ತುಮಕೂರು ನಗರ ಬೆಂಗಳೂರಿನಂತೆ ಅಭಿವೃದ್ಧಿ ಪಡಿಸಲು ಆದ್ಯತೆ: ಸಚಿವ ಯು.ಟಿ.ಖಾದರ್

Update: 2019-02-18 17:46 GMT

ತುಮಕೂರು,ಫೆ.18: ತುಮಕೂರು ನಗರವನ್ನು ಬೆಂಗಳೂರಿನಂತೆ ಅಭಿವೃದ್ಧಿಪಡಿಸಲು ಪ್ರಥಮ ಆದ್ಯತೆ ನೀಡಲಾಗುವುದು ಎಂದು ನಗರಾಭಿವೃದ್ದಿ ಸಚಿವ ಯು.ಟಿ.ಖಾದರ್ ತಿಳಿಸಿದರು. 

ಮಹಾನಗರಪಾಲಿಕೆ, ತುಮಕೂರು ಸ್ಮಾರ್ಟ್ ಸಿಟಿ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ಅಭಿವೃದ್ಧಿಯಲ್ಲಿ ಬೆಂಗಳೂರಿನ ನಂತರ ತುಮಕೂರು ನಗರ ಮುಂಚೂಣಿಯಲ್ಲಿದ್ದು, ಬೆಂಗಳೂರಿನ ಮಾದರಿಯಲ್ಲಿ ತುಮಕೂರು ನಗರಕ್ಕೂ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಇದರಿಂದ ಬೆಂಗಳೂರಿನ ಜನದಟ್ಟಣೆ ಕಡಿಮೆಯಾಗಲಿದೆ ಎಂದು ತಿಳಿಸಿದರು. 

ನಗರದ ಅಭಿವೃದ್ಧಿಗಾಗಿ ಗುಬ್ಬಿಗೇಟ್‍ನಿಂದ ಐಡಿಎಸ್‍ಎಂಟಿ ಬಡಾವಣೆವರೆಗೆ ಹೊರ ವರ್ತುಲದಲ್ಲಿ 2 ಕಿ.ಮೀ. ಉದ್ದದ ರಿಂಗ್ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲು ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ರೈತರಿಗೆ ಭೂಸ್ವಾಧೀನ ವೆಚ್ಚ ಅನುಮೋದನೆಗಾಗಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಗಿದೆ. ಕ್ಯಾತ್ಸಂದ್ರ ವಸತಿ ಬಡಾವಣೆಯಲ್ಲಿ ಪ್ರಾಧಿಕಾರದ ವತಿಯಿಂದ ಕ್ರೀಡಾ ಸಮುಚ್ಛಯ ನಿರ್ಮಾಣ ಮಾಡಲು 4.50 ಕೋಟಿ ರೂ. ಗಳ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗುವುದು.

ಗೂಳೂರು ಕೆರೆಯ ಅಭಿವೃದ್ಧಿಗಾಗಿ ಅಂದಾಜು ವೆಚ್ಚ 3 ಕೋಟಿ ರೂ.ಗಳಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು. ಉಪ್ಪಾರಹಳ್ಳಿ ಕೆರೆಯ 8.11 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಕೆರೆಯನ್ನು ಅಭಿವೃದ್ಧಿಗೊಳಿಸಲು 2.13 ಕೋಟಿ ರೂ.ಗಳಿಗೆ ಯೋಜನಾ ವರದಿಯನ್ನು ತಯಾರಿಸಿ, ತಾಂತ್ರಿಕ ಮಂಜೂರಾತಿಗಾಗಿ ಸಲ್ಲಿಸಲಾಗಿದ್ದು ಅನುಮೋದನೆ ದೊರೆತ ನಂತರ ಯೋಜನೆಯನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರಲ್ಲದೆ ರೈತರ ಸಹಭಾಗಿತ್ವದಲ್ಲಿ ವಸತಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಮಾನಿಕೆರೆ, ಮುತ್ಸಂದ್ರ ಗ್ರಾಮಗಳಲ್ಲಿ ಜಮೀನನ್ನು ಗುರುತಿಸಿದ್ದು ರೈತರೊಂದಿಗೆ ಸಮಾಲೋಚನೆ ನಡೆಸಿ ಯೋಜನೆಯನ್ನು ಕೈಗೊಳ್ಳಲಾಗುವುದು ಎಂದರು. 

ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಆಯುಕ್ತರನ್ನು ಅತಿ ಶೀಘ್ರದಲ್ಲೇ ನೇಮಕ ಮಾಡಲಾಗುವುದು. ಸರ್ಕಾರವು ತುಮಕೂರು ನಗರಾಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಕಳೆದ ವರ್ಷ ನಗರೋತ್ಥಾನ ಯೋಜನೆಯಡಿ 100 ಕೋಟಿ ರೂ., ಎಸ್.ಎಫ್.ಸಿ. ಹಾಗೂ 14ನೇ ಹಣಕಾಸು ಯೋಜನೆಯಡಿ 20 ಕೋಟಿ ರೂ., ಅಮೃತ್ ಯೋಜನೆಯಡಿ 24 ಗಂಟೆಗಳ ಕಾಲ ನಿರಂತರ ನೀರು ಸರಬರಾಜು ಯೋಜನೆಗಾಗಿ 115 ಕೋಟಿ ರೂ., ಸೇರಿದಂತೆ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಒಟ್ಟಾರೆ 313 ಕೋಟಿ ರೂ.ಗಳ ಅನುದಾನ ಮಂಜೂರು ಮಾಡಿದ್ದು, ಕಾಮಗಾರಿಗಳು ಈಗಾಗಲೇ ಪ್ರಗತಿಯಲ್ಲಿವೆ ಎಂದು ತಿಳಿಸಿದರು. 

ಅದೇ ರೀತಿ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ತುಮಕೂರು ನಗರ 2ನೇ ಹಂತದಲ್ಲಿ ಆಯ್ಕೆಯಾಗಿದ್ದು, 24ನೇ ಸ್ಥಾನದಲ್ಲಿದೆ. ಮುಂದಿನ 3 ತಿಂಗಳಲ್ಲಿ ಸ್ಮಾರ್ಟ್ ಸಿಟಿ ಅಭಿವೃದ್ಧಿಯಲ್ಲಿ ಜಿಲ್ಲೆಯನ್ನು 10ನೇ ಸ್ಥಾನಕ್ಕೆ ತರುವ ಉದ್ದೇಶ ಹೊಂದಲಾಗಿದೆ. ಈಗಾಗಲೇ 309 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದ್ದು, 450 ಕೋಟಿ ರೂ.ಗಳ ವೆಚ್ಚದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ತಯಾರಿಸಿ ಮಾರ್ಚ್ ಮೊದಲ ವಾರದಲ್ಲಿ ಕಾರ್ಯಾದೇಶ ನೀಡಲಾಗುವುದು ಎಂದ ಅವರು, ಸ್ಮಾರ್ಟ್ ಸಿಟಿ ಯೋಜನೆಯು ಹೊಸ ಯೋಜನೆಯಾಗಿರುವುದರಿಂದ ಕಾಮಗಾರಿ ಪ್ರಗತಿಯಲ್ಲಿ ವಿಳಂಬವಾಗುತ್ತಿದೆ ಎಂದರು. ಘನತ್ಯಾಜ್ಯ ವಿಲೇವಾರಿಯು ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸಿದ್ದು, ನಗರದ ಘನತ್ಯಾಜ್ಯ ನಿರ್ವಹಣೆಗೆ ಅಜ್ಜಗೊಂಡನಹಳ್ಳಿಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. 

ಪುಲ್ವಾಮದಲ್ಲಿ ಯೋಧರ ಮೇಲೆ ಉಗ್ರರು ದಾಳಿ ಮಾಡಿರುವ ಘಟನೆ ಬಗ್ಗೆ ಖಂಡನೆ ವ್ಯಕ್ತಪಡಿಸಿದ ಅವರು, ಬೇಧ-ಭಾವವಿಲ್ಲದೆ ಒಗ್ಗಟ್ಟಾಗಿ ನಾವೆಲ್ಲ ತಕ್ಕ ಉತ್ತರ ಕೊಡಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರದ ಸಹಕಾರ ಸದಾ ಇರುತ್ತದೆ ಎಂದು ತಿಳಿಸಿದರು. 

ಶೈಕ್ಷಣಿಕ ಅಭಿವೃದ್ಧಿ ಯೋಜನೆಯಡಿ ನಗರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಕೃತಿಕ ಪುನರುಜ್ಜೀವನಕ್ಕೆ 15 ಕೋಟಿ ರೂ. ಹಾಗೂ ಎಂಪ್ರೆಸ್ ಬಾಲಕಿಯರ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ ಅವಶ್ಯಕವಿರುವ ಆಡಿಟೋರಿಯಂ, ಪ್ರಯೋಗಾಲಯ, ಲೈಬ್ರರಿ ಮುಂತಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸುಮಾರು ರೂ.13 ಕೋಟಿ ಯೋಜನೆಯನ್ನು ಸಿದ್ಧಪಡಿಸಲಾಗಿದೆ ಎಂದರು.

