ ಮಹೇಶ್, ವಾಸು, ದಿಲೀಪ್ ಎಂಬವರು ಆಗ್ರಹಿಸಿದ್ದಾರೆ. 

ರಾತ್ರಿ 3 ಗಂಟೆಯ ಸಮಯಕ್ಕೆ ವಾಹನವೊಂದಕ್ಕೆ ರಶೀದಿ ನೀಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳೋಣ ಎಂದು ಆ ಸ್ಥಳ ಬಿಟ್ಟು ಬೇರೆ ಸ್ಥಳದಲ್ಲಿ ಕುಳಿತುಕೊಂಡಿದ್ದೆವು. ಕೆಲ ಹೊತ್ತಿನಲ್ಲಿ ಚೆಕ್‍ಪೋಸ್ಟ್ ಸಮೀಪದಲ್ಲಿರುವ ಶಾಲೆ ಕಡೆಯಿಂದ ಪೆಟ್ರೋಲ್ ಬಾಂಬ್‍ಗಳನ್ನು ಒಂದರ ಹಿಂದೆ ಒಂದರಂತೆ ಚೆಕ್‍ಪೋಸ್ಟ್ ನತ್ತ ಎಸೆದಿದ್ದಾರೆ. ಕೂಡಲೇ ಹೊರಗಡೆ ಓಡಿ ಬಂದು ನೋಡಿದಾಗ ನಮಗೆ ಯಾರೂ ಕಾಣಿಸಿಕೊಳ್ಳಲಿಲ್ಲ. ಪೆಟ್ರೋಲ್ ಬಾಂಬ್‍ಗಳ ಪೈಕಿ ಕೆಲವು ನಿಷ್ಕ್ರಿಯಗೊಂಡಿದ್ದವು. 
- ಉದಯಕುಮಾರ್, ಅರಣ್ಯ ಇಲಾಖೆ ಸಿಬ್ಬಂದಿ

ನಕ್ಸಲರ ಕೃತ್ಯವಲ್ಲ: ಬಸ್ರಿಕಲ್ ಚೆಕ್‍ಪೋಸ್ಟ್ ಮೇಲೆ ಶನಿವಾರ ಪೆಟ್ರೋಲ್ ಬಾಂಬ್ ಎಸೆದಿರು ಹಿನ್ನೆಲೆಯಲ್ಲಿ ಇದು ನಕ್ಸಲರ ಕೃತ್ಯ ಇರಬಹುದು ಎಂಬ ಶಂಕೆ ಮೇಲೆ ಈ ಭಾಗದ ಕೆಲವೆಡೆ ಎಎನ್‍ಎಫ್ ಸಿಬ್ಬಂದಿ ಕೂಂಬಿಂಗ್ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಸ್ಥಳೀಯರು ಇದು ಕಿಡಿಗೇಡಿಗಳ ಕೃತ್ಯವೇ ಹೊರತು ನಕ್ಸಲರ ಕೃತ್ಯವಲ್ಲ. ಅರಣ್ಯ ಇಲಾಖೆ ಈ ಭಾಗದ ಕೆಲ ಗ್ರಾಮಗಳಲ್ಲಿ ರಸ್ತೆಯಂತಹ ಅಭಿವೃದ್ಧಿ ಕೆಲಸಗಳಿಗೆ ತೊಂದರೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೇಲೆ ಸ್ಥಳೀಯರಿಗೆ ಸಿಟ್ಟಿದೆ. ಈ ಪೈಕಿ ಯಾರೋ ಇಂತಹ ಕೃತ್ಯವನ್ನು ಮಾಡಿರಬಹುದೆಂದು ಚೆಕ್‍ಪೋಸ್ಟ್ ಸುತ್ತಮುತ್ತಲಿನ ನಿವಾಸಿಗಳು ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News