ಅಕ್ರಮ ಮರಳು ಸಾಗಾಟ: ಬಿಜೆಪಿ ಮುಖಂಡ ಸೇರಿ 18 ಜನರ ಬಂಧನ

Update: 2019-02-19 16:39 GMT

ಶಿವಮೊಗ್ಗ, ಫೆ.19: ತುಂಗಾಭದ್ರಾ ನದಿಯಿಂದ ಕಾನೂನುಬಾಹಿರವಾಗಿ ಮರಳು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 18 ಜನರನ್ನು ಬಂಧಿಸಿದ ಘಟನೆ ಶಿವಮೊಗ್ಗ ತಾಲೂಕಿನ ಹೊಳೆ ಹನಸವಾಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ. 

ಖಚಿತ ವರ್ತಮಾನದ ಮೇರೆಗೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ. ಮರಳು ದಂಧೆಯ ರೂವಾರಿ ಎಂದೇ ಹೇಳಲಾಗುತ್ತಿರುವ, ಹೊಂಗಿರಣ ಲೋಕೇಶ್ ಎಂಬಾತನನ್ನು ಪೊಲೀಸರು ಬಂಧಿಸುವಲ್ಲಿ ಸಫಲವಾಗಿದ್ದಾರೆ. 

ಆರೋಪಿಗಳು ಕಳೆದ ಹಲವು ದಿನಗಳಿಂದ ಯಾವುದೇ ಅನುಮತಿಯಿಲ್ಲದೆ, ಕಾನೂನುಬಾಹಿರವಾಗಿ ತುಂಗಾಭದ್ರಾ ನದಿಯಿಂದ ಮರಳು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದರು. ದಾಳಿಯ ವೇಳೆ ಸುಮಾರು 20 ಲಾರಿ ಲೋಡ್‍ನಷ್ಟು ಮರಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬಿಜೆಪಿ ಮುಖಂಡ: ಪ್ರಸ್ತುತ ಬಂಧಿತರಲ್ಲಿ ಹೊಳೆಹನಸವಾಡಿ ಗ್ರಾಮದ ನಿವಾಸಿ ಹೊಂಗಿರಣ ಲೋಕೇಶ್ ಮರಳು ದಂಧೆಯ ಮುಖ್ಯ ಆರೋಪಿಯಾಗಿದ್ದಾನೆ. ಈತ ಹೊಳೆ ಹನಸವಾಡಿ ಗ್ರಾಮದ ಬಿಜೆಪಿ ಪಕ್ಷದ ಮುಖಂಡನಾಗಿದ್ದಾನೆ. ಎಲ್ಲಕ್ಕಿಂತ ಮುಖ್ಯವಾಗಿ ಇತ್ತೀಚೆಗೆ ಅಕ್ರಮ ಮರಳು ಗಣಿಗಾರಿಕೆ ನಿಯಂತ್ರಣ ಮಾಡುವಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ಆರೋಪಿಸಿದ್ದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್‍ರವರ ಬೆಂಬಲಿಗನೆಂದು ಹೇಳಲಾಗುತ್ತಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆಡೆ ಮಾಡಿಕೊಟ್ಟಿದೆ. 

ಈ ನಡುವೆ ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಆಯನೂರು ಮಂಜುನಾಥ ಮಾತನಾಡಿ, 'ಹೊಂಗಿರಣ ಲೋಕೇಶ್ ನನ್ನ ಶಿಷ್ಯನಲ್ಲ. ಆತ ಪರಿಚಿತನಷ್ಟೆ. ಈ ಹಿಂದೆ ಆತ ಬಿಜೆಪಿ ಕಾರ್ಯಕರ್ತನಾಗಿದ್ದ. ಈಗ ಜೆಡಿಎಸ್ ಕಾರ್ಯಕರ್ತನಾಗಿರಬಹುದು' ಎಂದು ತಿಳಿಸಿದ್ದಾರೆ. ಅವನು ಮತ್ತೆ ಬಿಜೆಪಿ ಬಂದಿದ್ದಾನೆ ಎಂಬುವುದರ ಬಗ್ಗೆ ನನಗೆ ಮಾಹಿತಿಯಿಲ್ಲ. ಪಕ್ಷದಲ್ಲಿರುವವರು ಯಾರೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಹಿಸಲಿ, ಅವರ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಬೇಕು ಎಂದು ಈ ಹಿಂದೆ ಹೇಳಿದ್ದೇನೆ. ಈ ನಿಲುವಿಗೆ ಈಗಲೂ ನಾನು ಬದ್ದವಿರುವುದಾಗಿ ತಿಳಿಸಿದ್ದಾರೆ. 

ದೂರಿದ್ದರು: ಇತ್ತೀಚೆಗೆ ಆಯನೂರು ಮಂಜುನಾಥ್‍ರವರು ಸುದ್ದಿಗೋಷ್ಠಿ ನಡೆಸಿ, ಜಿಲ್ಲಾ ಪೊಲೀಸ್ ಇಲಾಖೆಯ ವೈಫಲ್ಯದ ಬಗ್ಗೆ ವಾಗ್ದಾಳಿ ನಡೆಸಿದ್ದರು. ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಅಕ್ರಮ ಚಟುವಟಿಕೆ ತಡೆಯುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ ಎಂದು ದೂರಿದ್ದರು. ಆಯನೂರು ಟೀಕೆಯ ನಂತರ ಜಿಲ್ಲಾ ಪೊಲೀಸ್ ಇಲಾಖೆ ಅಕ್ರಮ ಮರಳು ಗಣಿಗಾರಿಕೆ ವಿರುದ್ಧ ಸಮರ ಸಾರಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News