ಮಹಾನ್‌ ಸುಳ್ಳುಗಾರ ಮೋದಿಯ ಸರ್ವಾಧಿಕಾರಕ್ಕೆ ಜನ ತಕ್ಕ ಪಾಠ ಕಲಿಸಬೇಕು: ದಿನೇಶ್‌ ಗುಂಡೂರಾವ್

Update: 2019-02-17 18:12 GMT

ಕೋಲಾರ,ಫೆ.17: ಮಹಾನ್‌ ಸುಳ್ಳುಗಾರ ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಕ್ಕೆ ಜನ ತಕ್ಕ ಪಾಠ ಕಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ಗುಂಡೂರಾವ್ ಸಲಹೆ ನೀಡಿದರು.

ನಗರದಲ್ಲಿ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್‌ಟಿಯುಸಿ) ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಕಾರ್ಮಿಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ‘ಕೇಂದ್ರ ಸರ್ಕಾರ ನಾಲ್ಕು ವರ್ಷದಿಂದ ಜಾರಿಗೊಳಿಸಿರುವ ಯೋಜನೆಗಳಿಂದ ಜನರಿಂದ ದುಡ್ಡು ಕೀಳುವ ಕೆಲಸ ಮಾಡುತ್ತಿದೆ’ ಎಂದು ಆರೋಪಿಸಿದರು.

‘ಸಾಲ ಮನ್ನಾ ಮಾಡಲು ನಮ್ಮ ರಾಜ್ಯ ಸರ್ಕಾರಕ್ಕೆ ಇರುವ ಧೈರ್ಯ ಕೇಂದ್ರಕ್ಕೆ ಇಲ್ಲ. ಪ್ರಧಾನಿ ಧರಿಸುವ ಬಟ್ಟೆಯ ವೆಚ್ಚ ಲಕ್ಷ ಲಕ್ಷ. ಮೋದಿ ಮಾತಿನಲ್ಲಿ ಸತ್ಯವಿಲ್ಲ. ಯಾವುದನ್ನು ಬಿಡಬೇಕು. ಯಾವುದನ್ನ ನಂಬಬೇಕು ಎಂಬುದು ಗೊತ್ತಾಗುತ್ತಿಲ್ಲ. ಅವರು ಮಹಾನ್‌ ಸುಳ್ಳುಗಾರ ಎಂದು ಟೀಕಿಸಿದರು. 

‘ಸುಳ್ಳಿನ ಭರವಸೆಗಳಿಗೆ ಜನ ತಕ್ಕ ಪಾಠ ಕಲಿಸಬೇಕು. ಹಿಟ್ಲರ್ ಧೋರಣೆ ಅನುಸರಿಸುತ್ತಿರುವ ಮೋದಿಯನ್ನು ಮನೆಗೆ ಕಳುಹಿಸುವುದು ಅನಿವಾರ್ಯವಾಗಿದೆ. ಬಿಜೆಪಿ ಧರ್ಮದ ಹೆಸರಿನಲ್ಲೂ ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ 5.35 ಲಕ್ಷ ಕಾರ್ಮಿಕರಿಗೆ ವಿವಿಧ ಯೋಜನೆಗಳಡಿ ಸೌಕರ್ಯ ವಿತರಿಸಿದೆ. ಹಿಂದೆ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಒಂದು ಲಕ್ಷದಷ್ಟಿದ್ದ ಕಾರ್ಮಿಕರ ಸಂಖ್ಯೆ ಈಗ 20 ಲಕ್ಷಕ್ಕೇರಿದೆ. ಇದುವರೆಗೂ ಜಿಲ್ಲೆಯಲ್ಲಿ 5 ಕೋಟಿಯಷ್ಟು ಹಣ ಫಲಾನುಭವಿಗಳಿಗೆ ವಿತರಿಸಲಾಗಿದೆ’ ಎಂದು ಹೇಳಿದರು. 

ಕಾರ್ಮಿಕ ಸಚಿವ ವೆಂಕಟರಮಣಪ್ಪ ಮಾತನಾಡಿ, ‘ಪ್ರತಿಯೊಂದು ಸಮುದಾಯದಲ್ಲೂ ಕಾರ್ಮಿಕರಿದ್ದು, ಯಾವುದೇ ಪಕ್ಷ ಬೇಧವಿಲ್ಲದೆ ಸೌಕರ್ಯ ಕಲ್ಪಿಸಲಾಗುತ್ತಿದೆ’ ಎಂದು ಹೇಳಿದರು.

‘ಹೊರ ರಾಜ್ಯದಿಂದ ಬಂದಿರುವ ಕಾರ್ಮಿಕರಿಗೂ ಸೌಕರ್ಯ ಕಲ್ಪಿಸಲಾಗುತ್ತಿದೆ. ಬೆಂಗಳೂರಿನ ಪೀಣ್ಯದಲ್ಲಿ ವಸತಿ ನಿರ್ಮಿಸಲಾಗಿದ್ದು ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ, 20 ಕೋಟಿ ವೆಚ್ಚದಲ್ಲಿ ವಸತಿ ನಿರ್ಮಿಸಲಾಗುತ್ತಿದ್ದು, ವಸತಿ ರಹಿತರಿಗೆ ವಿತರಿಸಲು ಕ್ರಮಕೈಗೊಳ್ಳಲಾಗುವುದು’ ಎಂದು ತಿಳಿಸಿದರು. 

‘ಬಿಜೆಪಿಯವರು ಶಾಸಕರನ್ನು ಮಾರುಕಟ್ಟೆಯಲ್ಲಿ ಸಿಗುವ ತರಕಾರಿ ಅಂತ ತಿಳುಕೊಂಡಿದ್ದಾರೆ. ಹಿಂದೆ ನಾನು ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ಯಡಿಯೂರಪ್ಪನ ವರ್ತನೆ ನೋಡಿ ಪಕ್ಷ ಬಿಡಬೇಕಾಯಿತು. ಮುಖ್ಯಮಂತ್ರಿ ಆಗಿ ಜೈಲಿ ಹೋಗಿದ್ದ ಕೀರ್ತಿ ಯಡಿಯೂರಪ್ಪನಿಗೆ ಸಲ್ಲುತ್ತದೆ ಎಂದು ವ್ಯಂಗ್ಯವಾಡಿದರು.

ಸಂಸದ ಕೆ.ಎಚ್.ಮುನಿಯಪ್ಪ ಮಾತನಾಡಿ, ‘ದೇಶದಲ್ಲಿ ಜಾತ್ಯತೀತ ಪಕ್ಷಗಳು ಒಟ್ಟಾಗಿ ಕೆಲಸ ಮಾಡುತ್ತಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೋಮುವಾದ ಶಕ್ತಿಗಳನ್ನು ಮಟ್ಟ ಹಾಕಲು ಸಂಕಲ್ಪ ಮಾಡಿವೆ. ಇದರ ಜತೆಗೆ ಜನರು ಸಹ ಬದಲಾವಣೆ ಬಯಸಬೇಕು ಎಂದು ಮನವಿ ಮಾಡಿದರು.

ಶಾಸಕ ಕೆ.ವೈ.ನಂಜೇಗೌಡ, ಕೆಪಿಸಿಸಿ ಕಾರ್ಯದರ್ಶಿ ಈಶ್ವರ್ ಖಂಡ್ರೆ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಮಾಜಿ ಸಚಿವ ಕೆ.ಎ.ನಿಸಾರ್ ಅಹಮದ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ವಂಸಂತಾ ಕವಿತಾ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News