ಚಿಕ್ಕಮಗಳೂರು: ಪ್ರಪಾತಕ್ಕೆ ಉರುಳಿದ ಕಾರು; ಬಂಟ್ವಾಳ ಮೂಲದ ನಾಲ್ವರು ಮೃತ್ಯು

Update: 2019-02-18 11:47 GMT

ಚಿಕ್ಕಮಗಳೂರು, ಫೆ.18: ಯಕ್ಷಗಾನ ವೀಕ್ಷಣೆಗೆಂದು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊಸ ಕಾರಿನಲ್ಲಿ ಆಗಮಿಸುತ್ತಿದ್ದ ಒಂದೇ ಕುಟುಂಬದ ಐವರಿದ್ದ ಕಾರೊಂದು ಕದಂಕಕ್ಕೆ ಉರುಳಿ ಬಿದ್ದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಜಿಲ್ಲೆಯ ಕಳಸ ಹೋಬಳಿ ವ್ಯಾಪ್ತಿಯ ಹಿರೇಬೈಲು ಸಮೀಪದಲ್ಲಿ ವರದಿಯಾಗಿದೆ.

ಘಟನೆಯಲ್ಲಿ ಒಂದೇ ಕುಟುಂಬದ ಇಬ್ಬರು ಮಹಿಳೆಯರು, ಇಬ್ಬರು ಪುರುಷರು ಮೃತಪಟ್ಟಿದ್ದು, ಮೃತರನ್ನು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ವಿಶ್ವನಾಥ್(55) ಪುಪ್ಷಾವತಿ (48) ದಂಪತಿ ಹಾಗೂ ರಾಹುಲ್ ರೈ(58) ಮಮತಾ(51) ದಂಪತಿ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಸಂಜೀವ್ ಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಕಳಸ ಪಟ್ಟಣದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುಟುಂಬದ ಸದಸ್ಯರು ಕಳಸ ಪಟ್ಟಣ ನಿವಾಸಿ ಹಾಗೂ ಉದ್ಯಮಿ ರವಿ ರೈ ಎಂಬವರ ಸಂಬಂಧಿಕರೆಂದು ತಿಳಿದು ಬಂದಿದೆ.

ಸೋಮವಾರ ಕಳಸ ಸಮೀಪದ ಬಾಳೆಹೊಳೆ ಗ್ರಾಮದಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಸ್ಥಳೀಯರು ಆಯೋಜಿಸಿದ್ದು, ಈ ಯಕ್ಷಗಾನದ ಕಲಾವಿದರು ಮೃತರ ಕುಟುಂಬದ ಸದಸ್ಯರೆಂದು ತಿಳಿದು ಬಂದಿದೆ. ಸಂಬಂಧಿಕರ ಯಕ್ಷಗಾನ ವೀಕ್ಷಣೆಗೆಂದು ಬಂಟ್ವಾಳದಿಂದ ಚಾರ್ಮಾಡಿ ಘಾಟ್ ಹೆದ್ದಾರಿ ಮೂಲಕ ತಮ್ಮ ಹೊಸ ವ್ಯಾಗನಾರ್ ಕಾರಿನಲ್ಲಿ ಆಗಮಿಸಿದ್ದ ಇವರು ಕೊಟ್ಟಿಗೆಹಾರ ಕಳಸ ರಸ್ತೆಯಲ್ಲಿ ಆಗಮಿಸಿ ದಾರಿ ಮಧ್ಯೆ ಹಿರೇಬೈಲು ಎಂಬಲ್ಲಿ ಬಾಳೆಹೊಳೆ ಸಂಪರ್ಕಕ್ಕಿರುವ ಮಲ್ಲೇಶನಗುಡ್ಡದ ಒಳ ರಸ್ತೆಯಲ್ಲಿ ಬಾಳೆಹೊಳೆಯತ್ತ ಪಯಣಿಸುತ್ತಿದ್ದರು. 

ಈ ಒಳ ರಸ್ತೆಯಿಂದ ಸುಮಾರು 10 ಕಿಮೀ ಪಯಣಿಸಿದ ಬಳಿಕ ಹಾಲು ಮರ ಎಂಬಲ್ಲಿರುವ ಕಾಫಿ ತೋಟದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಸುಮಾರು 50 ಮೀಟರ್ ಆಳದ ಕಂದಕಕ್ಕೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದ್ದು, ಈ ಘಟನೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಪುರುಷರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಕಳಸ ಪೊಲೀಸರು ಹಾಗೂ ಸ್ಥಳೀಯರು ಹರಸಾಹಸಪಟ್ಟು ಕಂದಕದಿಂದ ಮೃತರ ದೇಹಗಳನ್ನು ಮೇಲಕ್ಕೆ ತಂದಿದ್ದಾರೆಂದು ತಿಳಿದು ಬಂದಿದೆ. ಘಟನೆ ಸಂಬಂಧ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಮುಂದುವರಿಸಿದ್ದಾರೆ.

ನೆರವಿಗೆ ಬಂದ ಸ್ಥಳೀಯರು: ಕಾರು ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಹಿರೇಬೈಲು ಹಾಗೂ ಸುತ್ತಮುತ್ತಲ ಗ್ರಾಮಗಳ ಸುಮಾರು 300ಕ್ಕೂ ಹೆಚ್ಚು ಜನ ಸ್ಥಳಕ್ಕೆ ಆಗಮಿಸಿದ್ದರು. ಕಾರು ಉರುಳಿ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿಯೇ ನಾಲ್ವರ ದೇಹಗಳು ಜಜ್ಜಿಟ್ಟಂತೆ ಕಂಡುಬಂದಿದ್ದು, ಸೀಟ್‍ ಬೆಲ್ಟ್ ಕಟ್ಟಿದಂತೆ ಕಾರಿನಲ್ಲಿ ಸಿಲುಕಿಕೊಂಡಿದ್ದ ಮೃತ ದೇಹಗಳನ್ನು ಹೊರ ತೆಗೆಯುವುದು ಸವಾಲಾಗಿದ್ದ ಸಂದರ್ಭದಲ್ಲಿ ಸ್ಥಳೀಯರು ಸಲಾಕೆಗಳಿಂದ ಕಾರಿನ ಡೋರ್ ಕಳಚಿ ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ. ಅಲ್ಲದೇ ಸುಮಾರು 50 ಮೀಟರ್ ಆಳದ ಕಂದಕದಿಂದ ಮೃತ ದೇಹಗಳನ್ನು ಸ್ಥಳೀಯರು ಮೇಲಕ್ಕೆ ಹೊತ್ತು ತಂದಿದ್ದಾರೆಂದು ತಿಳಿದು ಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News