ವನ್ಯಜೀವಿಗಳ ಕೊಂಬು, ಹುಲಿ ಉಗುರು ಮಾರಾಟಗಾರರ ಬೆಂಬಲಕ್ಕೆ ನಿಂತ ಬಿಜೆಪಿ ಶಾಸಕ ಕುಮಾರಸ್ವಾಮಿ: ಆರೋಪ

Update: 2019-02-19 14:28 GMT

ಚಿಕ್ಕಮಗಳೂರು, ಫೆ.19: ಮೂಡಿಗೆರೆ ತಾಲೂಕು ವಲಯಾರಣ್ಯಾಧಿಕಾರಿಗಳು ಹುಲಿ, ಜಿಂಕೆ, ಕಾಡುಕೋಣ, ಚಿಪ್ಪುಹಂದಿ ಮತ್ತಿತರ ವನ್ಯಜೀವಿಗಳ ಭೇಟೆಯಾಡಿ ಅವುಗಳ ಉಗುರು, ಕೊಂಬು, ಚಿಪ್ಪುಗಳನ್ನು ಮಾರಾಟ ಮಾಡುತ್ತಿದ್ದ ವನ್ಯಜೀವಿ ಭಕ್ಷಕರ ಜಾಲವೊಂದನ್ನು ಬೇಧಿಸಿದ್ದು, ಆರೋಪಿಗಳು ಬಿಜೆಪಿ ಶಾಸಕ ಕುಮಾರಸ್ವಾಮಿ ಅವರ ಬೆಂಬಲಿಗರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಶಾಸಕ ಕುಮಾರಸ್ವಾಮಿ ಅರಣ್ಯಾಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆನ್ನಲಾದ ಘಟನೆ ಸೋಮವಾರ ರಾತ್ರಿ ವರದಿಯಾಗಿದೆ.

ಮೂಡಿಗೆರೆ ಅರಣ್ಯಾಧಿಕಾರಿಗಳ ತಂಡ ಸೋಮವಾರ ತಡ ರಾತ್ರಿ ಹುಲಿ ಉಗುರು, ಜಿಂಕೆ, ಕಾಡೆಮ್ಮೆಗಳ ಕೊಂಬು, ಆಮೆಗಳಂತಹ ವನ್ಯಜೀವಿಗಳ ಮಾರಾಟಗಾರರ ಜಾಲವನ್ನು ಪತ್ತೆ ಹಚ್ಚಿ ಕಾರ್ಯಾಚರಣೆ ಮೂಲಕ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಬೆಂಬಲಿಗರೆನ್ನಲಾದ ತಾಲೂಕಿನ ಕುಂದೂರಿನ ರಂಜಿತ್, ಬಾಳೆಗದ್ದೆಯ ವೆಂಕಟೇಶ್, ಪ್ರಸನ್ನ ಹಾಗೂ ನವೀನ್‍ಕುಮಾರ್ ಎಂಬವರನ್ನು ಬಂಧಿಸಿದ್ದರು. ಕಾರ್ಯಾಚರಣೆಯಲ್ಲಿ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಬಂಧಿತರಾಗಿರುವ ಆರೋಪಿಗಳಿಂದ ಒಂದು ಜೀವಂತ ಆಮೆ, ಎರಡು ಹುಲಿ ಉಗುರುಗಳು, ಜಿಂಕೆ, ಕಡವೆಗಳ ಕೊಂಬು ಸೇರಿದಂತೆ ಒಂದು ಬೈಕ್ ಅನ್ನು ವಶಕ್ಕೆ ಪಡೆದು ಪೊಲೀಸ್ ವಿಚಾರಣೆಗೂ ಒಳಪಡಿಸಿದ್ದರೆಂದು ತಿಳಿದು ಬಂದಿದೆ.

ತನ್ನ ಬೆಂಬಲಿಗರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಸುದ್ದಿ ತಿಳಿಯುತ್ತಿದ್ದಂತೆ ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸೋಮವಾರ ಮೂಡಿಗೆರೆ ವಲಯಾರಣ್ಯಾಧಿಕಾರಿ ಪ್ರಸಾದ್ ಅವರಿಗೆ ಕರೆ ಮಾಡಿದ್ದಾರೆ. ಆದರೆ ಅಧಿಕಾರಿ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಹೇಳಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಶಾಸಕ ಕುಮಾರಸ್ವಾಮಿ ತಡ ರಾತ್ರಿಯೇ ಮೂಡಿಗೆರೆ ವಲಯಾರಣ್ಯಾಧಿಕಾರಿ ಕಚೇರಿಗೆ ಆಗಮಿಸಿ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಲಾಗಿದೆ.

