ವಿವಾದಾತ್ಮಕ ಹೇಳಿಕೆ ಆರೋಪ: ಅಹಿಂದ ಮುಖಂಡ ಎಸ್.ಎಂ.ಪಾಟೀಲ ವಿಚಾರಣೆ

Update: 2019-02-18 17:23 GMT

ವಿಜಯಪುರ,ಫೆ.18: ಪುಲ್ವಾಮಾ ದಾಳಿ ಹಿನ್ನೆಲೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ಎನ್ನಲಾದ ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ಪುಲ್ವಾಮಾ ಘಟನೆಯನ್ನು ಖಂಡಿಸಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಎಸ್.ಎಂ ಪಾಟೀಲ ಗಣಿಹಾರ ಪಾಕಿಸ್ತಾನಕ್ಕೆ ಬೊಟ್ಟು ಮಾಡಬೇಡಿ ಎಂಬ ಹೇಳಿಕೆ ನೀಡಿದ್ದರು ಎಂದು ಆರೋಪಿಸಿ ಶ್ರೀರಾಮ ಸೇನೆ ಸಂಘಟನೆ ಪದಾಧಿಕಾರಿಗಳು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ಜಲನಗರ ಪೊಲೀಸ್ ಠಾಣೆಗೆ ಎಸ್.ಎಂ.ಪಾಟೀಲ ಗಣಿಹಾರ ಅವರನ್ನು ಕರೆದು ವಿಚಾರಣಗೊಳಪಡಿಸಿದ್ದಾರೆ. ವಿಡಿಯೋ ತುಣುಕು ಮೊದಲಾದವುಗಳನ್ನು ಪರಿಶೀಲನೆ ನಡೆಸಿದ್ದಾರೆ.

'ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಎಸ್.ಎಂ. ಪಾಟೀಲ ಗಣಿಹಾರ ಅವರನ್ನು ವಿಚಾರಣೆಗೊಳಪಡಿಸಲಾಗಿತ್ತು, ಅವರು ಹೇಳಿದ ಸಂಪೂರ್ಣ ವಿಡಿಯೋ ದಾಖಲೆಯನ್ನು ಪರಿಶೀಲನೆ ನಡೆಸಲಾಗಿದ್ದು, ಯಾವುದೇ ರೀತಿಯ ಪ್ರಚೋದನಕಾರಿ, ದೇಶವಿರೋಧಿ ಹೇಳಿಕೆ ಇಲ್ಲ ಎಂಬುದು ಸ್ಪಷ್ಟವಾಗಿದೆ, ಹೀಗಾಗಿ ಅವರ ಮೇಲೆ ಯಾವುದೇ ರೀತಿಯ ದೂರು ದಾಖಲಿಸಲಾಗಿಲ್ಲ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಪ್ರಕಾಶ ಅಮೃತ ನಿಕ್ಕಂ ಸ್ಪಷ್ಟಪಡಿಸಿದರು.

ನಾನು ಯಾವತ್ತಿಗೂ ದೇಶಪ್ರೇಮಿ

ನಾನು ಅಪ್ಪಟ ಭಾರತೀಯ. ನಾನು ಅಪ್ಪಟ ದೇಶಪ್ರೇಮಿ, ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಲು ಸಾಧ್ಯವೇ ಇಲ್ಲ. ಪಾಕ್ ಧ್ವಜವನ್ನು ಹಾರಿಸಿದ ಶ್ರೀರಾಮಸೇನೆಯ ಮುಖಂಡರು ನನ್ನ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ, ಉಗ್ರರ ಮೇಲೆ ದಾಳಿ ಮಾಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಿ, ಉಗ್ರವಾದವನ್ನು ದಮನ ಮಾಡಿ ಎಂದು ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದೇನೆ..

-ಎಸ್.ಎಂ. ಪಾಟೀಲ ಗಣಿಹಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News