ಪುಲ್ವಾಮ ಭಯೋತ್ಪಾದಕ ದಾಳಿ: ಎಲ್‌ಒಸಿ ‘ಶಾಂತಿ ಬಸ್’ ಸೇವೆ ಬಂದ್

Update: 2019-02-18 19:12 GMT

ಜಮ್ಮು ಕಾಶ್ಮೀರ, ಫೆ. 18: ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಿಆರ್‌ಪಿಎಫ್‌ನ 40 ಮಂದಿ ಯೋಧರು ಹುತಾತ್ಮರಾದ ಹಿನ್ನೆಲೆಯಲ್ಲಿ ವಾರದ ‘ಶಾಂತಿ ಬಸ್’ ಸೇವೆ ಹಾಗೂ ಭಾರತ-ಪಾಕಿಸ್ತಾನದ ನಡುವಿನ ಗಡಿ ವ್ಯಾಪಾರವನ್ನು ರದ್ದುಗೊಳಿಸಲಾಗಿದೆ. ಪುಲ್ವಾಮ ದಾಳಿಯ ಬಳಿಕ 1965ರಲ್ಲಿ ಪಾಕಿಸ್ತಾನಕ್ಕೆ ನೀಡಲಾಗಿದ್ದ ಪರಮಾಪ್ತ ದೇಶದ ಸ್ಥಾನಮಾನವನ್ನು ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರಕಾರ ಈಗಾಗಲೇ ಹಿಂದೆ ತೆಗೆದಿದೆ. ಅಲ್ಲದೆ, ಐವರು ಪತ್ಯೇಕತಾವಾದಿ ನಾಯಕರಿಗೆ ನೀಡಲಾದ ಭದ್ರತೆಯನ್ನ್ನು ಹಿಂಪಡೆದಿದೆ. ಪುಲ್ವಾಮ ಭಯೋತ್ಪಾದಕ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಜೈಸೆ ಮುಹಮ್ಮದ್ ಹೊತ್ತುಕೊಂಡ ಬಳಿಕ, ಪಿ5 ದೇಶಗಳಾದ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ರಶ್ಯ ಹಾಗೂ ಚೀನಾ ಸಹಿತ 25ಕ್ಕೂ ಹೆಚ್ಚು ದೇಶಗಳಲ್ಲಿ ಆಕ್ರಮಣಕಾರಿ ರಾಜತಾಂತ್ರಿಕ ಪ್ರಯತ್ನದ ಮೂಲಕ ಪಾಕಿಸ್ತಾನವನ್ನು ಏಕಾಂಗಿಯನ್ನಾಗಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಕಾನೂನು ಹಾಗೂ ಸುವ್ಯವಸ್ಥೆ ಹಿನ್ನೆಲೆಯಲ್ಲಿ ವಾರದ ಗಡಿ ನಿಯಂತ್ರಣ ರೇಖೆಯ ಬಸ್ ಸೇವೆ ಹಾಗೂ ವ್ಯಾಪಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೂಂಛ್‌ನ ಉಪ ಆಯುಕ್ತ ರಾಹುಲ್ ಯಾದವ್ ಹೇಳಿದ್ದಾರೆ. ಜಮ್ಮು-ಕಾಶ್ಮೀರ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ನಡುವೆ ವ್ಯಾಪಾರ ಹಾಗೂ ಪ್ರಯಾಣ ರದ್ದುಗೊಳಿಸುವ ನಿರ್ದೇಶನವನ್ನು ಕೇಂದ್ರ ಗೃಹ ಸಚಿವಾಲಯ ನೀಡಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News