ಮಂಡ್ಯದ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಹರಿದು ಬರುತ್ತಿರುವ ನೆರವಿನ ಹಸ್ತ

Update: 2019-02-17 17:38 GMT

ಮಂಡ್ಯ, ಫೆ.17: ಭಯೋತ್ಪಾದಕರ ದಾಳಿಗೆ ಮೃತರಾದ ಯೋಧ ಗುರು ಅವರ ಸಾವಿನಿಂದ ಕಳೆದ 3 ದಿನಗಳಿಂದ ಜನರಿಂದ ಗಿಜಿಗುಡುತ್ತಿದ್ದ ಗುಡಿಗೆರೆ ಕಾಲನಿಯಲ್ಲಿ ರವಿವಾರ ನೀರವ ಮೌನ ಆವರಿಸಿತ್ತು. ಎಲ್ಲೆಡೆ ದುಃಖ ಮಡುಗಟ್ಟಿತ್ತು.

ಹುತ್ಮಾತನಾದ ಯೋಧ ಎಚ್.ಗುರು ಅವರ ಮನೆ ಸೇರಿದಂತೆ ಇಡೀ ಕಾಲನಿಯಲ್ಲಿ ನೀರವ ವೌನ ಆವರಿಸಿದ್ದು ಇನ್ನು ಕುಟುಂಬಸ್ಥರು ದುಖಃದಿಂದ ಹೊರ ಬಂದಿಲ್ಲ. ತಂದೆ ಹೊನ್ನಯ್ಯ, ತಾಯಿ ಚಿಕ್ಕೋಳಮ್ಮ, ಪತ್ನಿ ಕಲಾವತಿ, ತಮ್ಮಂದಿರಾದ ಮಧು, ಆನಂದ ಅವರ ಗೋಳಾಟ ನಿಂತಿಲ್ಲ. ಯೋಧ ಗುರುವನ್ನು ನೆನೆದು ಕಣ್ಣೀರು ಹಾಕುತ್ತಿದ್ದು, ವಿಶ್ರಾಂತಿ ಇಲ್ಲದೆ ಬಳಲುತ್ತಿದ್ದಾರೆ.

ಪತ್ನಿ ಕಲಾವತಿ ರಾತ್ರಿಯಿಂದ ಊಟ ಮಾಡದೇ ದುಖಃದ ಮಡುವಿನಲ್ಲೇ ಕುಸಿದು ಬಿದ್ದಿದ್ದಾರೆ. ಬಳಿಕ ಅವರನ್ನು ಅಂಬುಲೆನ್ಸ್ ಮೂಲಕ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ತಂದೆ ಹೊನ್ನಯ್ಯ ಅವರನ್ನು ಸಹ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ಸೇರಿಸಿದ್ದು ವೈದ್ಯಾಧಿಕಾರಿ ಡಾ.ವೆಂಕಟೇಶ್ ಚಿಕಿತ್ಸೆ ನೀಡಿದರು.

ಹುತಾತ್ಮ ಯೋಧ ಎಚ್.ಗುರು ಅವರ ಅಂತ್ಯಕ್ರಿಯೆಯನ್ನು ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯ ಮೆಳ್ಳಹಳ್ಳಿ ಬಳಿ ರಸ್ತೆ ಬದಿಯಲ್ಲೆ ಮಾಡಿರುವ ಹಿನ್ನಲೆಯಲ್ಲಿ ಜನ ಸಾಗರವೇ ಹರಿದು ಬರುತ್ತಿದ್ದು, ಚಿತಾಭಷ್ಮಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರು ಯೋಧನನ್ನು ಗುಣಗಾನ ಮಾಡುತ್ತಿದ್ದಾರೆ. ಪ್ರವಾಸಿಗರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಯೋಧ ಗುರು ಅವರ ಸಮಾಧಿಗೆ ಜನತೆ ಪೂಜೆ ಸಲ್ಲಿಸಿ ಜೈಹಿಂದ್, ವೀರ ಯೋಧನಿಗೆ ಜಯವಾಗಲಿ, ಪಾಕಿಸ್ತಾನಕ್ಕೆ ಧಿಕ್ಕಾರ, ಎಂದು ಇಡೀ ಜನತೆಯೇ ಅಂತ್ಯಸಂಸ್ಕಾರ ಸ್ಥಳದಲ್ಲಿ ಜಯ ಘೊಷಣೆ ಮೊಳಗಿಸುತ್ತ ಗುರು ಅಮರ್ ರಹೇ ಎಂದು ಘೋಷಣೆ ಕೂಗುತ್ತಿದ್ದಾರೆ.

