ಉಗ್ರರ ದಾಳಿ ವಿಚಾರವನ್ನು ರಾಜಕೀಯಗೊಳಿಸಬಾರದು: ಮಲ್ಲಿಕಾರ್ಜುನ ಖರ್ಗೆ

Update: 2019-02-19 16:01 GMT

ಕಲಬುರ್ಗಿ, ಫೆ.19: ಕಾಶ್ಮೀರದ ಪುಲ್ವಾಮಾ ಬಳಿ ನಡೆದ ಉಗ್ರರ ದಾಳಿ ವಿಚಾರವನ್ನು ಯಾರೂ ರಾಜಕೀಯಕ್ಕೆ ಬಳಸಬಾರದು ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಸುರಕ್ಷತೆ ದೃಷ್ಟಿಯಿಂದ ನಾವೆಲ್ಲರೂ ಒಗ್ಗೂಡಿ ಸೈನಿಕರ ಬೆಂಬಲಕ್ಕೆ ನಿಂತು ನೈತಿಕ ಧೈರ್ಯ ತುಂಬಬೇಕು. ಆ ನಿಟ್ಟಿನಲ್ಲಿ ಪಕ್ಷಾತೀತವಾಗಿ ಭಯೋತ್ಪಾದನೆಯ ವಿರುದ್ಧ ಹೋರಾಟ ಮಾಡಬೇಕಿದೆ ಎಂದು ತಿಳಿಸಿದರು.

ನಮ್ಮ ಸೈನ್ಯ ಕೈಗೊಳ್ಳುವ ನಿರ್ಧಾರಕ್ಕೆ ಬೆಂಬಲಿಸುವ ಪ್ರಸ್ತಾವನೆಗೆ ಸರ್ವಪಕ್ಷ ಸಭೆಯಲ್ಲಿ ಒಮ್ಮತ ಸೂಚಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಸ್ವಭಾವ ಏನು ಎಂಬುದು ಎಲ್ಲರಿಗೂ ಗೊತ್ತಿದೆ. ಈ ಸಮಯದಲ್ಲಿ ಅದನ್ನು ಮಾತನಾಡಲ್ಲ. ನಾವೆಲ್ಲರೂ ಒಗ್ಗೂಡಿ ಸೇನೆಯ ಬೆಂಬಲಕ್ಕೆ ನಿಲ್ಲಬೇಕು ಎಂಬುದು ನನ್ನ ಅಭಿಪ್ರಾಯ ಎಂದರು. ಪುಲ್ವಾಮಾ ಉಗ್ರರ ದಾಳಿ ವಿಚಾರವಾಗಿ ನವಜೋತ್ ಸಿಂಗ್ ಸಿದ್ಧು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೈನಿಕರನ್ನು ಕುಗ್ಗಿಸುವಂತಹ ಮಾತುಗಳನ್ನು ಯಾರೂ ಕೂಡ ಆಡಬಾರದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News