ಗ್ರಾಮ ಮಟ್ಟದಿಂದ ಪಕ್ಷ ಸಂಘಟನೆಗೆ ಒತ್ತು: ಸಿ.ಎಂ ಇಬ್ರಾಹೀಂ

Update: 2019-02-18 16:26 GMT

ಬೆಂಗಳೂರು, ಫೆ.18: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮ ಹಾಗೂ ತಾಲೂಕು ಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ಚುನಾವಣಾ ಪ್ರಚಾರದ ರೂಪುರೇಷೆಗಳ ಕುರಿತು ಚರ್ಚಿಸಲಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸಿ.ಎಂ.ಇಬ್ರಾಹೀಂ ತಿಳಿಸಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪ್ರಚಾರ ಸಮಿತಿಯ ಮೊದಲ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ವೇಳೆ ಜನರನ್ನು ತಲುಪಲು ಯಾವ ರೀತಿಯ ಪ್ರಚಾರ ತಂತ್ರ ರೂಪಿಸಬೇಕು ಎಂಬುದರ ಕುರಿತು ಚರ್ಚಿಸಲಾಗಿದೆ ಎಂದರು.

ಕಾಂಗ್ರೆಸ್ ಪಕ್ಷದ ಸಾಧನೆಗಳು ಹಾಗೂ ಬಿಜೆಪಿಯ ವೈಫಲ್ಯಗಳ ಕುರಿತು ಚರ್ಚಿಸಲಾಗಿದೆ. ಚುನಾವಣೆ ಸಂದರ್ಭದಲ್ಲಿ ಪ್ರತಿಪಕ್ಷ ಬಿಜೆಪಿ ನಮ್ಮ ವಿರುದ್ಧ ಮಾಡುವ ಅಪಪ್ರಚಾರಗಳಿಗೆ ಯಾವ ರೀತಿ ಪ್ರತ್ಯುತ್ತರ ನೀಡಬೇಕು ಎಂಬುದರ ಕುರಿತು ಮುಖಂಡರು ಚರ್ಚಿಸಿದ್ದೇವೆ ಎಂದು ಅವರು ಹೇಳಿದರು.

ಸತ್ಯಾಸತ್ಯತೆಯನ್ನು ಜನರಿಗೆ ತಲುಪಿಸುವುದಕ್ಕೆ ಅಗತ್ಯವಿರುವ ಮಾರ್ಗಗಳನ್ನು ಹುಡುಕುವ ವಿಚಾರಗಳ ಕುರಿತು ಸಮಾಲೋಚಿಸಿದ್ದೇವೆ. ಸದ್ಯಕ್ಕೆ ನಾವು ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಪಕ್ಷ ಸಂಘಟನೆ ಹಾಗೂ ಪ್ರಚಾರ ಕುರಿತು ಚರ್ಚಿಸಿದ್ದೇವೆ ಎಂದು ಸಿ.ಎಂ.ಇಬ್ರಾಹೀಂ ತಿಳಿಸಿದರು.

ಪ್ರಭಾವಿ ಹಾಗೂ ಪರಿಣಾಮಕಾರಿಯಾಗಿ ಭಾಷಣ ಮಾಡುವವರು ಹಾಗೂ ಚಿಂತಕರ ಹುಡುಕಾಟ ನಡೆಸುತ್ತೇವೆ. ಸಮಗ್ರತೆ ಮತ್ತು ರಾಷ್ಟ್ರೀಯತೆಯ ಬಗ್ಗೆ ಅರಿವು ಇರುವವರನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತೇವೆ. ಇಂತಹವರ ಒಂದು ಸಮೂಹವನ್ನೇ ಗ್ರಾಮ ಮಟ್ಟದಲ್ಲಿ ಸಿದ್ಧಪಡಿಸಲು ಉದ್ದೇಶಿಸಿದ್ದೇವೆ ಎಂದು ಅವರು ಹೇಳಿದರು.

ಗ್ರಾಮ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಭಾರತೀಯತೆಯನ್ನು ಬಿಂಬಿಸುವ ಹಾಗೂ ಸಮಗ್ರತೆಯನ್ನು ಎತ್ತಿ ಹಿಡಿಯುವ ಪ್ರಚಾರ ವೈಖರಿಯನ್ನು ರೂಢಿಸಿಕೊಂಡು ಚುನಾವಣೆಯನ್ನು ಎದುರಿಸುತ್ತೇವೆ ಎಂದು ಸಿ.ಎಂ.ಇಬ್ರಾಹೀಂ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News