×
Ad

ಜಾತ್ರಾ ಉತ್ಸವದಲ್ಲಿ ಚೂರಿಯಿಂದ ಇರಿದು ಗ್ರಾಪಂ ಸದಸ್ಯನ ಕೊಲೆ

Update: 2019-02-19 20:29 IST

ಪಾಂಡವಪುರ, ಫೆ.19: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ದೇವಿರಮ್ಮ ಜಾತ್ರಾ ಉತ್ಸವದಲ್ಲಿ ಪಾಲ್ಗೊಂಡಿದ್ದ ಗ್ರಾಪಂ ಸದಸ್ಯನನ್ನು ಐವರು ಮಚ್ಚು, ಲಾಂಗ್ ಹಾಗೂ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತಾಲೂಕಿನ ಚಿಕ್ಕಾಡೆ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.

ಚಿಕ್ಕಾಡೆ ಗ್ರಾಪಂ ಸದಸ್ಯ ತಿಮ್ಮೇಗೌಡ(50) ಕೊಲೆಗೀಡಾಗಿರುವ ವ್ಯಕ್ತಿ. ಘಟನೆಯಲ್ಲಿ ಎಪಿಎಂಸಿ ಸದಸ್ಯ ಸ್ವಾಮೀಗೌಡ, ಮೃತ ತಿಮ್ಮೇಗೌಡ ಪುತ್ರ ವಿನಾಯಕ್, ಸಂಬಂಧಿಗಳಾದ ಗೌತಮ್ ಹಾಗೂ ಮಹೇಶ್‍ಗೆ ಗಂಭೀರವಾದ ಗಾಯವಾಗಿದೆ.

ಘಟನೆ ವಿವರ: ಚಿಕ್ಕಾಡೆ ಗ್ರಾಮದ ದೇವಿರಮ್ಮನ ಹಬ್ಬದ ದಿನ ಹೆಬ್ಬಾರೆ ನಡೆಯುವ ವೇಳೆ ಗಲಾಟೆ ನಡೆದು ಈ ವೇಳೆ ಮಚ್ಚು, ತಲವಾರು ಹಾಗೂ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಯೋಗೇಗೌಡ, ಪುತ್ರ ಮದನ್, ಸೋದರ ಆನಂದ್ ಆಲಿಯಾಸ್ ದೇವೇಗೌಡ, ಸಂಬಂಧಿಗಳಾದ ಕುಮಾರ್, ಚಂದು ಎಂಬವರೆ ಮಾರಕಾಸ್ತ್ರಗಳಿಂದ ಹತ್ಯೆಗೈದಿರುವ ಆರೋಪಿಗಳು ಎಂದು ತಿಳಿದುಬಂದಿದೆ.

ಮೃತ ತಿಮ್ಮೇಗೌಡರ ಸೋದರ ಪುತ್ರಿ ಸಹನ ಹಾಗೂ ಯೋಗೇಗೌಡನ ಪುತ್ರ ಮದನ್ ಪ್ರೀತಿಸಿ ಮದುವೆಯಾಗಿದ್ದರು. ನಂತರ ದಿನಗಳಲ್ಲಿ ಮದನ್ ಮನೆಯವರು ಯುವತಿಗೆ ವರದಕ್ಷಿಣೆ ಕಿರುಕುಳ ನೀಡಲು ಮುಂದಾಗಿದ್ದಾರೆ. ಇದರಿಂದ ಯುವತಿ ಗಂಡನ ಮನೆ ಬಿಟ್ಟು ತವರಿಗೆ ಆಗಮಿಸಿದ್ದಳು. ಬಳಿಕ ಪಂಚಾಯಿತಿ ನಡೆಸುವ ಮೂಲಕ 3 ಲಕ್ಷ ರೂ. ವರದಕ್ಷಿಣೆ ಹಣವನ್ನು ನೀಡಿದ್ದರು ಎನ್ನಲಾಗಿದೆ. ಬಳಿಕವೂ ಮತ್ತೆ ವರದಕ್ಷಿಣೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಯುವತಿಯ ಮನೆಯವರು ಮದನ್ ಮತ್ತು ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಿಸಿದ್ದರು. ನಂತರ ಮದನ್ ಹಾಗೂ ಮನೆಯವರು ನ್ಯಾಯಲಯದಿಂದ ಜಾಮೀನು ಪಡೆದು ಹೊರಗೆ ಬಂದಿದ್ದರು. ಇದರ ನೇತೃತ್ವವನ್ನು ತಿಮ್ಮೇಗೌಡರು ವಹಿಸಿದ್ದರಿಂದ ದ್ವೇಷ ಬೆಳೆಸಿಕೊಂಡು ದೇವಿರಮ್ಮನ ಜಾತ್ರೆಯ ಸಂದರ್ಭದಲ್ಲಿ ಮದನ್ ಹಾಗೂ ಮನೆಯವರು, ಸಂಬಂಧಿಕರು ಸಂಚು ರೂಪಿಸಿ ಮಾರಕಾಸ್ತ್ರಗಳಿಂದ ತಿಮ್ಮೇಗೌಡನನ್ನು ಕೊಚ್ಚಿ ಕೊಲೆಗೈದಿದ್ದಾರೆ ಎನ್ನಲಾಗಿದೆ. 

