ಜಮೀನು ಕಬಳಿಕೆಗೆ ಸಂಚು ಆರೋಪ: ಶಾಸಕ ಕುಮಾರಸ್ವಾಮಿ ವಿರುದ್ಧ ಸಿಪಿಐ ಧರಣಿ

Update: 2019-02-18 15:58 GMT

ಚಿಕ್ಕಮಗಳೂರು, ಫೆ.18: ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿ ಅವರು ತಾಲೂಕಿನ ಬಾಳೂರು ಹೋಬಳಿ ವ್ಯಾಪ್ತಿಯ ಕೂವೆ-ಕಲ್ಮನೆ ಗ್ರಾಮದಲ್ಲಿರುವ ದಲಿತ ವ್ಯಕ್ತಿಯ 7 ಎಕರೆ ಜಮೀನು ಕಬಳಿಸಲು ಸಂಚು ರೂಪಿಸಿದ್ದಾರೆಂದು ಆರೋಪಿಸಿ ಹಾಗೂ ಬಾಳೂರು ಪೊಲೀಸರ ಶಾಸಕರ ಪರ ನೀತಿ ಖಂಡಿಸಿ ಸೋಮವಾರ ಭಾರತ ಕಮ್ಯೂನಿಷ್ಟ್ ಪಕ್ಷದ ಬಾಳೂರು ಶಾಖೆಯ ನೂರಾರು ಕಾರ್ಯಕರ್ತರು, ಮುಖಂಡರು ಇಲ್ಲಿನ ಪೊಲೀಸ್ ಠಾಣೆ ಎದುರು ಅನಿರ್ದಿಷ್ಠಾವಧಿ ಧರಣಿ ನಡೆಸಿದರು.

ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ, ರಾಧ ಸುಂದರೇಶ್, ಬಿ.ಕೆ.ಲಕ್ಷ್ಮಣ್ ಕುಮಾರ್, ತಾಲೂಕು ಕಾರ್ಯದರ್ಶಿ ರವಿಕುಮಾರ್, ಗೋಪಾಲ್‍ಶೆಟ್ಟಿ, ಬಾಳೂರು ಸುಂದರ್, ರಮೇಶ್ ಕೆಳಗೂರು, ಸುಂಕಸಾಲೆ ರವಿ ಹಾಗೂ ಜೆಡಿಎಸ್ ಮುಖಂಡರಾದ ಲಕ್ಷ್ಮಣ್‍ಗೌಡ, ಬಿಎಸ್ಪಿ ಮುಖಂಡರಾದ ಬಿನ್ನಡಿ ಪ್ರಭಾಕರ್, ಜಯಪಾಲ್, ಪೂರ್ಣೇಶ್, ಮನೋಹರ್, ಅನಿಲ್‍ಕುಮಾರ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಹಾಗೂ ಕಲ್ಮನೆ ಗ್ರಾಮದ ನೊಂದ ಕುಟುಂಬದ ಲೋಕೇಶ್ ಮತ್ತು ಪತ್ನಿ, ಮಕ್ಕಳು ಸೋಮವಾರ ಬೆಳಗ್ಗೆ ಬಾಳೂರು ಪೊಲೀಸ್ ಠಾಣೆ ಎದುರು ಜಮಾಯಿಸಿ ಶಾಸಕ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾತನಾಡಿದ ಮುಖಂಡರು, ಶಾಸಕ ಎಂ.ಪಿ.ಕುಮಾರಸ್ವಾಮಿ ದಲಿತ ಸಮುದಾಯದವರಾಗಿದ್ದರೂ ಶಾಸಕರಾದ ಮೇಲೆ ಬಲಾಢ್ಯರಾಗಿದ್ದಾರೆ. ಕಂಡ ಕಂಡೆಲ್ಲಲ್ಲ ಆಸ್ತಿ ಮಾಡಲು ಮುಂದಾಗಿದ್ದಾರೆ. ಈ ದುರಾಸೆಯ ಫಲವಾಗಿ ಅವರು ಬಡ ದಲಿತ ಕುಟುಂಬದ ಜಮೀನನ್ನು ಕಬಳಿಸಲು ಸಂಚು ರೂಪಿಸಿದ್ದು, ಇದಕ್ಕೆ ಸ್ಥಳೀಯ ಬಲಾಢ್ಯರು ಸಹಕಾರ ನೀಡುತ್ತಿದ್ದಾರೆ. ಶಾಸಕ ಕುಮಾರಸ್ವಾಮಿ ಅವರು ಇತ್ತೀಚೆಗೆ ಕೂವೆ-ಕಲ್ಮನೆ ಗ್ರಾಮದ ಸ.ನಂ.49 ರಲ್ಲಿರುವ ಲೋಕೇಶ್ ಎಂಬವರ ಕಾಫಿ ತೋಟಕ್ಕೆ ತಮ್ಮ ಬೆಂಬಲಿಗರು, ರೌಡಿಗಳನ್ನು ನುಗ್ಗಿಸಿ ದಲಿತ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ ಹಾಡು ಹಗಲೇ 60 ಮೂಟೆ ಕಾಫಿ ಕಟಾವು ಮಾಡಿದ್ದಾರೆ. ಜಮೀನು ಸಂಬಂಧ ಯಾವುದೇ ದಾಖಲೆಗಳಿಲ್ಲದಿದ್ದರೂ ಶಾಸಕ ಕುಮಾರಸ್ವಾಮಿ ಅವರದ್ದೇ ಜಮೀನು ಎಂದು ತಮ್ಮ ಬೆಂಬಲಿಗರು ಹಾಗೂ ಪೊಲೀಸರ ಮೂಲಕ ನೊಂದ ದಲಿತ ಲೋಕೇಶ್ ಅವರ ಕುಟುಂಬಕ್ಕೆ ಬೆದರಿಕೆ ಹಾಕಿಸಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು. 

