ಮದ್ರಸಾಗಳನ್ನು ತಪಾಸಣೆ ಮಾಡಬೇಕು, ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸಬೇಕು: ಸೊಗಡು ಶಿವಣ್ಣ

Update: 2019-02-18 14:07 GMT

ತುಮಕೂರು,ಫೆ.18: ದೇಶದಲ್ಲಿ ಎಲ್ಲಾ ಮುಸ್ಲಿಂ ಸಂಘಟನೆಗಳನ್ನು ನಿಷೇಧಿಸುವುದರೊಂದಿಗೆ, ಮದ್ರಸಾಗಳನ್ನು ತೀವ್ರ ತಪಾಸಣೆಗೆ ಒಳಪಡಿಸಬೇಕಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪುಲ್ವಾಮ ದಾಳಿಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಠಿಣ ಕ್ರಮ ತೆಗೆದುಕೊಂಡು ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬೇಕಾಗಿದೆ. ದೇಶದ ಜನರು ಸರ್ಕಾರಕ್ಕೆ ಬೆಂಬಲ ನೀಡುತ್ತಾರೆ. ದೇಶದ್ರೋಹಿಗಳನ್ನು ಮಟ್ಟ ಹಾಕಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.

ಮುಜಾಹಿದೀನ್, ಎಸ್‍ಡಿಪಿಐ ಅಂತಹ ಸಂಘಟನೆಗಳನ್ನು ಬ್ಯಾನ್ ಮಾಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಗಂಭೀರ ಸ್ಥಿತಿ ಎದುರಿಸಬೇಕಾಗುತ್ತದೆ. ಹೈದರಾಬಾದ್‍ನ ಉವೈಸಿ ಸಹೋದರರನ್ನು ಮೊದಲು ಬಂಧಿಸಬೇಕಿದೆ. ಅವರು ಅಣ್ಣ-ತಮ್ಮಂದಿರಂತೆ ಸಹಬಾಳ್ವೆ ನಡೆಸುತ್ತಿರುವವರಿಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಇಂದು ರಾಜಕಾರಣಿಗಳನ್ನು ನಂಬಲು ಸಾಧ್ಯವಿಲ್ಲ. ಮತಕ್ಕಾಗಿ ಓಲೈಸುವ ಕೆಲಸ ಮಾಡುತ್ತಿದ್ದಾರೆ. ದೇಶದ ರಕ್ಷಣೆಗಾಗಿ ಎಲ್ಲರೂ ಕೈ ಜೋಡಿಸಬೇಕು. ಮುಂದಿನ ದಿನಗಳಲ್ಲಿ ಪುಲ್ವಾಮದಂತಹ ಘಟನೆಗಳು ಸಂಭವಿಸದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ ಅವರು, ಭಾರತೀಯ ಸೈನಿಕರಲ್ಲಿ ಬಡವರು, ಮಧ್ಯಮ ವರ್ಗದವರು ಹೆಚ್ಚು ಇರುವುದರಿಂದ ನಾವು ಬೆನ್ನು ತಟ್ಟಿ ನಿಲ್ಲಬೇಕಾಗಿದೆ ಎಂದರು.

28 ರಂದು ಉಪವಾಸ ಸತ್ಯಗ್ರಹ

ಚನ್ನಪಟ್ಟಣ ಹಾಗೂ ರಾಮನಗರಕ್ಕೆ ತುಮಕೂರಿನಿಂದ ಪೈಪ್ ಲೈನ್ ಮೂಲಕ ನೀರು ಹರಿಸಲು ಎಕ್ಸ್ ಪ್ರೆಸ್ ಲೈನ್ ಯೋಜನೆಯನ್ನು ಸಂಪುಟದಲ್ಲಿ ಅನುಮೋದನೆ ಮಾಡಿದಲ್ಲಿ ಗುರುವಾರ (ಫೆ.28) ರಂದು ತುಮಕೂರು ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಎಸ್.ಶಿವಣ್ಣ ತಿಳಿಸಿದರು.

ಸಿದ್ಧಗಂಗಾ ಶ್ರೀಗಳ ಆಶಯದಂತೆ ದೇವರಾಯಪಟ್ಟಣ ಹಾಗೂ ಮೈದಾಳ ಕೆರೆಗೆ ಮೊದಲು ನೀರು ಬಿಡುವ ಕಾರ್ಯವನ್ನು ಮಾಡಬೇಕಾಗಿದೆ ಎಂದು ಹೇಳಿದರು. ಜಿಲ್ಲೆಯಲ್ಲಿ ಮೂವರು ಮಂತ್ರಿಗಳಿದ್ದು, ಸರ್ಕಾರವಿದ್ದೂ ಏನು ಪ್ರಯೋಜನ. ಇಂದು ರೈತ ಸಂಘಟನೆಗಳು ಹಾಗೂ ರಾಜಕಾರಣಿಗಳು ಒಂದಾಗಿಲ್ಲ. ಹಾಗಾಗಿ ಮಠಾಧಿಪತಿಗಳು ಒಂದಾಗಿ ಸೂಕ್ತ ಮಾರ್ಗದರ್ಶನ ನೀಡಿ ಜಿಲ್ಲೆಯ ನೀರಿನ ಬವಣೆಯನ್ನು ನೀಗಿಸಬೇಕು ಎಂದು ಮನವಿ ಮಾಡಿದರು. ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಸಂಪೂರ್ಣವಾಗಿ ಹರಿಸಿ ನಂತರ ತೆಗೆದುಕೊಂಡು ಹೋಗಲಿ. ಜಿಲ್ಲೆಗೆ ನೀರು ಹರಿಸದೇ ವ್ಯರ್ಥವಾಗಿ ಸಮುದ್ರಕ್ಕೆ ಹರಿದು ಹೋಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಎಂ.ಬಿ.ನಂದೀಶ್, ಕೆಪಿ ಮಹೇಶ್, ಜಯಸಿಂಹ, ನಟರಾಜು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News