ತುಮಕೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಸ್‍ಎನ್‍ಎಲ್ ನೌಕರರ ಮುಷ್ಕರ

Update: 2019-02-18 17:37 GMT

ತುಮಕೂರು, ಫೆ,18: ಕೇಂದ್ರ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಬಿಎಸ್‍ಎನ್‍ಎಲ್ ಸಂಸ್ಥೆ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು, 3 ಲಕ್ಷ ನೌಕರರರು ಉದ್ಯೋಗವನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಬಿಎಸ್‍ಎನ್‍ಎಲ್ ಸಂಸ್ಥೆಯನ್ನು ಲಾಭದಾಯಕವಾಗಿಸುವ ನಿಟ್ಟಿನಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಷ್ಟ್ರಾದ್ಯಂತ ಬಿಎಸ್‍ಎನ್‍ಎಲ್ ನೌಕರರು ಮುಷ್ಕರವನ್ನು ಆರಂಭಿಸಿದ್ದಾರೆ ಎಂದು ಎಯುಎಬಿ ಜಿಲ್ಲಾ ಸಂಚಾಲಕ ಹೆಚ್.ನರೇಶ್‍ರೆಡ್ಡಿ ತಿಳಿಸಿದ್ದಾರೆ.

ನಗರದ ಬಿಎಸ್‍ಎನ್‍ಎಲ್ ಕಚೇರಿ ಮುಂದೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬಿಎಸ್‍ಎನ್‍ಎಲ್ ಸಂಸ್ಥೆಗೆ 4 ಜಿ ಸೇವೆಯನ್ನು ನೀಡದೇ, ಖಾಸಗಿ ಜಿಯೋ ಸಂಸ್ಥೆಯನ್ನು ಕೇಂದ್ರ ಸರ್ಕಾರ ಪ್ರಚಾರ ಮಾಡುತ್ತಿದ್ದು, ಕಡಿಮೆ ತಂತ್ರಾಂಶದಿಂದ ಗುಣಮಟ್ಟದ ಸೇವೆಯನ್ನು ನೀಡಲು ಬಿಎಸ್‍ಎನ್‍ಎಲ್ ಸಿಬ್ಬಂದಿ ಪ್ರಯತ್ನ ಮಾಡುತ್ತಿದ್ದರೂ ನಷ್ಟದಲ್ಲಿದೆ ಎಂದು ಸಂಸ್ಥೆಯನ್ನು ಮುಚ್ಚಲು ಹುನ್ನಾರ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ಬಿಎಸ್‍ಎನ್‍ಎಲ್ ಬೆಳವಣಿಗೆಗೆ ಅವಶ್ಯಕವಾಗಿರು 4ಜಿ ಸೇವೆಯನ್ನು ನೀಡಿದರೆ ಖಾಸಗಿ ಸಂಸ್ಥೆಗಳಿಗೆ ಪೈಪೋಟಿಯನ್ನು ನೀಡಲು ಶಕ್ತವಾಗಲಿದೆ. ಸಂಸ್ಥೆಗೆ ಸೇರಿದ ಆಸ್ತಿ ಮತ್ತು ಭೂಮಿಯನ್ನು ನಿರ್ವಹಿಸುವ ಅಧಿಕಾರವನ್ನು ನೀಡಿದರೆ, ವಾರ್ಷಿಕ 10,000 ಕೋಟಿ ರೂ ಆದಾಯವನ್ನು ಗಳಿಸಬಹುದಾಗಿದೆ. ಸಂಸ್ಥೆಯನ್ನು ಆರ್ಥಿಕವಾಗಿ ಮುನ್ನಡೆಸಬೇಕಾದರೆ, ಕೇಂದ್ರ ಸರ್ಕಾರ ಟ್ರಾಯ್ ನಿಯಮಗಳನ್ನು ಪಾಲಿಸಬೇಕಿದೆ. ನೆಹರೂ ಅವರು ಕೇಂದ್ರ ಸಂಸ್ಥೆಗಳು ದೇಶದ ಅಭಿವೃದ್ಧಿಗೆ ಪೂರಕ ಎಂದರೆ, ಈಗಿನ ಕೇಂದ್ರ ಸರ್ಕಾರ ಅವನ್ನು ಮುಚ್ಚಿಸಲು ಪ್ರಯತ್ನ ನಡೆಸುತ್ತಿದೆ ಎಂದರು.

ಬಿಎಸ್‍ಎನ್‍ಎಲ್ ನೌಕರರಿಗೆ 3ನೇ ವೇತನ ಆಯೋಗದ ಶಿಫಾರಸ್ಸಿನನ್ವಯ ವೇತನ ಪರಿಷ್ಕರಣೆ ಮಾಡಬೇಕು, ಪಿಂಚಣಿ ಪರಿಷ್ಕರಣೆ ಮಾಡಬೇಕು, 2ನೇ ವೇತನ ಆಯೋಗದ ತಾರತಮ್ಯವನ್ನು ನಿವಾರಣೆ ಮಾಡುವಂತೆ ಒತ್ತಾಯಿಸಿ, ರಾಷ್ಟ್ರಾದ್ಯಾಂತ ಬಿಎಸ್‍ಎನ್‍ಎಲ್ ನೌಕರರು ಮುಷ್ಕರಕ್ಕೆ ಮುಂದಾಗಿದ್ದು, ಮೂರು ದಿನವೂ ನೌಕರರು ಕೆಲಸವನ್ನು ಬಹಿಷ್ಕರಿಸಲಿದ್ದು, ಕೇಂದ್ರ ಸರ್ಕಾರ ತ್ವರಿತವಾಗಿ ಬಿಎಸ್‍ಎನ್‍ಎಲ್ ನೌಕರರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

ನೌಕರರು ಮುಷ್ಕರಕ್ಕೆ ಮುಂದಾದಾಗ ವದಂತಿಗಳನ್ನು ಹಬ್ಬಿಸುವ ಮೂಲಕ ಮುಷ್ಕರ ನಿರತರ ಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನು ಮಾಡುತ್ತಿದ್ದು, ನೌಕರರು ಅಂತಹ ವದಂತಿಗಳಿಗೆ ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಬಿಎಸ್‍ಎನ್‍ಎಲ್ ಆಲ್ ಯೂನಿಯನ್ ಅಸೋಸಿಯೇಷನ್ ಮುಖಂಡರು, ಎಸ್‍ಎನ್‍ಇಎ ಜಿಲ್ಲಾ ಕಾರ್ಯದರ್ಶಿ ಬಿ.ಕೆ.ಉಮೇಶ್, ಎಐಬಿಎಸ್‍ಎನ್‍ಎಲ್‍ಇಎ ಜಿಲ್ಲಾ ಕಾರ್ಯದರ್ಶಿ ಎಸ್.ಭರತ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News