ಅಸ್ಸಾಂ ಮತ್ತೊಂದು ಕಾಶ್ಮೀರವಾಗಲು ಅವಕಾಶ ನೀಡಬೇಡಿ: ಅಮಿತ್ ಶಾ

Update: 2019-02-18 03:41 GMT

ಗುವಾಹತಿ, ಫೆ. 18: ಅಸ್ಸಾಂ ರಾಜ್ಯ ಮತ್ತೊಂದು ಕಾಶ್ಮೀರವಾಗಿ ಪರಿವರ್ತನೆಯಾಗಲು ಅವಕಾಶ ನೀಡುವುದಿಲ್ಲ ಹಾಗೂ ಪುಲ್ವಾಮದಲ್ಲಿ ನಡೆದ ಸಿಆರ್‌ಪಿಎಫ್ ಜವಾನರ ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.

ಲಖೀಂಪುರದಲ್ಲಿ ನಡೆದ ಭಾರತೀಯ ಜನತಾಪಕ್ಷದ ಯುವಮೋರ್ಚಾ ರ್ಯಾಲಿಯಲ್ಲಿ ಪೌರತ್ವ ತಿದ್ದುಪಡಿ ಮಸೂದೆಯನ್ನು ಅವರು ಬಲವಾಗಿ ಸಮರ್ಥಿಸಿಕೊಂಡರು. ಅಸ್ಸಾಂ ಎರಡನೇ ಕಾಶ್ಮೀರವಾಗುವುದನ್ನು ತಡೆಯುವ ಸಲುವಾಗಿ ಈ ಮಸೂದೆ ಮಂಡಿಸಲಾಗಿದೆ ಎಂದು ಹೇಳಿದರು.

ಅಸ್ಸಾಂನಲ್ಲಿ ಶೇಕಡ 34ರಷ್ಟು ಮುಸ್ಲಿಂ ಜನಸಂಖ್ಯೆ ಇರುವ ಹಿನ್ನೆಲೆಯಲ್ಲಿ ಶಾ ಈ ಹೇಳಿಕೆ ನೀಡಿದ್ದಾರೆ. ಮುಸ್ಲಿಮರ ವಿರುದ್ಧ ದ್ವೇಷ ಹರಡುವ ಮೂಲಕ ಹಿಂದೂ ಮತಗಳ ಧ್ರುವೀಕರಣ ಪ್ರಯತ್ನ ಮಾಡಿದ್ದಾರೆ ಎಂದು ಹಿರಿಯ ಮುಖಂಡರುಗಳು ಆರೋಪಿಸಿದ್ದಾರೆ.

ರಾಜ್ಯಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಆಂಗೀಕಾರವಾಗದಿರುವ ಬಗ್ಗೆ ಉಲ್ಲೇಖಿಸಿದ ಅವರು, "ಈ ಮಸೂದೆಯ ಉದ್ದೇಶ ಅಸ್ಸಾಂನ ಐಡೆಂಟಿಟಿಗೆ ಒದಗಿರುವ ಅಪಾಯವನ್ನು ತಡೆಯುವುದು. ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಈ ಮಸೂದೆಯನ್ನು ಮತ್ತೆ ತರಲಿದೆ" ಎಂದು ಹೇಳಿದರು.

ವಿವಾದಿತ ಎನ್‌ಆರ್‌ಸಿ ಬಗ್ಗೆ ಪ್ರಸ್ತಾಪಿಸಿದ ಅವರು, ಇದು ನಮ್ಮ ಬದ್ಧತೆ. ನುಸುಳುಕೋರರಿಗೆ ಅಸ್ಸಾಂನಲ್ಲಿ ಅವಕಾಶವಿಲ್ಲ. ಅಗತ್ಯಬಿದ್ದರೆ ಎನ್‌ಆರ್‌ಸಿ ಪರಿಷ್ಕರಿಸಿ, ನುಸುಳುಕೋರರನ್ನು ಪತ್ತೆ ಹಚ್ಚಿ ಗಡೀಪಾರು ಮಾಡಲು ಸಿದ್ಧ ಎಂದು ಘೋಷಿಸಿದರು.

"ಕಾಶ್ಮೀರವಾಗಲೀ, ಈಶಾನ್ಯವಾಗಲೀ ನಮ್ಮ ಸರ್ಕಾರ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತುಹಾಕಲಿದೆ. ಏಕೆಂದರೆ ಕೇಂದ್ರದಲ್ಲಿ ಇರುವುದು ನರೇಂದ್ರ ಮೋದಿ ಸರ್ಕಾರ; ಕಾಂಗ್ರೆಸ್ ಸರ್ಕಾರವಲ್ಲ. ಮೋದಿ ಬಳಿ ಇಂಥ ಎಲ್ಲ ಕೃತ್ಯಗಳಿಗೂ ಉತ್ತರವಿದೆ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News