ಮಾನವ ಧರ್ಮದಂತೆ ನಡೆದುಕೊಳ್ಳುತ್ತಿದ್ದೇನೆ: ಮುಖ್ಯಮಂತ್ರಿ ಕುಮಾರಸ್ವಾಮಿ

Update: 2019-02-19 17:29 GMT

ಮೈಸೂರು,ಫೆ.19: ನಾನು ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದು, ಮಾನವ ಧರ್ಮದಂತೆ ನಡೆದುಕೊಳ್ಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ 11ನೇ ಕುಂಭಮೇಳದ ಧಾರ್ಮಿಕ ಸಭೆಯಲ್ಲಿ ಮಂಗಳವಾರ ಭಾಗವಹಿಸಿ ಅವರು ಮಾತನಾಡಿದರು. ನಾನು ಒಬ್ಬ ಸಾಮಾನ್ಯ ವ್ಯಕ್ತಿ, ಮಾನವ ಧರ್ಮದ ಮೇಲೆ ನಂಬಿಕೆ ಇಟ್ಟವನು. ನಾನೇನು ದೊಡ್ಡ ಧರ್ಮ ಪ್ರಚಾರಕನೂ ಅಲ್ಲ, ಧರ್ಮ ರಕ್ಷಕನೂ ಅಲ್ಲ. ಸ್ವಾಮೀಜಿಗಳು ಕೆಲಸ ಮಾಡುತ್ತಾರೆ. ನನ್ನ ಜೀವನದಲ್ಲಿ ಮಾನವೀಯ ಧರ್ಮವನ್ನು ಮೈಗೂಡಿಸಿಕೊಂಡಿದ್ದೇನೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ನೆಮ್ಮದಿ ಹಾಗೂ ಶಾಂತಿ ನೆಲೆಸುತ್ತದೆ. ಯುವಜನಾಂಗ ಧಾರ್ಮಿಕ ಕ್ಷೇತ್ರಗಳತ್ತ ಮುಖಮಾಡಬೇಕು. ಈ ಬಾರಿ ಒಳ್ಳೆಯ ಮಳೆಯಾಗಿ ರಾಜ್ಯವನ್ನು ಬರಗಾಲದಿಂದ ದೂರವಿಡಲಿ ಎಂದು ದೇವರಲ್ಲಿ ಪ್ರಾರ್ಥಿಸುವೆ ಎಂದು ಹೇಳಿದರು.

ಪ್ರೇಕ್ಷಣೆಗಷ್ಟೇ ಸೀಮಿತ: ಟಿ.ನರಸೀಪುರದ ತಿರುಮಕೂಡಲಿನಲ್ಲಿನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಮಂಗಳವಾರ ಆಗಮಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾವೇರಿ, ಕಪಿಲ, ಸ್ಪಟಿಕ ನದಿಗಳ ಸಂಗಮದಲ್ಲಿ ಪುಣ್ಯಸ್ನಾನ ಮಾಡುತ್ತಾರೆಂದು ಹೇಳಲಾಗಿತ್ತು. ಆದರೆ ಅವರು ಮಿಂದೇಳದೆ ಪ್ರೇಕ್ಷಣೆಯನ್ನಷ್ಟೇ ಮಾಡಿಕೊಂಡಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುಣ್ಯಸ್ನಾನ ಪ್ರೇಕ್ಷಣೆಗಷ್ಟೇ ಸೀಮಿತವಾಗಿದೆ ಎಂಬ ಮಾತು ಕೇಳಿ ಬಂದಿದೆ. ಸಚಿವ ಜಿ.ಟಿ ದೇವೇಗೌಡರು ಮಾತ್ರ ಪುಣ್ಯಸ್ನಾನ ನಡೆಸಿದ್ದು, ವಿವಿಧ ಮಠಾಧೀಶರ ಸಮ್ಮುಖದಲ್ಲಿ ಮುಖ್ಯಮಂತ್ರಿಗಳು ಪ್ರೇಕ್ಷಣೆಯನ್ನಷ್ಟೇ ಮಾಡಿಸಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಪುಣ್ಯಸ್ನಾನ ಮಾಡುತ್ತಾರೆಂದು ನಿರೀಕ್ಷೆ ಇತ್ತು. ಆದರೆ ಜನರ ನಿರೀಕ್ಷೆಯನ್ನು ಮುಖ್ಯಮಂತ್ರಿಗಳು ಹುಸಿ ಮಾಡಿದ್ದಾರೆ ಎನ್ನಲಾಗುತ್ತಿದೆ.

ಸಚಿವರಾದ ಸಾ.ರಾ.ಮಹೇಸ್, ಜಿ.ಟಿ.ದೇವೇಗೌಡ, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನಾ, ಟಿ.ನರಸೀಪುರ ಶಾಸಕ ಅಶ್ವಿನ್ ಕುಮಾರ್, ಶಾಸಕ ಮಹದೇವ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥಸ್ವಾಮಿ, ಕಾವೇರಿ ಸಮಿತಿ ಹೋರಾಟಗಾರ ಸಿ.ಮಾದೇಗೌಡ, ವಾಟಾಳು ಸಿದ್ದಲಿಂಗಸ್ವಾಮೀಜಿ, ಕಾಗಿನೆಲೆ ಮಠದ ಶಿವಾನಂದಪುರಿ ಸ್ವಾಮೀಜಿ, ರಾಮಕೃಷ್ಣ ಮಠದ ಸ್ವಾಮೀಜಿ, ಚಾಮುಂಡಿ ಬೆಟ್ಟದ ಅರ್ಚಕ ಶಶಿಶೇಖರ ಧೀಕ್ಷಿತ್, ಸುತ್ತೂರು ಮಠದ ಕಿರಿಯ ಸ್ವಾಮೀಜಿ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News