ಜಲ ಸಂರಕ್ಷಣೆಗಾಗಿ ‘ಜಲಾಮೃತ ಆಂದೋಲನ’: ಸಚಿವ ಕೃಷ್ಣ ಭೈರೇಗೌಡ

Update: 2019-02-18 16:22 GMT

ಬೆಂಗಳೂರು, ಫೆ. 18: ಮಳೆ ಕೊರತೆ, ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಭವಿಷ್ಯದಲ್ಲಿ ನೀರಿನ ಬವಣೆ ತಪ್ಪಿಸಲು ನೀರಿನ ಸಂರಕ್ಷಣೆಗಾಗಿ ಜಲಜಾಗೃತಿ, ನೀರಿನ ಮಿತ ಬಳಕೆ ಮತ್ತು ಅರಣ್ಯ(ಹಸಿರು) ಸಂಪತ್ತು ಹೆಚ್ಚಿಸಲು ‘2019ನ್ನು ಜಲವರ್ಷ’ವನ್ನಾಗಿ ಆಚರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಜಲಸಂರಕ್ಷಣೆ ಸಂಬಂಧ ತಜ್ಞರು, ಎನ್‌ಜಿಒಗಳು ಹಾಗೂ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಜಲವೊಂದೇ ಸಕಲ ಜೀವರಾಶಿಗಳಿಗೂ ಆಧಾರ. ಆದರೆ, ಇತ್ತೀಚಿನ ದಿನಗಳಲ್ಲಿ ‘ಬರ’ ವಾಡಿಕೆಯಾಗುತ್ತಿದ್ದು, ಸ್ವಾಭಾವಿಕ ಮಳೆ ಅನಿರೀಕ್ಷಿತವಾಗುತ್ತಿದೆ. ನೀರಿನ ಮಿತ ಬಳಕೆ ಬಗ್ಗೆ ಎಚ್ಚರ ವಹಿಸದಿದ್ದರೆ ಭವಿಷ್ಯದಲ್ಲಿ ಗಂಭೀರ ಸಮಸ್ಯೆ ಸೃಷ್ಟಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ನೀರು ಅತ್ಯಮೂಲ್ಯ ಜೀವ ಪೋಷಕ ಸಂಪನ್ಮೂಲ ಎಂಬ ಅರಿವಿಲ್ಲದೆ ಅದನ್ನು ಅಜ್ಞಾನದಿಂಣದ ವ್ಯರ್ಥ ಮಾಡಲಾಗುತ್ತಿದ್ದು, ನೀರಿನ ಬಳಕೆ, ಸಂರಕ್ಷಣೆ ಸಂಬಂಧ ‘ಜಲಾಮೃತ’ ಯೋಜನೆ ಆರಂಭಿಸುತ್ತಿದೆ ಎಂದ ಅವರು, ಗ್ರಾಮ ಪಂಚಾಯತ್, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಮಟ್ಟದಲ್ಲಿ ನೀರಿನ ಸಂರಕ್ಷಣೆ ಬಗ್ಗೆ ಅಭಿಯಾನ ನಡೆಸಲಾಗುವುದು ಎಂದರು.

ನೀರಿನ ಮೂಲಗಳ ಪುನರುಜ್ಜೀವನಕ್ಕಾಗಿ ಕೆರೆ, ಕುಂಟೆ ಸೇರಿದಂತೆ ಜಲಮೂಲಗಳ ಹೂಳು ತೆಗೆಯುವುದು, ನೂತನ ನೀರಿನ ಮೂಲಗಳನ್ನು ಗುರುತಿಸಿ ಅಭಿವೃದ್ಧಿಪಡಿಸುವುದು, ವೈಜ್ಞಾನಿಕವಾಗಿ ಚೆಕ್ ಡ್ಯಾಮ್, ಕಿಂಡಿ ಅಣೆಕಟ್ಟುಗಳು ಹಾಗೂ ಕಿರು ಜಲಾಶಯಗಳಿಗೆ ಒತ್ತು ನೀಡಲಾಗುವುದು. 12 ಸಾವಿರ ಚೆಕ್ ಡ್ಯಾಂ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.

ಜಲಾಮೃತ ಯೋಜನೆಯಡಿ ಹಸಿರೀಕರಣ ಹಾಗೂ ಅರಣ್ಯ ಅಭಿವೃದ್ಧಿಗೆ ಕಾರ್ಪೋರೇಟ್ ಸಂಸ್ಥೆಗಳು, ಎನ್‌ಜಿಓಗಳ ನೆರವು, ಸಮುದಾಯ ಸಹಭಾಗಿತ್ವದಲ್ಲಿ ರಾಜ್ಯಾದ್ಯಂತ ಜಲ ಸಂರಕ್ಷಣಾ ಆಂದೋಲನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಜಲಾಮೃತ ಆಂದೋಲನಕ್ಕೆ 500 ಕೋಟಿ ರೂ. ಹಾಗೂ ರಾಜ್ಯ ಸರಕಾರ ಹೆಚ್ಚುವರಿಯಾಗಿ 100 ಕೋಟಿ ರೂ.ಸೇರಿದಂತೆ 600 ಕೋಟಿ ರೂ.ಗಳನ್ನು ಈ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳಲಾಗುವುದು. ಜತೆಗೆ ಅರಣ್ಯ, ಜಲಸಂಪನ್ಮೂಲ, ಶಿಕ್ಷಣ ಇಲಾಖೆ, ಗ್ರಾ.ಪಂ., ತಾ.ಪಂ., ಜಿ.ಪಂ. ಅನುದಾನವನ್ನು ಬಳಕೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.

ಸಮಾಲೋಚನಾ ಸಭೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತಿಕ್, ಪರಿಸರವಾದಿ ಯಲ್ಲಪ್ಪರೆಡ್ಡಿ, ಕೆ.ನೀಲಾ ಸೇರಿದಂತೆ ತಜ್ಞರು, ಸಂಘ-ಸಂಸ್ಥೆಗಳ ಮುಖ್ಯಸ್ಥರು ತಮ್ಮ ಸಲಹೆಗಳನ್ನು ನೀಡಿದರು.

‘ನೀರಿನ ಮಿತಿ ಮೀರಿದ ಬಳಕೆ, ನೀರು ವ್ಯರ್ಥ ಮಾಡುವುದನ್ನು ತಪ್ಪಿಸುವ ದೃಷ್ಟಿಯಿಂದ ನೀರಿನ ಸದ್ಬಳಕೆ ಕಾಯ್ದೆ ಜಾರಿಗೆ ತರಬೇಕಾದ ಅಗತ್ಯವಿದೆ’

-ಯಲ್ಲಪ್ಪರೆಡ್ಡಿ, ಪರಿಸರವಾದಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News