ಕಲ್ಮನೆ ಗ್ರಾಮದ ಸ.ನಂ.49ರಲ್ಲಿರುವ ಜಮೀನು ಲೋಕೇಶ್ ಅವರಿಗೆ ಹೆತ್ತವರಿಂದ ಬಂದಿದೆ. ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆಗಳೂ ಲೋಕೇಶ್ ಅವರ ಬಳಿ ಇದೆ. ಅಲ್ಲದೇ ಕಂದಾಯ ಇಲಾಖಾಧಿಕಾರಿಗಳು ಶಾಕರಿಗಾಗಲೀ, ಅವರ ಸಂಬಂಧಿಕರಿಗಾಗಲೀ ಈ ಸರ್ವೇ ನಂಬರ್ ನಲ್ಲಿ ಯಾವುದೇ ಜಮೀನು ಇಲ್ಲ ಎಂಬುದಕ್ಕೆ ದಾಖಲೆ ನೀಡಿದ್ದಾರೆ. ಆದರೆ ಶಾಸಕರು ತಮ್ಮ ಬೆಂಬಲಿರ ಮೂಲಕ ದಲಿತ ಕುಟುಂಬಕ್ಕೆ ಬೆದರಿಕೆ ಹಾಕಿ ಜಾಗವನ್ನು ಕಬಳಿಸಲು ಸಂಚು ಮಾಡಿದ್ದಾರೆ. ಇದಕ್ಕೆ ಬಾಳೂರು ಪೊಲೀಸರು ಸಹಕಾರ ನೀಡುತ್ತಿದ್ದು, ಶಾಸಕರು ಮತ್ತು ಅವರ ಬೆಂಬಲಿಗರ ಬೆದರಿಕೆ ವಿರುದ್ಧ ದೂರು ನೀಡಿದರೆ ಜಮೀನು ಶಾಸಕರದ್ದೇ ಎಂದು ಹಿಂಬರಹ ನೀಡಿದ್ದಾರೆ. ಈ ಜಮೀನು  ಶಾಸಕರದ್ದೆ ಎನ್ನುವುದಕ್ಕೆ ಪೊಲೀಸರ ಬಳಿ ಇರುವ ದಾಖಲೆಗಳೇನು ಎಂಬುದನ್ನು ಜನರಿಗೆ ತಿಳಿಸಬೇಕೆಂದು ಧರಣಿ ನಿರತರು ಒತ್ತಾಯಿಸಿದರು. 

ಧರಣಿ ಸ್ಥಳಕ್ಕೆ ಡಿವೈಎಸ್ಪಿ ಚಂದ್ರಶೇಖರ್, ಮೂಡಿಗೆರೆ ತಹಶೀಲ್ದಾರ್ ಪದ್ಮನಾಭ ಶಾಸ್ತ್ರಿ ಹಾಗೂ ಬಾಳೂರು ಹೋಬಳಿ ಕಂದಾಯಾಧಿಕಾರಿಗಳು ಭೇಟಿ ನೀಡಿ, ಧರಣಿ ಕೈ ಬಿಡುವಂತೆ ಮನವಿ ಮಾಡಿದರು. ಈ ವೇಳೆ ಪೊಲೀಸರು ಹಾಗೂ ಕಂದಾಯಾಧಿಕಾರಿಗಳು ಧರಣಿ ನಿರತರಾಗಿದ್ದ ಸಿಪಿಐ, ಜೆಡಿಎಸ್, ಬಿಎಸ್ಪಿ ಮುಖಂಡರೊಂದಿಗೆ ಕೆಲ ಹೊತ್ತು ಘಟನೆ ಸಂಬಂಧ ಚರ್ಚೆ ನಡೆಸಿದರು. 

