ಆನಂದ್ ಸಿಂಗ್ ಮೇಲೆ ಹಲ್ಲೆ ಪ್ರಕರಣದಲ್ಲಿ ಶಾಸಕ ಗಣೇಶ್ ಬಲಿಪಶು: ರಮೇಶ್ ಜಾರಕಿಹೊಳಿ
ಬಳ್ಳಾರಿ, ಫೆ.19: ಈಗಲ್ಟನ್ ರೆಸಾರ್ಟ್‌ನಲ್ಲಿ ಶಾಸಕ ಆನಂದ್ ಸಿಂಗ್ ಮೇಲೆ ನಡೆದಿರುವ ಹಲ್ಲೆ ಪ್ರಕರಣದಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್‌ರನ್ನು ಬಲಿಪಶು ಮಾಡಲಾಗಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ಮಂಗಳವಾರ ನಗರದಲ್ಲಿರುವ ಶಾಸಕ ಗಣೇಶ್ ಅವರ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಈಗಲ್ಟನ್ ರೆಸಾರ್ಟ್‌ನಲ್ಲಿ ಅವತ್ತು ಏನಾಯಿತು ಎಂಬುದು ಆನಂದ್‌ಸಿಂಗ್, ಗಣೇಶ್ ಹಾಗೂ ಭೀಮಾನಾಯ್ಕರಿಗೆ ಮಾತ್ರ ಗೊತ್ತು. ಗಣೇಶ್ ಹಾಗೂ ಭೀಮಾನಾಯ್ಕ ಆತ್ಮೀಯ ಸ್ನೇಹಿತರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಭೀಮಾನಾಯ್ಕ, ಗಣೇಶ್ ಪರವಾಗಿ ನಿಲ್ಲಬೇಕಿತ್ತು. ಆದರೆ, ಯಾಕೆ ಹಿಂದೆ ಸರಿದಿದ್ದಾರೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದರು.
ಈ ಪ್ರಕರಣದಲ್ಲಿ ಗಣೇಶ್ ಯಾಕೆ ಬಂಧನಕ್ಕೊಳಗಾಗಬೇಕು. ಅವರಿಗೆ ಆಗುತ್ತಿರುವ ಅನ್ಯಾಯವನ್ನು ಇಡೀ ರಾಜ್ಯದ ಜನ ನೋಡುತ್ತಿದ್ದಾರೆ. ಗಣೇಶ್ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹಿಂಪಡೆಯಬೇಕೆಂದು ನಾವು ಶಾಸಕಾಂಗ ಪಕ್ಷದ ಸಭೆಯಲ್ಲಿ ಮನವಿ ಮಾಡಿದ್ದೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.
ಆನಂದ್‌ಸಿಂಗ್ ಈ ಘಟನೆ ಕುರಿತು ಪ್ರಕರಣ ದಾಖಲಿಸಬೇಕೆಂಬ ಉದ್ದೇಶ ಹೊಂದಿರಲಿಲ್ಲ. ಆದರೆ, ಪ್ರಭಾವಿ ನಾಯಕರ ಒತ್ತಡಕ್ಕೆ ಮಣಿದು ಗಣೇಶ್ ವಿರುದ್ಧ ದೂರು ಸಲ್ಲಿಸಿದ್ದಾರೆ. ಗಣೇಶ್ ವಿರುದ್ಧದ ಪ್ರಕರಣವನ್ನು ಹಿಂಪಡೆದು, ನ್ಯಾಯ ಸಮ್ಮತವಾಗಿ ತನಿಖೆ ಆಗಲಿ ಎಂದು ಅವರು ಒತ್ತಾಯಿಸಿದರು.
ಶಾಸಕ ಗಣೇಶ್ ಸಚಿವರಾಗುತ್ತಾರೆ. ಮೊದಲ ಬಾರಿ ಶಾಸಕರಾದವರೂ ಸಚಿವರಾಗಬಾರದು ಎಂಬ ನಿಯಮವೇನಿಲ್ಲ. ರಾಜ್ಯ ರಾಜಕಾರಣವು ನಿಂತ ನೀರಲ್ಲ. ಇಲ್ಲಿ ಯಾವಾಗ, ಏನು ಬೇಕಾದರೂ ಆಗಬಹುದು. ಕಾದು ನೋಡಿ ಎಂದು ರಮೇಶ್ ಜಾರಕಿಹೊಳಿ ಹೇಳಿದರು.