ಶಾಸಕರ ಅನರ್ಹಕ್ಕೆ ನೀಡಿದ ಮನವಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ

Update: 2019-02-17 15:36 GMT

ವಿಜಯಪುರ,ಫೆ.16: ನಾಲ್ವರು ಶಾಸಕರನ್ನು ಅನರ್ಹಗೊಳಿಸುವಂತೆ ಸಭಾಪತಿಗಳಿಗೆ ಪಕ್ಷ ನೀಡಿದ ಮನವಿಯನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ವಿಜಯಪುರಕ್ಕೆ ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಲ್ವರನ್ನು ಅನರ್ಹಗೊಳಿಸುವಂತೆ ಮಾಡಿದ ಮನವಿಯನ್ನು ಈಗಾಗಲೇ ಸ್ಪೀಕರ್ ಗೆ ಸಲ್ಲಿಸಲಾಗಿದೆ. ಹಾಗಾಗಿ ಸ್ಪೀಕರ್ ಅಂಗಳದಲ್ಲಿ ಚೆಂಡಿದೆ. ಅವರೇ ಈ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಮನವಿಯನ್ನು ಯಾವುದೇ ಕಾರಣಕ್ಕೂ ಹಿಂದಕ್ಕೆ ಪಡೆಯುವುದಿಲ್ಲ. ಸಭಾಪತಿಗಳು ಯಾವ ನಿರ್ಧಾರ ಕೈಗೊಳ್ಳುತ್ತಾರೋ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಸ್ಪಷ್ಟಪಡಿಸಿದರು. 

ರಾಜಕೀಯಕ್ಕಾಗಿ ಬಿಜೆಪಿಯಿಂದ ವಿರೋಧ

ಬಿಜೆಪಿ ನಾಯಕರು ರಾಜಕೀಯ ಕಾರಣಕ್ಕಾಗಿ ಎಸ್‍ಐಟಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಎಸ್‍ಐಟಿ ಒಂದು ಕಾನೂನಿನ ಅಡಿಯಲ್ಲಿಯೇ ಕಾರ್ಯನಿರ್ವಹಿಸುವ ಸಂಸ್ಥೆ. ಈ ಸಂಸ್ಥೆಯನ್ನು ವಿನಾಕಾರಣ ಬಿಜೆಪಿಗರು ವಿರೋಧಿಸುತ್ತಿದ್ದಾರೆ. ಹೀಗಾಗಿ ಕಾನೂನು ಹಾಗೂ ನ್ಯಾಯಾಂಗದ ಮೇಲೆ ಬಿಜೆಪಿಗೆ ಭರವಸೆ ಇಲ್ಲದಂತಾಗಿದೆ ಎಂದು ದೂರಿದರು.

ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಹಾಗೂ ಸೀಟು ಹಂಚಿಕೆಯ ಬಗ್ಗೆ ಇನ್ನೂ ಯಾವುದೇ ರೀತಿ ಚರ್ಚೆ ನಡೆದಿಲ್ಲ. ಈ ಬಗ್ಗೆ ಪಕ್ಷದ ವರಿಷ್ಠರು ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತಾರೆ. ಸದ್ಯಕ್ಕೆ ಈ ಬಗ್ಗೆ ಚರ್ಚೆ ನಡೆದಿಲ್ಲ ಎಂದರು.

ಬೊಬ್ಬೆ ಹೊಡೆಯುವುದಷ್ಟೇ ಬಿಜೆಪಿ ಕೆಲಸ

ಬಿಜೆಪಿ ನಾಯಕರು ಈ ಬಾರಿ ಬಜೆಟ್ ಮೇಲೆ ಚರ್ಚೆ ಮಾಡಲು ಬಿಡಲೇ ಇಲ್ಲ. ಹಲವಾರು ಬಜೆಟ್‍ಗಳನ್ನು ಮಂಡಿಸಿದ ಅನುಭವ ನನ್ನದು. ಈ ರೀತಿಯಾಗಿ ಒಂದು ಬಾರಿಯೂ ಆಗಿಲ್ಲ. ಈ ಬಾರಿ ಮಾತ್ರ ಬಜೆಟ್ ಚರ್ಚೆಯೇ ನಡೆದಿಲ್ಲ. ಬಿಜೆಪಿ ನಾಯಕರು ಹೊರಗೆ ಬರಗಾಲ ಎಂದು ಬೊಬ್ಬೆ ಹೊಡೆಯುತ್ತಾರೆ. ಆದರೆ ಸದನದಲ್ಲಿ ಬರಗಾಲದ ಬಗ್ಗೆ ಚರ್ಚೆ ನಡೆಸಲು ಬರುವುದಿಲ್ಲ. ಅವರಿಗೆ ನಿಜವಾದ ಕಾಳಜಿ ಇದ್ದರೆ ಸದನದಲ್ಲಿ ಚರ್ಚೆ ಮಾಡಬೇಕಿತ್ತು. ಅದನ್ನು ಬಿಟ್ಟು ಕೇವಲ ಹೊರಗಡೆ ಹೇಳಿಕೆ, ಪ್ರತಿ ಹೇಳಿಕೆ ನೀಡಿದರೆ ಆಯಿತೇ ಎಂದು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News