ಹಲವರಿಂದ ನೆರವಿನ ಹಸ್ತ: ಹುತಾತ್ಮ ಯೋಧ ಗುರು ಅವರ ಮನೆಗೆ ಹಲವರು ಭೇಟಿ ನೀಡಿ ಕುಟುಂಬದವರನ್ನು ಸಂತೈಸಿದರು. ಆರ್ಥಿಕ ನೆರವನ್ನು ನೀಡಿ ಸಾಂತ್ವನ ಹೇಳಿದರು.

ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರ ಸೊಸೆ ಕವಿತಾ ಸಂತೋಷ್ ಅವರು ಗುರು ಅವರ ಮನೆಗೆ ಭೇಟಿ ನೀಡಿ, ವೈಯುಕ್ತಿಕವಾಗಿ 25 ಸಾವಿರ ರೂ ಧನಸಹಾಯ ನೀಡಿದ್ದಾರೆ. ನಂತರ ಸಚಿವರ ಬೆಂಬಲಿಗರು ಸಂಗ್ರಹಿಸಿದ್ದ 36,405 ರೂ. ಗಳನ್ನು ಗುರು ತಾಯಿ ಚಿಕ್ಕೋಳಮ್ಮ ಅವರಿಗೆ ನೀಡಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಜಿಪಂ ಸದಸ್ಯೆ ಸುಕನ್ಯಹನುಮಂತೇಗೌಡ, ದೊಡ್ಡರಸಿನಕೆರೆ ಮಂಚೇಗೌಡ, ದೇಣಿಗೆ ಸಂಗ್ರಹದ ಮುಖ್ಯಸ್ಥ ಚಿಕ್ಕರಸಿನಕೆರೆ ಮೂರ್ತಿ, ಅಮೀನ್ ಶಿವಲಿಂಗಯ್ಯ, ಯೋಗೇಶ್, ರವೀಂದ್ರ, ಶೆಟ್ಟಹಳ್ಳಿ ಶಿವರಾಜು ಸೇರಿದಂತೆ ಇತರರಿದ್ದರು. 

ಬೆಲ್‌ಬಾಟಂ ಚಲನಚಿತ್ರ ತಂಡದವರು ಗುರು ಮನೆಗೆ ಭೇಟಿ ನೀಡಿದರು. ಚಿತ್ರದ ನಾಯಕಿ ಹರಿಪ್ರಿಯಾ ಬಾವುಕರಾಗಿ ಕಣ್ಣೀರಿಟ್ಟರು. ನಟ ನಿರ್ದೇಶಕ ರಿಷಬ್ ಶೆಟ್ಟಿ 50 ಸಾವಿರ ರೂ. ಚೆಕ್ ನೀಡಿ ಗುರು ಕುಟುಂಬ ವರ್ಗದವರನ್ನು ಸಂತೈಸಿದರು. ನಿರ್ಮಾಪಕ ಸಂತೋಷ್ ಕುಮಾರ್ 25 ಸಾವಿರ ರೂ.ಚೆಕ್ ನೀಡಿದರು. ಶಿವಮೊಗ್ಗ ಜಿಲ್ಲಾ ಪಂಚಾಯತ್ ವತಿಯಿಂದ 78,401 ರೂ. ಸಹಾಯಧನ ನೀಡಲಾಯಿತು. ಜಿಪಂ ಕುಂದುಕೊರತೆ ನಿವಾರಣ ಪ್ರಾಧಿಕಾರದ ಅಧ್ಯಕ್ಷ ಬಾಬಿ ಪತ್ತಾರ್ ಅವರು ಜಿಪಂ ಪರವಾಗಿ ಗುರು ಪೋಷಕರಿಗೆ ಸಹಾಯ ಧನ ವಿತರಿಸಿದರು. 

ಶಿವಮೊಗ್ಗದಿಂದ ಬಂದಿದ್ದ ಅಂಧ ಸಂಗೀತ ಶಿಕ್ಷಕ ಜಿ.ಎಚ್. ಮಂಜುನಾಥ್ ಅವರು ಕೂಡ ಗುರು ಕುಟುಂಬದವರನ್ನು ಕಂಡು ಸಂತೈಸಿ ಆರ್ಥಿಕ ಸಹಾಯ ನೀಡಿ ದೇಶ ಪ್ರೇಮ ಮೆರೆದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News