ಮೂಡಿಗೆರೆ ಪಟ್ಟಣದ ಅರಣ್ಯಾಧಿಕಾರಿಗಳ ಕಚೇರಿಗೆ ತಡ ರಾತ್ರಿ ತನ್ನ ಬೆಂಬಲಿಗರೊಂದಿಗೆ ಆಗಮಿಸಿದ್ದ ವೇಳೆ ಶಾಸಕ ಕುಮಾರಸ್ವಾಮಿ ಅವರು ಮದ್ಯಪಾನ ಮಾಡಿದ್ದರೆಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿದ್ದು, ಕಚೇರಿಗೆ ಏಕಾಏಕಿ ನುಗ್ಗಿದ ಶಾಸಕ ಕುಮಾರಸ್ವಾಮಿ ಅವರು, ತನ್ನ ಬೆಂಬಲಿಗರನ್ನು ಬಂಧಿಸಿರುವುದಕ್ಕೆ ಕುಪಿತರಾಗಿ ಅಧಿಕಾರಿ, ಸಿಬ್ಬಂದಿ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಕರೆ ಸ್ವೀಕರಿಸದ ಬಗ್ಗೆ ಗದರಿಸಿದ್ದಾರೆ ಎನ್ನಲಾಗಿದೆ.  ಅಲ್ಲದೇ ಅರಣ್ಯಾಧಿಕಾರಿಗಳ ಕುರಿತು ಬೆದರಿಕೆ ಹಾಕಿದ್ದು, ಅಧಿಕಾರಿಗಳು ಶಾಸಕನನ್ನು ಸಮಾಧಾನ ಮಾಡಲು ಪ್ರಯತ್ನಿಸಿದರೂ ಶಾಸಕರು ಮಾತ್ರ ಆಕ್ರೋಶದಿಂದ ಅಧಿಕಾರಿಗಳಿಗೆ ನಿಂದಿಸಿದಿದ್ದಾರೆ ಎಂದು ತಿಳಿದುಬಂದಿದೆ. 

ಈ ಘಟನೆಯ ವಿಡಿಯೋ ಸದ್ಯ ಜಿಲ್ಲಾದ್ಯಂತ ವೈರಲ್ ಆಗಿದೆ. ಶಾಸಕರ ಈ ರೀತಿಯ ವರ್ತನೆ ಕಂಡು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಕರೆ ಸ್ವೀಕರಿಸಿದ ಕಾರಣಕ್ಕೆ ಗದರಿಸಿದೆ
ಪ್ರಕರಣವೊಂದರ ಸಂಬಂಧ ಮಾಹಿತಿ ಪಡೆಯಲು ಅರಣ್ಯಾಧಿಕಾರಿ ಪ್ರಸಾದ್‍ಗೆ ರಾತ್ರಿ ಕರೆ ಮಾಡಿದ್ದೆ. ಅವರು ಕರೆ ಸ್ವೀಕರಿಸಲಿಲ್ಲ. ಈ ಅಧಿಕಾರಿ ಇಲ್ಲಿಗೆ ಬಂದು ಆರು ತಿಂಗಳಾದರೂ ಸೌಜನ್ಯಕ್ಕೂ ನನ್ನೊಂದಿಗೆ ಪರಿಚಯ ಮಾಡಿಕೊಂಡಿಲ್ಲ. ಇವರ ವಿರುದ್ಧ ಸಾರ್ವಜನಿಕರಿಂದ ದೂರು ಬಂದಿವೆ. ಇದರಿಂದ ಬೇಜಾರಾಗಿ ರಾತ್ರಿ ಅರಣ್ಯ ಇಲಾಖೆ ಕಚೇರಿಗೆ ಹೋಗಿ ಕರೆ ಸ್ವೀಕರಿಸದಿರುವ ಬಗ್ಗೆ ವಿಚಾರಿಸಿದ್ದೇನೆ. ಅಪರಾಧಿಗಳ ವಿರುದ್ಧ ದೂರು ದಾಖಲಿಸಬಾರದೆಂದು ಎಲ್ಲೂ ಹೇಳಿಲ್ಲ.
- ಎಂ.ಪಿ.ಕುಮಾರಸ್ವಾಮಿ, ಶಾಸಕ, ಮೂಡಿಗೆರೆ ಮೀಸಲು ವಿಧಾನಸಭೆ ಕ್ಷೇತ್ರ