ಸ್ಮಾರ್ಟ್ ರಸ್ತೆ ಅಭಿವೃದ್ಧಿ ಯೋಜನೆಯಡಿ ನಗರದ ಪ್ರದೇಶಾಧಾರಿತ ಅಭಿವೃದ್ಧಿ ವ್ಯಾಪ್ತಿಯಲ್ಲಿ ಬರುವ 17 ಪ್ರಮುಖ ರಸ್ತೆಗಳನ್ನು ರೂ.191 ಕೋಟಿಗಳ ವೆಚ್ಚದಲ್ಲಿ ಸ್ಮಾರ್ಟ್ ರಸ್ತೆಗಳನ್ನಾಗಿ ಪರಿವರ್ತಿಸಲು ಯೋಜನೆ ಸಿದ್ಧವಾಗಿದ್ದು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ಹಳೆಯ ಬಸ್ ಸ್ಟ್ಯಾಂಡ್ ಪ್ರದೇಶದಲ್ಲಿ ಸ್ಮಾರ್ಟ್‍ಸಿಟಿ ಯೋಜನೆಯಡಿ 94 ಕೋಟಿ ರೂ. ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನವುಳ್ಳ ಬಸ್ ನಿಲ್ದಾಣವನ್ನು ನಿರ್ಮಿಸಲು ಚಿಂತಿಸಲಾಗಿದೆ. ಅಮಾನಿಕೆರೆ ಆವರಣದಲ್ಲಿ ಈಗಾಗಲೇ ಡಿಜಿಟಲ್ ಲೈಬ್ರರಿ, ಎಟಿಎಂ, ಕಾಫಿ ಶಾಪ್, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಹಾಗೂ ತುಮಕೂರು ಒನ್‍ನಲ್ಲಿ ಲಭ್ಯವಿರುವ ಎಲ್ಲಾ ಸೌಲಭ್ಯಗಳುಳ್ಳ ಒಂದು ಸ್ಮಾರ್ಟ್ ಲಾಂಜ್‍ನ್ನು ನಿರ್ಮಿಸಲಾಗಿದ್ದು, ನಗರದಲ್ಲಿ ಇನ್ನು ಹಲವಾರು ಸ್ಮಾರ್ಟ್‍ಲಾಂಜ್‍ಗಳನ್ನು ನಿರ್ಮಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು. 

ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ರೂ.56 ಕೋಟಿಗಳ ವೆಚ್ಚದಲ್ಲಿ ಸುಸಜ್ಜಿತ ಟ್ರಾಮಾಕೇರ್ ಸೆಂಟರ್ ಸ್ಥಾಪಿಸಲು ಯೋಜಿಸಲಾಗಿದೆ. ಅಮಾನಿಕೆರೆಯಲ್ಲಿ ಸರ್ವಾಂಗೀಣ ಹಾಗೂ ಸೌಂದರ್ಯೀಕರಣ ಮೂಲಕ ಪ್ರವಾಸ ತಾಣವಾಗಿಸಲು ವಿವಿಧ ಯೋಜನೆಗಳ ಜೊತೆಗೆ ಅಮಾನಿಕೆರೆಯನ್ನು ವರ್ಷಾದ್ಯಂತ ತುಂಬಿರುವಂತೆ ಮಾಡಲು ಬುಗುಡನಹಳ್ಳಿ ಕೆರೆಯಿಂದ ನೀರು ಹರಿಸಲು ಯೋಜನೆಯನ್ನು ಕೈಗೊಳ್ಳಲಾಗುವುದು. ನಗರದಲ್ಲಿ ಆಯ್ದ ಉದ್ಯಾನವನಗಳ ಅಭಿವೃದ್ಧಿಗಾಗಿ  25 ಕೋಟಿ ರೂ.ಗಳ ಅನುದಾನವನ್ನು ಮೀಸಲಿರಿಸಲಾಗಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಶಾಸಕ ಜಿ.ಬಿ. ಜ್ಯೋತಿ ಗಣೇಶ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಬಿ.ಟಿ.ರಂಗಸ್ವಾಮಿ, ಪಾಲಿಕೆ ಆಯುಕ್ತ ಭೂಬಾಲನ್, ಮತ್ತಿತರ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News