×
Ad

ಸಿದ್ದರಾಮಯ್ಯರ ನಾಯಕತ್ವ ಮೆಚ್ಚಿ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ: ಶಾಸಕ ಬಿ.ನಾಗೇಂದ್ರ

Update: 2019-02-19 20:47 IST

ಬಳ್ಳಾರಿ, ಫೆ.19: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಯಕತ್ವವನ್ನು ಮೆಚ್ಚಿ ನಾನು ಕಾಂಗ್ರೆಸ್ ಸೇರ್ಪಡೆಯಾದದ್ದು. ನಾನು ಕಾಂಗ್ರೆಸ್ ಸೇರಲು ಮಾಜಿ ಸಚಿವ ಸಂತೋಷ್ ಲಾಡ್ ಕೂಡ ಕಾರಣ ಎಂದು ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ತಿಳಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ಸೇರ್ಪಡೆ ವೇಳೆ ಸೂಕ್ತ ಸ್ಥಾನಮಾನ ಕೊಡುವುದಾಗಿ ನಾಯಕರು ಭರವಸೆ ನೀಡಿದ್ದರು. ನಾನು ಕಾಂಗ್ರೆಸ್ ಸೇರುವಾಗಲೇ ಆನಂದ್ ಸಿಂಗ್ ಅವರೂ ಪಕ್ಷಕ್ಕೆ ಬಂದರು ಎಂದರು.

ಸದ್ಯಕ್ಕೆ ನಾನು ಸಚಿವ ಸ್ಥಾನದ ವಿಚಾರವನ್ನು ತಲೆಯಿಂದ ತೆಗೆದು ಹಾಕಿದ್ದೇನೆ. ಪಕ್ಷ ತೀರ್ಮಾನ ಮಾಡಿ, ನಮ್ಮ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ನೀಡಿದೆ. ನಿಗಮ, ಮಂಡಳಿಯ ಅಧ್ಯಕ್ಷ ಸ್ಥಾನಕ್ಕಿಂತಲೂ, ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಆದರೆ, ಈಗ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಎಂದು ಅವರು ಹೇಳಿದರು.

ಸುವರ್ಣ ಕ್ಷೇತ್ರ: ಕಳೆದ ಮೂರು ತಿಂಗಳಿನಿಂದ ನನ್ನ ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸಲು ಆಗಿರಲಿಲ್ಲ. ಮೂರು ತಿಂಗಳಲ್ಲಿ ಆಗದಿರುವ ಕೆಲಸವನ್ನು ಒಂದು ತಿಂಗಳಲ್ಲಿ ಮಾಡಿ ಮುಗಿಸುತ್ತೇನೆ. ನನ್ನ ಕ್ಷೇತ್ರವನ್ನು ಇಡೀ ರಾಜ್ಯದಲ್ಲೇ ಸುವರ್ಣ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸುತ್ತೇನೆ ಎಂದು ನಾಗೇಂದ್ರ ಹೇಳಿದರು.

ಈಗಲ್‌ಟನ್ ರೆಸಾರ್ಟ್‌ನಲ್ಲಿ ವಿಜಯನಗರ ಶಾಸಕ ಆನಂದ್‌ಸಿಂಗ್ ಮೇಲೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ನಡೆಸಿದ ಹಲ್ಲೆ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಗಲಾಟೆಯು ಆತಂಕಕಾರಿ. ಗಣೇಶ್ ನನ್ನ ಸಹೋದರನಿದ್ದಂತೆ. ಆತ ಆ ರೀತಿಯಲ್ಲಿ ಮಾಡುವವನಲ್ಲ ಎಂದರು.

ಆನಂದ್‌ಸಿಂಗ್ ಆಸ್ಪತ್ರೆಯಲ್ಲಿದ್ದಾಗ ನಾನು ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ. ಅಂದು ರಾತ್ರಿ ನಡೆದ ಘಟನೆಯನ್ನು ಅವರು ನನಗೆ ತಿಳಿಸಿದರು. ಗಣೇಶ್ ನನ್ನು ನಾವು ಕೈ ಬಿಡುವುದಿಲ್ಲ. ಆನಂದ್ ಸಿಂಗ್ ಹಾಗೂ ಗಣೇಶ್‌ನನ್ನು ಕೂರಿಸಿ ರಾಜಿ ಸಂಧಾನ ಮಾಡುತ್ತೇವೆ ಎಂದು ಅವರು ಹೇಳಿದರು.

ನಮ್ಮ ಜಿಲ್ಲೆಯ ಸಮಸ್ಯೆ ನಮ್ಮಲ್ಲಿಯೇ ಬಗೆಹರಿಯಬೇಕು ಎನ್ನುವ ಮೂಲಕ ಪರೋಕ್ಷವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ತಮ್ಮ ಅಸಮಾಧಾನವನ್ನು ನಾಗೇಂದ್ರ ಹೊರ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News