ಶಾಸಕನಾಗಿರಲು ಅರ್ಹತೆ ಇಲ್ಲ
ವನ್ಯಜೀವಿ ಬೇಟೆಗಾರರು, ಮಾರಾಟಗಾರರ ಜಾಲ ಬೇಧಿಸಿರುವ ಮೂಡಿಗೆರೆ ಅರಣ್ಯಾಧಿಕಾರಿಗಳ ಕಾರ್ಯವೈಖರಿ ಮೆಚ್ಚುವಂತದ್ದು. ಆದರೆ ಓರ್ವ ಜವಬ್ದಾರಿಯುತ ಶಾಸಕ ರಾತ್ರಿ ವೇಳೆ ಇಲಾಖೆಯ ಕಚೇರಿಗೆ ಹೋಗಿ ಬೆದರಿಕೆ ಹಾಕಿರುವುದು ಖಂಡನೀಯ. ಸರಕಾರಿ ಅಧಿಕಾರಿಗಳ ಕೆಲಸವನ್ನು ಪ್ರಶಂಸಿಸಿ ಅವರಿಗೆ ಬೆಂಬಲ ನೀಡಬೇಕಾದ ಶಾಸಕರು ಅವರ ಮನೋಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿರುವುದು ನಾಚಿಕೆಗೇಡು. ಶಾಸಕ ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಬೆದರಿಕೆ ಹಾಕಿರುವುದರಿಂದ ಅವರು ಶಾಸಕರಾಗಿರಲು ನೈತಿಕ ಅರ್ಹತೆ ಇಲ್ಲ.

- ವೀರೇಶ್, ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಸಂಚಾಲಕ ಹಾಗೂ ಬಿಜೆಪಿ ಕಾರ್ಯಕರ್ತ

ಶಾಸಕ ಕುಮಾರಸ್ವಾಮಿಯಿಂದ ಪದೇ ಪದೇ ಜನವಿರೋಧಿ ಕೃತ್ಯ ?
ಶಾಸಕ ಕುಮಾರಸ್ವಾಮಿ ಅವರು ಇತ್ತೀಚೆಗೆ ಜನವಿರೋಧಿ ಕೆಲಸಕ್ಕೆ ಕೈ ಹಾಕಿದ್ದಾರೆಂದು ಮೂಡಿಗೆರೆ ತಾಲೂಕಿನಾದ್ಯಂತ ಜನತೆ ಆರೋಪಿಸುತ್ತಿದ್ದಾರೆ. ಇತ್ತೀಚೆಗೆ ಅವರು ಬಾಳೂರು ಹೋಬಳಿ ವ್ಯಾಪ್ತಿಯಲ್ಲಿ ತಮ್ಮ ಬೆಂಬಲಿಗರ ಮೂಲಕ ದಲಿತ ಕುಟುಂಬಕ್ಕೆ ಸೇರಿದ ಜಮೀನು ಕಬಳಿಸಲು ಸಂಚು ಮಾಡಿದ್ದಲ್ಲದೇ ದಲಿತ ಕುಟುಂಬದ ಜಮೀನಿಗೆ ಬೆಂಬಲಿಗರನ್ನು ನುಗ್ಗಿಸಿ ಅವರಿಗೆ ಜೀವ ಬೆದರಿಕೆ ಹಾಕಿ 60 ಮೂಡೆ ಕಾಫಿಯನ್ನು ಕಳವು ಮಾಡಿಸಿದ್ದಾರೆಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ವನ್ಯಜೀವಿಗಳು ಹಾಗೂ ಅವುಗಳ ಉಗುರು, ಕೊಂಬುಗಳ ಮಾರಾಟಗಾರರ ಪರ ವಕಾಲತ್ತು ವಹಿಸಿ ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಈ ಘಟನೆಯಿಂದಾಗಿ ಶಾಸಕರು ಕ್ಷೇತ್ರದಲ್ಲಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಶಾಸಕರು ಕ್ಷೇತ್ರದಲ್ಲಿ ಜನಪರವಾದ ಯಾವುದೇ ಕೆಲಸ ಮಾಡುತ್ತಿಲ್ಲ. ಶಾಸಕನೆಂಬ ಅಧಿಕಾರದ ಅಮಲಿನಲ್ಲಿ ದಲಿತರು, ಕಾರ್ಮಿಕರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಪ್ರಭಾವಿ ಹಿಂಬಾಲಕರು ಅಪರಾಧಿಗಳಾದರೂ ವಕಾಲತ್ತು ವಹಿಸುತ್ತಿದ್ದಾರೆಂದು ಸಾರ್ವಜನಿಕರು ಶಾಸಕರ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News