ಬಳಿಕ ಮಾತನಾಡಿದ ಬಾಳೂರು ಕಂದಾಯಾಧಿಕಾರಿ ಸಂತೋಷ್, ಕೂವೆ-ಕಲ್ಮನೆ ಗ್ರಾಮದಲ್ಲಿ ಶಾಸಕ ಕುಮಾರಸ್ವಾಮಿ, ಅವರ ಸಂಬಂಧಿಕರಿಗೆ ಒಂದಿಂಚೂ ಜಾಗವಿಲ್ಲ. ಈ ಜಮೀನು ಲೋಕೇಶ್ ಅವರ ಕುಟುಂಬಸ್ಥರ ಹೆಸರಿನಲ್ಲಿಯೇ ಇದೆ. ಈ ಸಂಬಂಧದ ಎಲ್ಲ ದಾಖಲಾತಿಗಳು ಸರಕಾರ ನೀಡಿರುವ ದಾಖಲೆಗಳಾಗಿವೆ ಎಂಬುದನ್ನು ಸ್ಪಷ್ಟ ಪಡಿಸಿದರು. 

ನಂತರ ಡಿವೈಎಸ್ಪಿ ಚಂದ್ರಶೇಖರ್ ಮಾತನಾಡಿ, ಘಟನೆ ಸಂಬಂಧ ಬಾಳೂರು ಪೊಲೀಸರು ತಪ್ಪೆಸಗಿದ್ದಾರೆ. ಘಟನೆಯ ಸಂಪೂರ್ಣ ತನಿಖೆಗೆ ಒಂದು ವಾರ ಕಾಲಾವಕಾಶ ನೀಡಿ, ಕಾಫಿ ಕಳವಾಗಿರುವ ಬಗ್ಗೆ ದೂರು ದಾಖಲಿಸಿ ತನಿಖೆ ಆರಂಭಿಸಲಾಗುವುದು. ಐಪಿಸಿ ಸೆಕ್ಷನ್ 145 ಅಡಿಯಲ್ಲಿ ತನಿಖೆಯಲ್ಲಿ ಬಾಳೂರು ಎಸೈ ಅವರನ್ನು ತನಿಖೆಯಿಂದ ಹೊರಗಿಟ್ಟು ತಹಶೀಲ್ದಾರ್ ಮೂಲಕ ತನಿಖೆ ಕೈಗೊಳ್ಳಲಾಗುವುದು. ಶಾಸಕ ಕುಮಾರಸ್ವಾಮಿ, ಬೆಂಬಲಿಗರು ತಪ್ಪಿತಸ್ಥರೆಂದು ಕಂಡು ಬಂದಲ್ಲಿ ಕಾನೂನು ಕ್ರಮವಹಿಸಿ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ತಹಶೀಲ್ದಾರ್ ಪದ್ಮನಾಭ ಶಾಸ್ತ್ರಿ ಕೂಡ ಸಮ್ಮತಿಸಿದರು.

ಇದಕ್ಕೆ ಧರಣಿ ನಿರತರು ಹಾಗೂ ಮುಖಂಡರು, ಕುಟುಂಬದವರು ಸಮ್ಮತಿಸಿ, 1 ವಾರದೊಳಗೆ ಘಟನೆ ಸಂಬಂಧ ತಹಶೀಲ್ದಾರ್ ಅವರು ತನಿಖೆ, ಪರಿಶೀಲನೆ ನಡೆಸಿ ಶಾಸಕರು ಹಾಗೂ ಅವರ ಬೆಂಬಲಿಗರ ವಿರುದ್ಧ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ತಾಲೂಕು ಕಚೇರಿ ಎದುರು ಧರಣಿಯನ್ನು ಮುಂದುವರಿಸಲಾಗುವುದು. ದಲಿತ ಕುಟುಂಬಕ್ಕೆ ನ್ಯಾಯ ಸಿಗುವವರೆಗೂ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು.

ಧರಣಿ ವೇಳೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಅಂದಾಜು 100ಕ್ಕೂ ಪೊಲೀಸರು ಸ್ಥಳದಲ್ಲಿ ಜಮಾಯಿಸಿದ್ದರು. ಧರಣಿಗೂ ಮುನ್ನ ಬಾಳೂರಿನ ಮುಖ್ಯ ರಸ್ತೆಯಲ್ಲಿ ಸಿಪಿಐ ಕಾರ್ಯಕರ್ತರು ಮೆರವವಣಿಗೆ ನಡೆಸಿ ಶಾಸಕ ಕುಮಾರಸ್ವಾಮಿ ಹಾಗೂ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News