ಜೈಶ್ ಉಗ್ರನ ತಿರುಚಿದ ಫೋಟೊ ಬಳಸಿ ಸುದ್ದಿ ಪ್ರಕಟಿಸಿದ ಮಾಧ್ಯಮಗಳು!

Update: 2019-02-19 09:18 GMT

ಜಮ್ಮು, ಫೆ.19: ಪುಲ್ವಾಮಾ ದಾಳಿಯ ಸೂತ್ರಧಾರನನ್ನು ಎನ್‍ ಕೌಂಟರ್‍ ನಲ್ಲಿ ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಸೋಮವಾರ ಮಧ್ಯಾಹ್ನ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಜೆಇಎಂ ಕಮಾಂಡರ್ ಅಬ್ದುಲ್ ರಶೀದ್ ಘಾಝಿ ಅಲಿಯಾಸ್ ಕಮ್ರಾನ್ ಎಂಬಾತನನ್ನು 12 ಗಂಟೆಗಳ ಎನ್‍ ಕೌಂಟರ್ ಬಳಿಕ ಭದ್ರತಾ ಪಡೆಗಳು ಹತ್ಯೆಗೈದಿತ್ತು. ಹಲವು ಮಾಧ್ಯಮ ಸಂಸ್ಥೆಗಳು ಈ ಸುದ್ದಿಯೊಂದಿಗೆ ಜೆಇಎಂ ಕಮಾಂಡರ್ ಎನ್ನಲಾದ ವ್ಯಕ್ತಿಯ ಫೋಟೊ ಪ್ರಕಟಿಸಿತ್ತು.

‘ಇಂಡಿಯಾ ಟುಡೇ’ ಪ್ರಕಟಿಸಿದ ಚಿತ್ರವನ್ನು ಹಲವು ಇತರ ಮಾಧ್ಯಮ ಸಂಸ್ಥೆಗಳಾದ ‘ಎಬಿಪಿ ನ್ಯೂಸ್’, ‘ಝೀ ನ್ಯೂಸ್’, ‘ಇಂಡಿಯಾ ಟಿವಿ’, ‘ಔಟ್‍ ಲುಕ್’ ಮತ್ತು ‘ಎಕನಾಮಿಕ್ ಟೈಮ್ಸ್’ ಸೇರಿದಂತೆ ಇತರ ಮಾಧ್ಯಮಗಳು ಬಳಸಿಕೊಂಡಿವೆ.

ಆದರೆ ಅಬ್ದುಲ್ ರಶೀದ್ ಘಾಝಿಯ ಮುಖದ ಚಿತ್ರವನ್ನು ಅಮೆರಿಕದ ಪಾಪ್ ಸಂಗೀತಗಾರ ಜಾನ್ ಬಾನ್ ಜೋವಿಯವರ ದೇಹಕ್ಕೆ ಅಂಟಿಸಿ ಪ್ರಸರಿಸಲಾಗಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಆಪಾದಿಸಿದ ಹಿನ್ನೆಲೆಯಲ್ಲಿ ಆಲ್ಟ್ ನ್ಯೂಸ್ ಈ ಬಗ್ಗೆ ರಿಯಾಲಿಟಿ ಚೆಕ್ ನಡೆಸಿತು.

ಪ್ರಕಟವಾದ ಚಿತ್ರದ ರಿವರ್ಸ್ ಸರ್ಚ್ ಮಾಡಿದಾಗ, ಟ್ವೀಟ್‍ನಲ್ಲಿ ಬಳಸಿದ ಚಿತ್ರ,  Pinterest ನಲ್ಲಿ ಪ್ರಕಟವಾದ ಜಾನ್ ಬಾನ್ ಜೋವಿಯವರ ಚಿತ್ರಕ್ಕೆ ತಾಳೆಯಾಗಿದೆ.

ಎರಡೂ ಚಿತ್ರಗಳ ಸಾಮ್ಯತೆ ಎಡಗೈಯಲ್ಲಿನ ವಾಚು ಹಾಗೂ ವಾಕಿಟಾಕಿಯಿಂದ ಸ್ಪಷ್ಟವಾಗಿ ಗೊತ್ತಾಗುತ್ತದೆ. ಬಲಗೈ ಆಕೃತಿ ಹಾಗೂ ಬ್ಯಾಟನ್ ಭಂಗಿ ಕೂಡಾ ಅನುರೂಪವಾಗಿದೆ. ವಿವಿಧ ವ್ಯಕ್ತಿಗಳನ್ನು ಈ ಸಮವಸ್ತ್ರದಲ್ಲಿ ಬಿಂಬಿಸಿದ ಚಿತ್ರಗಳು ಕೂಡಾ ಕಂಡುಬಂದಿವೆ.

amazon.in‍ನಲ್ಲಿ ‘ಪೊಲೀಸ್ ಸೂಟ್ ಫೋಟೊ ಫ್ರೇಮ್ ಮೇಕರ್’ ಎಂಬ ಆ್ಯಪ್ ಇದ್ದು, ಈ ಅಪ್ಲಿಕೇಶನ್‍ನಲ್ಲಿ ಪೊಲೀಸ್ ಸಮವಸ್ತ್ರಕ್ಕೆ ಯಾರ ತಲೆಯನ್ನೂ ಜೋಡಿಸಬಹುದಾಗಿದೆ. ಟೆಂಪ್ಲೇಟ್‍ ನಲ್ಲಿ ಉಗ್ರ ಅಬ್ದುಲ್ ರಶೀದ್ ಘಾಝಿಯ ಮುಖವನ್ನು ಸೂಪರ್ ಇಂಪೋಸ್ ಮಾಡಲಾಗಿದೆ. ಯಾವ ಮಾಧ್ಯಮ ಕೂಡಾ ಈ ಚಿತ್ರದ ಅಧಿಕೃತತೆಯನ್ನು ಪರಿಶೀಲಿಸದಿರುವುದು ಅಚ್ಚರಿಯ ವಿಷಯ. ಈ ಚಿತ್ರವನ್ನು ಫೋಟೊ ಸಾಫ್ಟ್‍ವೇರ್ ಅಪ್ಲಿಕೇಶನ್ ಬಳಸಿ ಸೃಷ್ಟಿಸಲಾಗಿದ್ದು, ಖ್ಯಾತ ಮಾಧ್ಯಮ ಸಂಸ್ಥೆಗಳು ಇದನ್ನು ಬಳಸಿವೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News