ರಾಷ್ಟ್ರೀಯ ಸಮಾಜ ಪಕ್ಷದಿಂದ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಸ್ಪರ್ಧೆ: ರಾಜ್ಯ ಉಸ್ತುವಾರಿ ನಿವೇದಿತಾ ಕುಕ್ರೇಜಾ

Update: 2019-02-18 18:18 GMT

ವಿಜಯಪುರ,ಫೆ.18: ರಾಷ್ಟ್ರೀಯ ಸಮಾಜ ಪಕ್ಷ ವಿಜಯಪುರ ಲೋಕಸಭಾ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಪಕ್ಷದ ರಾಜ್ಯ ಉಸ್ತುವಾರಿ ನಿವೇದಿತಾ ಕುಕ್ರೇಜಾ ತಿಳಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತಮ ಆಡಳಿತ ಹಾಗೂ ಧರ್ಮರಹಿತ ರಾಜಕಾರಣ ನಿರ್ಮಾಣದ ದೃಷ್ಟಿಯಿಂದ ಈ ರಾಜಕೀಯ ಪಕ್ಷವನ್ನು ರೂಪಿಸಲಾಗಿದೆ. ಯಾವುದೇ ಪಕ್ಷದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಮಹಾರಾಷ್ಟ್ರದಲ್ಲಿ ನಮ್ಮ ಪಕ್ಷದ ಮಹಾದೇವ ಜಾನಕರ ಅವರು ಕ್ಯಾಬಿನೆಟ್ ಸಚಿವರಾಗಿದ್ದಾರೆ. ಹಾಗೆಂದ ಮಾತ್ರಕ್ಕೆ ಬೇರೆ ರಾಜ್ಯಗಳಲ್ಲಿ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುತ್ತೇವೆ ಎಂಬರ್ಥವಲ್ಲ. ಅದು ಕೇವಲ ಮಹಾರಾಷ್ಟ್ರಕ್ಕೆ ಮಾತ್ರ ಸೀಮಿತವಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ರಾಜಕಾರಣ ಜನರಿಗೆ ಒಂದು ರೀತಿ ಬೇಸರ ತರಿಸಿದೆ. ಧರ್ಮಾಧಾರಿತ ರಾಜಕಾರಣಕ್ಕೆ ಫುಲ್‍ ಸ್ಟಾಪ್ ಹಾಕುವ ನಿಟ್ಟಿನಲ್ಲಿ ನಮ್ಮ ಪಕ್ಷ ಅಸ್ತಿತ್ವಕ್ಕೆ ತರಲಾಗಿದೆ. ಎಲ್ಲ ಕಡೆಗಳಲ್ಲಿಯೂ ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಲಾಗುವುದು, ಪಕ್ಷವನ್ನು ಸಶಕ್ತಗೊಳಿಸಲಾಗುವುದು ಎಂದರು.

ಮುಂಬರುವ ಲೋಕಸಭಾ ಚುನಾವಣೆ ಅಷ್ಟೇ ಅಲ್ಲ, ಈ ಭಾಗದಲ್ಲಿ ನಡೆಯುವ ಸ್ಥಳೀಯ ಸಂಸ್ಥೆ, ಜಿಲ್ಲಾ ಪಂಚಾಯತ್ ಚುಣಾವಣೆಗಳಲ್ಲಿಯೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ನಾವು ಮೊದಲು ಗೆಲ್ಲದಿರಬಹುದು, ಆದರೆ ಪ್ರಬಲ ಸ್ಪರ್ಧೆಯನ್ನಾದರೂ ಒಡ್ಡಬಹುದಲ್ಲ, ಹಂತ ಹಂತವಾಗಿಯಾದರೂ ಒಂದು ಅಸ್ತಿತ್ವ ಸ್ಥಾಪಿಸಬಹುದು ಎಂಬ ಉದ್ದೇಶ ನಮ್ಮದು. ಅಭಿವೃದ್ಧಿಪರವಾದ ಹಾಗೂ ಜನಸ್ನೇಹಿಯಾದ ಆಡಳಿತ ನಡೆಸುವ ನಿಟ್ಟಿನಲ್ಲಿ ಈ ಪಕ್ಷ ಸ್ಥಾಪನೆ ಮಾಡಲಾಗಿದೆ ಎಂದರು.

ಈಗಾಗಲೇ ಪಕ್ಷ ಉತ್ತರ ಪ್ರದೇಶ, ಗುಜರಾತ್, ಪಂಜಾಬ್, ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ತನ್ನ ಘಟಕಗಳನ್ನು ಹೊಂದಿದ್ದು, ಕರ್ನಾಟಕದಲ್ಲಿ ಪಕ್ಷ ಸಂಘಟನೆ ಕಾರ್ಯ ಚುರುಕಿನಿಂದ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪಕ್ಷದ ರಾಜ್ಯ ಸಂಚಾಲಕ ಧರ್ಮಣ್ಣ ತೋಂಟಾಪೂರ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಸಮಾಜ ಪಕ್ಷ ವಿಜಯಪುರ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವುದು ನಿಶ್ಚಿತ, ಲಂಬಾಣಿ ಸಮಾಜದ ಅಭ್ಯರ್ಥಿಗೆ ಟಿಕೆಟ್ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News