ಶಿವಮೊಗ್ಗ: ಆರ್​ಟಿಓಗೆ ಚಪ್ಪಲಿ ತೋರಿಸಿ ನಿಂದಿಸಿದ ಬಿಜೆಪಿ ಕಾರ್ಪೋರೇಟರ್ ನೇತೃತ್ವದ ಏಜೆಂಟ್‍ಗಳ ತಂಡ

Update: 2019-02-18 13:23 GMT

ಶಿವಮೊಗ್ಗ, ಫೆ. 18: ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಬಿಜೆಪಿ ಮಹಾನಗರ ಪಾಲಿಕೆ ಸದಸ್ಯರೊಬ್ಬರ ನೇತೃತ್ವದಲ್ಲಿ ಕೆಲ ಆರ್‍ಟಿಓ ಏಜೆಂಟ್‍ಗಳು, ಉಪ ಸಾರಿಗೆ ಆಯುಕ್ತರಿಗೆ ಚಪ್ಪಲಿ ತೋರಿಸಿ ಅವ್ಯಾಚ್ಯ ಶಬ್ದ ಹಾಗೂ ಏಕವಚನದಿಂದ ನಿಂದಿಸಿ ಬೆದರಿಕೆಯ ಸ್ವರೂಪದಲ್ಲಿ ಮಾತನಾಡುತ್ತಿದ್ದಾರೆನ್ನಲಾದ ಹಾಗೂ ಪರಿಶಿಷ್ಟ ವರ್ಗಕ್ಕೆ ಸೇರಿದ ನೌಕರರಿಗೆ ಜಾತಿ ವಿಷಯದ ಅಪಮಾನ ಮಾಡುತ್ತಿರುವ ವೀಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಶನಿವಾರ ಮಧ್ಯಾಹ್ನದ ನಂತರ ಆರ್‍ಟಿಓ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಪ್ರಸ್ತುತ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಸೋಮವಾರ ಜಿಲ್ಲಾ ಸರ್ಕಾರಿ ನೌಕರರ ಸಂಘ ಹಾಗೂ ಡಿ.ಎಸ್.ಎಸ್ ಸಂಘಟನೆಯ ಪ್ರಮುಖರು ಕಚೇರಿಗೆ ಆಗಮಿಸಿ ಘಟನೆಯ ಕುರಿತಂತೆ ಆರ್​ಟಿಓ ರಿಂದ ಮಾಹಿತಿ ಕಲೆ ಹಾಕಿದ್ದಾರೆ. ತಪ್ಪಿತಸ್ಥರ ವಿರುದ್ದ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. 

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಉಪ ಸಾರಿಗೆ ಆಯುಕ್ತರೂ ಆದ ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀನಿವಾಸಯ್ಯರವರು ಸೋಮವಾರ ಮಧ್ಯಾಹ್ನ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಹಾನಗರ ಪಾಲಿಕೆ ಸದಸ್ಯ ಇ.ವಿಶ್ವಾಸ್, ಮೋಹನ್, ಅಲಸೆ ರಾಜು, ಲಕ್ಷ್ಮಣ್, ಜಾವೀದ್, ಮುನಾಫ್, ಸಿರಾಜ್ ಹಾಗೂ ಇತರರ ಮೇಲೆ ದೂರು ದಾಖಲಿಸಿದ್ದಾರೆ. ಜಾತಿ ನಿಂದನೆ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ, ನಿಂದನೆ ಮತ್ತಿತರ ಆರೋಪ ಹೊರಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಜಾತಿನಿಂದನೆ ಸೇರಿದಂತೆ ಐಪಿಸಿಯ ವಿವಿಧ ಕಲಂಗಳಡಿ ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ. 

