‘ಕಾರು ಅಪಘಾತದಲ್ಲಿ ಇಬ್ಬರ ಮೃತ್ಯು’ ದುರಾದೃಷ್ಟಕರ: ಶಾಸಕ ಸಿ.ಟಿ.ರವಿ
ಬೆಂಗಳೂರು, ಫೆ.19: ಕುಣಿಗಲ್ ಬಳಿ ಇಂದು ಮುಂಜಾನೆ ಕಾರು ಢಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲೆ ಮೃತಪಟ್ಟಿದ್ದು ದುರಾದೃಷ್ಟಕರ ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಮೂಗು ಹಾಗೂ ಎದೆಯ ಭಾಗಕ್ಕೆ ಗಾಯವಾಗಿದೆ. ದುರಾದೃಷ್ಟಕರವಾಗಿ ಇಬ್ಬರು ಯುವಕರು ದುರ್ಮರಣ ಹೊಂದಿದ್ದಾರೆ ಎಂದರು.
ತಮಿಳುನಾಡಿನ ಚೆನ್ನೈನಲ್ಲಿ ಆಯೋಜಿಸಲಾಗಿರುವ ಪ್ರಧಾನಿ ನರೇಂದ್ರಮೋದಿ ಅವರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಇಂದು ಬೆಳಗ್ಗೆಯೇ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡಬೇಕಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿಯೇ ಮನೆಯಿಂದ ಹೊರಟಿದ್ದೆ ಎಂದು ಅವರು ಹೇಳಿದರು.
ನನ್ನ ವಾಹನವನ್ನು ಆಕಾಶ್ ಎಂಬವರು ಚಾಲನೆ ಮಾಡುತ್ತಿದ್ದರು. ನಾನು ಕಾರಿನಲ್ಲಿ ನಿದ್ದೆ ಮಾಡುತ್ತಿದ್ದೆ. ಅಲ್ಲದೇ, ನಾನು ಅವರನ್ನು 100 ಕಿ.ಮೀ. ವೇಗದ ಒಳಗೆಯೇ ಕಾರು ಚಾಲನೆ ಮಾಡುವಂತೆ ಸೂಚಿಸಿದ್ದೆ. ನನಗೆ ನಿದ್ದೆಯಿಂದ ಎಚ್ಚರವಾದಾಗ ಕಾರಿನ ಏರ್ ಬ್ಯಾಗ್ ತೆರೆದಿತ್ತು. ಕಾರಿನ ಬಾಗಿಲನ್ನು ಯಾರು ತೆರೆದದ್ದು ಗೊತ್ತಿಲ್ಲ. ಅದಾಗಲೇ ಅಪಘಾತವಾಗಿತ್ತು ಎಂದು ಸಿ.ಟಿ.ರವಿ ಹೇಳಿದರು.
ಘಟನೆಯಲ್ಲಿ ಮೃತಪಟ್ಟವರು ಪ್ರವಾಸಕ್ಕೆ ಹೋಗಿ ಹಿಂದಿರುಗುತ್ತಿದ್ದವರು ಎಂದು ತಿಳಿಯಿತು. ಘಟನೆ ಬಗ್ಗೆ ಚಾಲಕನನ್ನು ವಿಚಾರಿಸಿದಾಗ ಎದುರುಗಡೆ ಲಾರಿ ಇತ್ತು. ಹಾಗಾಗಿ, ವಾಹನವನ್ನು ಮತ್ತೊಂದು ಬದಿಗೆ ಚಲಿಸಿದೆ, ಇದರಿಂದಾಗಿ ಅಪಘಾತವಾಯಿತೆಂದು ತಿಳಿಸಿದರು. ಸಾರ್ವಜನಿಕ ಕ್ಷೇತ್ರದಲ್ಲಿರುವ ನಾನು ಮದ್ಯಪಾನ ಮಾಡಿರಲಿಲ್ಲ. ನಾನು ವಾಹನ ಚಾಲನೆ ಮಾಡುವ ಅಭ್ಯಾಸವನ್ನು ಬಿಟ್ಟಿದ್ದೇನೆ ಎಂದು ರವಿ ಹೇಳಿದರು.
ಕೂಡಲೇ, ಹುಲಿಯೂರು ದುರ್ಗದ ಆಂಬ್ಯುಲೆನ್ಸ್ ಅನ್ನು ಅಪಘಾತ ನಡೆದ ಸ್ಥಳಕ್ಕೆ ಕರೆಸಿದೆ. ಅಲ್ಲದೇ, ಕುಣಿಗಲ್ ಕೃಷ್ಣ ಕುಮಾರ್‌ಗೆ ವಿಷಯ ಮುಟ್ಟಿಸಿದೆ. ಅವರೂ, ಆ ಸಂದರ್ಭದಲ್ಲಿ ಸ್ಥಳಕ್ಕೆ ಬಂದರು. ನಂತರವಷ್ಟೇ ನಾನು ಬೆಂಗಳೂರಿಗೆ ಬಂದು ವಿಕ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೆ ಎಂದು ಅವರು ವಿವರಣೆ ನೀಡಿದರು.
ಮೃತಪಟ್ಟ ಯುವಕರ ಕುಟುಂಬದವರಿಗೆ ನಾನು ಹೇಗೆ ಧೈರ್ಯ ಹೇಳಲಿ ಎಂಬುದು ಗೊತ್ತಾಗುತ್ತಿಲ್ಲ. ಭಗವಂತನೇ ಅವರಿಗೆ ಧೈರ್ಯ ಕೊಡಬೇಕು. ವೈದ್ಯರ ಸಲಹೆಯಂತೆ ವಿಶ್ರಾಂತಿ ಪಡೆಯುತ್ತಿದ್ದೇನೆ. ಸ್ವಲ್ಪ ದಿನಗಳ ನಂತರ ಆ ಯುವಕರ ಮನೆಗೆ ಭೇಟಿ ನೀಡುತ್ತೇನೆ ಎಂದು ರವಿ ಹೇಳಿದರು.