ಫೆ.23, 24 ರಂದು ಹಾಸನದಲ್ಲಿ ಬೃಹತ್ ಉದ್ಯೋಗ ಮೇಳ: ಅಗತ್ಯ ಸಿದ್ಧತೆಗೆ ಸಚಿವ ರೇವಣ್ಣ ಸೂಚನೆ

Update: 2019-02-18 18:21 GMT

ಹಾಸನ ಫೆ.18: ನಗರದಲ್ಲಿ ಫೆ.23 ಮತ್ತು 24 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ಎಲ್ಲಾ ರೀತಿಯ ಅಗತ್ಯ ಪೂರ್ವಭಾವಿ ಸಿದ್ಧತೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ಡಿ.ರೇವಣ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉದ್ಯೋಗ ಮೇಳ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಎರಡು ದಿನಗಳ ಉದ್ಯೋಗ ಮೇಳದಲ್ಲಿ ಸುಮಾರು 20 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಇದಕ್ಕೆ ಅಗತ್ಯ ಪ್ರಚಾರ ಹಾಗೂ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಉದ್ಯೋಗ ವಿನಿಮಯ ಅಧಿಕಾರಿ ವಿಜಯಲಕ್ಷ್ಮಿ ಅವರಿಗೆ ಸೂಚಿಸಿದರು.

ಯುವ ಸಮುದಾಯಕ್ಕೆ ಹಾಗೂ ಸಂಕಷ್ಟದಲ್ಲಿರುವವರಿಗೆ ಉದ್ಯೋಗ ಒದಗಿಸುವುದು ಈ ಮೇಳದ ಮೂಲ ಆಶಯವಾಗಿದ್ದು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಈ ಬಗ್ಗೆ ವಿಶೇಷ ಗಮನ ಹರಿಸಿ ಸಾರ್ವಜನಿಕರಿಗೆ ಮಾಹಿತಿ ನೀಡುವ ಕೆಲಸ ಮಾಡುವಂತೆ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರಿಗೆ ತಿಳಿಸಿದರು.

ಉದ್ಯೋಗ ಮೇಳದಲ್ಲಿ ಹೆಚ್ಚಿನ ಕಂಪನಿಗಳು ಪಾಲ್ಗೊಳ್ಳುವಂತಾಗಬೇಕು. ಕನಿಷ್ಟ ಶಿಕ್ಷಣದಿಂದ ಗರಿಷ್ಟ ಶಿಕ್ಷಣದವರೆಗಿನ ಎಲ್ಲರಿಗೂ ಉದ್ಯೋಗಾವಕಾಶಗಳು ಲಭ್ಯವಾಗುವ ರೀತಿಯ ಉದ್ಯೋಗಮೇಳ ಇದಾಗಿರಬೇಕು. ಸುದ್ದಿಮಾಧ್ಯಮಗಳು, ಹೆದ್ದಾರಿ ಫಲಕಗಳು, ಹಾಗೂ ಆನ್ ಲೈನ್ ಮೂಲಕವೂ ಸಾರ್ವಜನಿಕರಿಗೆ ಮಾಹಿತಿ ನೀಡಿ ನೋಂದಣಿ ಮಾಡಿಕೊಂಡು ಉದ್ಯೋಗ ಮೇಳ ಯಶಸ್ವಿಗೆ ಶ್ರಮಿಸಬೇಕೆಂದರು.

ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಿ ಆಸಕ್ತ ನಿರುದ್ಯೋಗಿಗಳು ಹಾಸನಕ್ಕೆ ಬರಲು ಅನುಕೂಲ ಕಲ್ಪಿಸಿಕೊಡಬೇಕು. ಈ ಬಗ್ಗೆ ಎರಡು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಗಮನ ಹರಿಸುವಂತೆ ಸಚಿವ ರೇವಣ್ಣ ಸೂಚಿಸಿದರು.

ಎಲ್ಲರಿಗೂ ಊಟದ ವ್ಯವಸ್ಥೆ: ಮೇಳದಲ್ಲಿ ಪಾಲ್ಗೊಳ್ಳುವ ಎಲ್ಲಾ ಉದ್ಯೋಗಾಸಕ್ತರು ಮತ್ತು ಉದ್ಯೋಗದಾತ ಸಂಸ್ಥೆಗಳ ಪ್ರತಿನಿಧಿಗಳಿಗೆ ಎರಡು ದಿನಗಳ ಕಾಲ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಬೇಕಿದೆ. ಈಗಾಗಲೇ ನಿರ್ಮಿಸಲಾಗಿರುವ ಮಳಿಗೆಗಳನ್ನು ಹಾಗೆಯೇ ಉಳಿಸಿಕೊಂಡು ಉದ್ಯೋಗ ಮೇಳಕ್ಕೆ ಬಳಸಬಹುದಾಗಿದೆ. ಸ್ಥಳೀಯ ಖಾಸಗಿ ಕಾರ್ಖಾನೆಗಳು, ಕಂಪೆನಿಗಳನ್ನು ಉದ್ಯೋಗ ಮೇಳಕ್ಕೆ ಆಹ್ವಾನಿಸಿ ಸ್ಥಳೀಯವಾಗಿ ಹೆಚ್ಚು ತೊಂದರೆಯಲ್ಲಿರುವ ನಿರುದ್ಯೋಗಿಗಳಿಗೆ ಅವಕಾಶ ಕಲ್ಪಿಸಿಕೊಡುವಂತೆ ಉದ್ಯೋಗ ವಿನಿಮಯ ಅಧಿಕಾರಿ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಹಾಗೂ ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರಿಗೆ ಸಚಿವರು ಸೂಚಿಸಿದರು.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಚ್ಚುಕಟ್ಟಾದ ಮೇಳ ಆಯೋಜಿಸುವಂತೆ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಹಾಜರಿದ್ದ ಚಿಕ್ಕಮಗಳೂರು ಜಿಲ್ಲಾಧಿಕಾರಿ ಶ್ರೀರಂಗಯ್ಯ ಅವರು ಸಹ ತಾವು ಸಹ ಚಿಕ್ಕಮಗಳೂರಿನಲ್ಲಿ ಉದ್ಯೋಗ ಮೇಳದ ಬಗ್ಗೆ ಅಗತ್ಯ ಪ್ರಚಾರ ಕೈಗೊಳ್ಳುವುದಾಗಿ ತಿಳಿಸಿದರು.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಸಿ. ಪುಟ್ಟಸ್ವಾಮಿ, ಅಪರ ಜಿಲ್ಲಾಧಿಕಾರಿ ವೈಶಾಲಿ ಹಾಗೂ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News