ಘಟನೆಯ ವೇಳೆ ಬಿಡಿಸಲು ಹೋದ ಎಪಿಎಂಸಿ ಸದಸ್ಯ ಸ್ವಾಮೀಗೌಡ, ಮೃತ ತಿಮ್ಮೇಗೌಡ ಪುತ್ರ ವಿನಾಯಕ್, ಸಂಬಂಧಿಗಳಾದ ಗೌತಮ್ ಹಾಗೂ ಮಹೇಶ್‍ಗೂ ತಲವಾರಿನಿಂದ ಹಲ್ಲೆ ನಡೆಸಿದ್ದಾರೆ. ಆದರೆ, ಘಟನೆಯಲ್ಲಿ ತೀವ್ರ ರಕ್ತಸ್ರಾವಗೊಂಡ ತಿಮ್ಮೇಗೌಡ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬಳಿಕ ಪೊಲೀಸರು ಮೃತ ತಿಮ್ಮೇಗೌಡ ದೇಹವನ್ನು ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಶವಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದರು.

ಪೊಲೀಸರ ವೈಪಲ್ಯ: ಚಿಕ್ಕಾಡೆ ಗ್ರಾಮದ ದೇವಿರಮ್ಮ ಉತ್ಸವದಲ್ಲಿ ಈ ಹಿಂದೆಯೂ ದಲಿತರು ಹಾಗೂ ಸವರ್ಣಿಯರ ಮಧ್ಯೆ ಗಲಾಟೆಯಾಗಿದ್ದರಿಂದ ಉತ್ಸವಕ್ಕೆ ಪ್ರತಿ ವರ್ಷವೂ ಹೆಚ್ಚಿನ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗುತ್ತಿತ್ತು. ಆದರೆ, ಈ ವರ್ಷ ಜಾತ್ರೆಗೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಕೇವಲ ಮೂರ್ನಾಲ್ಕು ಪೊಲೀಸರನ್ನು ಮಾತ್ರ ಉತ್ಸವದ ಭದ್ರತೆಗೆ ನಿಯೋಜಿಸಲಾಗಿತ್ತು ಎನ್ನಲಾಗಿದೆ. ಜತೆಗೆ ಗಲಾಟೆ ನಡೆಯುವ ಸಂದರ್ಭದಲ್ಲಿ ಪೊಲೀಸರು ಪಕ್ಕದಲ್ಲಿಯೇ ಇದ್ದರೂ ಘಟನಾ ಸ್ಥಳಕ್ಕೆ ಬರಲಿಲ್ಲ. ಜಾತ್ರಾ ಮಹೋತ್ಸವದಲ್ಲಿ ಹೆಚ್ಚಿನ ಪೊಲಿಸ್ ಭದ್ರತೆ ಇದ್ದಿದ್ದರೆ ಘಟನೆ ನಡೆಯದಂತೆ ತಡೆಯಬಹುದಾಗಿತ್ತು ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಸಚಿವ ಪುಟ್ಟರಾಜು ಭೇಟಿ: ಪಟ್ಟಣದ ಉಪವಿಭಾಗೀಯ ಆಸ್ಪತ್ರೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ತಿಮ್ಮೇಗೌಡ ಕುಟುಂಬಕ್ಕೆ ಸಾಂತ್ವನ ಹೇಳಿದರು. ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ರೀತಿಯಲ್ಲಿ ಕ್ರಮತೆಗೆದುಕೊಳ್ಳುವಂತೆ ಈಗಾಗಲೇ ಎಸ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ಈ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಮುಖ ಆರೋಪಿ ದೇವೇಗೌಡನನ್ನು ಬಂಧಿಸಲಾಗಿದೆ. ಆತನ ಪತ್ನಿ ಜಯಲಕ್ಷ್ಮೀ (ದೀಪು) ಅವರನ್ನು ವಿಚಾರಣೆಗೊಳಪಡಿಸಲಾಗಿದೆ. ಉಳಿದಂತೆ ನಾಲ್ವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಚಿಕ್ಕಾಡೆ ಗ್ರಾಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್‍ದೇವರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News