ಕಳ್ಳನೆಂಬ ಶಂಕೆಯಲ್ಲಿ ಮರಕ್ಕೆ ಕಟ್ಟಿ ಹಾಕಿ ಥಳಿತ: ವ್ಯಕ್ತಿ ಸಾವು

Update: 2019-02-18 16:47 GMT

ಪಾಂಡವಪುರ,ಫೆ.18: ಕಳ್ಳನೆಂದು ಭಾವಿಸಿ ವ್ಯಕ್ತಿಯೋರ್ವನನ್ನು ಮರಕ್ಕೆ ಕಟ್ಟಿಹಾಕಿ ದೊಣ್ಣೆಗಳಿಂದ ಹಿಗ್ಗಾಮುಗ್ಗ ಥಳಿಸಿ ಹತ್ಯೆಗೈದಿರುವ ಘಟನೆ ತಾಲೂಕಿನ ಕೆನ್ನಾಳು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶ್ರೀರಂಗಪಟ್ಟಣ ತಾಲೂಕಿನ ಕಿರಂಗೂರಿನ ನಿವಾಸಿ ಗಾರೆ ಕೆಲಸ ಮಾಡುವ ಶಿವ ಅಲಿಯಾಸ್ ಕೋಳಿ ಶಿವ (30) ಎಂಬಾತ ಹಲ್ಲೆಗೊಳಗಾಗಿ ಸಾವನ್ನಪ್ಪಿರುವ ವ್ಯಕ್ತಿ.

ಕೆನ್ನಾಳು ಗ್ರಾಮದ ಗಾರೆ ಮೇಸ್ತ್ರಿ ಪದ್ಮರಾಜು ಎಂಬವರ ಜೊತೆಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದ ಶಿವ ಎಂಬಾತನಿಗೆ ರಾಘವೇಂದ್ರ ಅವರ ಮನೆ ಬಾಗಿಲು ಬಡಿಯುತ್ತಿದ್ದ ಎಂಬ ಕಾರಣಕ್ಕೆ ಕಳ್ಳನೆಂದು ಭಾವಿಸಿ ಆತನನ್ನು ಹಿಡಿದು ಮರಕ್ಕೆ ಕಟ್ಟಿ ಹಾಕಿ ಶನಿವಾರ ರಾತ್ರಿ ಥಳಿಸಲಾಗಿತ್ತು. ಕೆನ್ನಾಳು ಗ್ರಾಮದ ರಾಘವೇಂದ್ರ ಅಲಿಯಾಸ್ ರಾಘು, ಆನಂದ, ಕೃಷ್ಣ, ರಾಜಪ್ಪ ಅಲಿಯಾಸ್ ಹೊಟ್ಟೆ ರಾಜಪ್ಪ, ಪ್ರಕಾಶ್ ಹಾಗೂ ಇತರರು ದೊಣ್ಣೆಗಳಿಂದ ಹಿಗ್ಗಾಮುಗ್ಗಾ ಥಳಿಸಿದ್ದರು ಎಂದು ಆರೋಪಿಸಲಾಗಿದೆ.

ರವಿವಾರ ಬೆಳಗ್ಗೆ ಸುಮಾರು 7 ಗಂಟೆಗೆ ಮೇಸ್ತ್ರಿ ಪದ್ಮರಾಜು ಸ್ಥಳಕ್ಕೆ ಬಂದ ಹಿನ್ನೆಲೆಯಲ್ಲಿ ಶಿವನನ್ನು ಬಿಡಿಸಿ ಕಳುಹಿಸಲಾಗಿದೆ. ನಂತರ ಶಿವ ಪಾಂಡವಪುರ ರೈಲ್ವೆ ನಿಲ್ದಾಣದ ಬಳಿ ಇರುವ ಹಳೆಯದಾದ ಗುರುಪ್ರಸಾದ್ ಹೋಟೆಲ್ ಮುಂದೆ ಸಾವನ್ನಪ್ಪಿದ್ದಾನೆ ಎಂದು ಗೊತ್ತಾಗಿದೆ. ಬಳಿಕ ಪೊಲೀಸರು ಶವವನ್ನು ಪಾಂಡವಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

ಘಟನೆ ಸಂಬಂಧ ಪಾಂಡವಪುರ ಪೊಲೀಸರು ಶಿವನ ಸಾವಿಗೆ ಕಾರಣರಾದ ಕೆನ್ನಾಳು ಗ್ರಾಮದ ಐವರು ಹಾಗೂ ಇತರರ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಹಲ್ಲೆ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News