ಹನೂರು ವಿಷ ಪ್ರಸಾದ ದುರಂತ: ಶ್ರದ್ದಾಂಜಲಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಕಾರ್ಯಕ್ರಮ

Update: 2019-02-18 16:15 GMT

ಹನೂರು,ಫೆ.18: ಸುಳ್ವಾಡಿ ದುರಂತದಲ್ಲಿ ಮೃತಪಟ್ಟ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಎಲ್ಲಾ ಸೌಲಭ್ಯ ಹಾಗೂ ಪ್ರಸಾದದಲ್ಲಿ ವಿಷ ಬೆರೆಸಿದ ಆರೋಪಿಗಳಿಗೆ ನ್ಯಾಯಲಯ ಕಠಿಣ ಶಿಕ್ಷೆ ವಿಧಿಸಲಿದೆ ಎಂದು ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು

ಹನೂರು ಸಮೀಪದ ಮಾರ್ಟಳ್ಳಿ ಸುಳ್ವಾಡಿ ಗ್ರಾಮದಲ್ಲಿ ಪ್ರಸಾದ ಸೇವಿಸಿ ಮೃತಪಟ್ಟವರಿಗೆ ಶ್ರದ್ದಾಂಜಲಿ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಳ್ವಾಡಿ ಪ್ರಸಾದ ದುರಂತ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ದೇವಸ್ಥಾನದ ಪ್ರಸಾದ ಪವಿತ್ರವೆಂದು ಸೇವಿಸಿ 17 ಜನರು ಮೃತಪಟ್ಟು 100ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡು ಚಿಕಿತ್ಸೆ ಪಡೆದು ಮನೆಗಳಿಗೆ ಮರಳಿದ್ದಾರೆ. ಆದರೆ ಆ ನೋವು ಮಾತ್ರ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಪ್ರಸಾದದಲ್ಲಿ ವಿಷ ಹಾಕಿದವರಿಗೆ ನ್ಯಾಯಾಲಯ ಕಠಿಣ ಶಿಕ್ಷೆ ವಿಧಿಸಲಿದೆ ಎಂದರು.

ಪ್ರಸಾದಕ್ಕೆ ವಿಷ ಹಾಕಿ ನ್ಯಾಯಾಂಗ ಬಂಧನದಲ್ಲಿರುವ ವ್ಯಕ್ತಿಗಳ ಪರ ವಕಾಲತ್ತು ವಹಿಸಿದಂತೆ ತಾಲೂಕು ಹಾಗೂ ಜಿಲ್ಲಾ ವಕೀಲರ ಸಂಘ ತೀರ್ಮಾನ ಕೈಗೊಂಡಿರುವುದು ಅಭಿನಂದನಾರ್ಹ. ಇಂತಹ ದುರ್ಘಟನೆ ದೇಶದಲ್ಲಿ ಎಲ್ಲಿಯೂ ನಡೆಯದಂತೆ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಮೃತಪಟ್ಟ ಕುಟುಂಬದವರು ಹಾಗೂ ಸಂತ್ರಸ್ತರು ಆತಂಕಕ್ಕೆ ಒಳಗಾಗಬಾರದು. ಸಂತ್ರಸ್ತರ ಪ್ರತಿ ಕುಟುಂಬಕ್ಕೂ ಸರ್ಕಾರದಿಂದ ಸಿಗುವ ಸಕಲ ಸೌಲಭ್ಯವನ್ನು ಕೊಡಿಸಲು ಕ್ರಮ ವಹಿಸಲಾಗುವುದು. ಅಲ್ಲದೇ ಜಿಲ್ಲಾ ಮಟ್ಟದ ಅಧಿಕಾರಿಗಳಿಗೂ ಈ ಬಗ್ಗೆ ಸೂಕ್ತ ಕ್ರಮವಹಿಸುವಂತೆ ಸೂಚಿಸಲಾಗುವುದು ಎಂದು ಭರವಸೆ ನೀಡಿದರು.

ಮೃತಪಟ್ಟ ವ್ಯಕ್ತಿಗಳಿಗೆ ಸಭೆಯಲ್ಲಿ ಶಾಂತಿ ಕೋರಿ ಕ್ರೈಸ್ತ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಮಾಡಿದರು. ಮೃತರ ಭಾವಚಿತ್ರದ ಮುಂದೆ ಮೇಣದ ಬತ್ತಿ ಹಚ್ಚಿಡುವ ಮೂಲಕ ಮೃತಪಟ್ಟವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಫೆ.14ರಂದು ಉಗ್ರರ ದಾಳಿಗೆ ತುತ್ತಾಗಿ ಮೃತಪಟ್ಟ 42 ವೀರಯೋಧರಿಗೆ ಇದೇ ಸಂದರ್ಭದಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಸಕ ಆರ್. ನರೇಂದ್ರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಿವಮ್ಮ, ಸದಸ್ಯ ಬಸವರಾಜು, ತಾಲೂಕು ಪಂಚಾಯತ್ ಅಧ್ಯಕ್ಷ ರಾಜೇಂದ್ರ, ಜೆಡಿಎಸ್ ಮುಖಂಡ ಮಂಜುನಾಥ್, ಕ್ರೈಸ್ತ ಪಾದ್ರಿಗಳಾದ ಸೇಂತಿಯಾಗೋ, ಪಾಕಿಯಂ, ಹೋಲಿಕ್ರಾಸ್ ಆಸ್ಪತ್ರೆಯ ಆಳಿತಾಧಿಕಾರಿ ಸಿಸ್ಟರ್ ದೀನಾ, ಮುಖಂಡರಾದ ಜಾನ್‍ಡಾನ್ ಬೋಸ್ಕೋ, ಸ್ಟೀಫನ್, ಬಾಬು, ಜಾನ್‍ಬ್ರೀಟೋ ಸೇರಿ ಹಲವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News