ಘಟನೆ ಹಿನ್ನೆಲೆ: ಇತ್ತೀಚೆಗೆ ಶ್ರೀನಿವಾಸಯ್ಯರವರು ಉಪ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದರು. ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ವಿಪರೀತವಾಗಿರುವುದು ಅವರ ಗಮನಕ್ಕೆ ಬಂದಿತ್ತು. ಜೊತೆಗೆ ಕೆಲ ಸಿಬ್ಬಂದಿಗಳು ಅನಧಿಕೃತವಾಗಿ ಸಹಾಯಕರನ್ನು ನೇಮಿಸಿಕೊಂಡು, ಅವರ ಮೂಲಕ ತಮ್ಮ ಕೆಲಸ ಮಾಡಿಸುತ್ತಿದ್ದುದು ಕಂಡುಬಂದಿತ್ತು. 

ಸಿಬ್ಬಂದಿಗಳು ಕಾರ್ಯನಿರ್ವಹಿಸುವ ಸ್ಥಳಗಳಿಗೆ ಮಧ್ಯವರ್ತಿಗಳ ಪ್ರವೇಶದ ಮೇಲೆ ನಿರ್ಬಂಧ ವಿಧಿಸಿದ್ದರು. ನಿಗದಿಪಡಿಸಿದ ಸ್ಥಳಗಳಲ್ಲಿಯೇ ಕೆಲಸ ಕಾರ್ಯ ಮಾಡಿಕೊಂಡು ಹೋಗುವಂತೆ ಆದೇಶಿಸಿದ್ದರು. ಕಚೇರಿಯ ಕೆಲಸಕಾರ್ಯಗಳಲ್ಲಿಯೂ ಸುಧಾರಣೆಗೆ ಮುಂದಾಗಿದ್ದರು. ಹಾಗೆಯೇ ಹಿರಿಯ ಅಧಿಕಾರಿಗಳ ಮಾಹಿತಿಯಿಲ್ಲದೆ ಸಹಾಯಕರನ್ನು ನಿಯೋಜಿಸಿಕೊಂಡಿದ್ದ ಸಿಬ್ಬಂದಿಗಳ ವಿರುದ್ಧ ಕಿಡಿಕಾರಿದ್ದರು. ಅಲ್ಲದೇ, ವಿಷಯವೊಂದಕ್ಕೆ ಸಂಬಂಧಿಸಿದಂತೆ ಅಧಿಕಾರಿಯೋರ್ವರ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದ ಯುವಕನೋರ್ವನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. 

ಗಲಾಟೆ: ಸಿಬ್ಬಂದಿಯು ಏಜೆಂಟ್‍ಗಳ ಬಳಿ ಈ ವಿಷಯ ತಿಳಿಸಿದ್ದರು. ಆರ್​ಟಿಓರವರು ಕೈಗೊಂಡ ಕೆಲ ನಿರ್ಧಾರಗಳ ಬಗ್ಗೆ ಮೊದಲ ಕುಪಿತರಾಗಿದ್ದ ಕೆಲ ಏಜೆಂಟ್‍ಗಳು, ಆರ್​ಟಿಓ ಏಜೆಂಟ್ ಆಗಿಯೂ ಕಾರ್ಯನಿರ್ವಹಿಸುತ್ತಿರುವ ಬಿಜೆಪಿ ಕಾರ್ಪೋರೇಟರ್ ವಿಶ್ವಾಸ್ ನೇತೃತ್ವದಲ್ಲಿ ಆರ್​ಟಿಓ ಹಾಗೂ ಅವರ ಸಿಬ್ಬಂದಿಗಳನ್ನು ನಿಂದಿಸಿ, ಏಕವಚನದಲ್ಲಿ ಮಾತನಾಡಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. 

ಏಜೆಂಟ್‍ಗಳ ಈ ಪ್ರಕರಂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಜೊತೆಗೆ ಕೆಲವರು ಮೊಬೈಲ್ ಪೋನ್‍ನಲ್ಲಿ ಸೆರೆ ಹಿಡಿದಿದ್ದರು. ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ವಿಷಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೀಡಾಗುತ್ತಿದ್ದಂತೆ ಆರ್​ಟಿಓ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆಂದು ತಿಳಿದುಬಂದಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News