ವಿಜಯಪುರ: 'ಸುಬಾಹು' ಆ್ಯಪ್‍ ಬಿಡುಗಡೆಗೊಳಿಸಿದ ಗೃಹ ಸಚಿವ ಎಂ.ಬಿ.ಪಾಟೀಲ್

Update: 2019-02-19 17:41 GMT

ವಿಜಯಪುರ,ಫೆ.19: ಬೀಟ್ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ನಿವಾರಣೆ ಮಾಡಲು ಆಧುನಿಕ ತಂತ್ರಜ್ಞಾನ ಆಧರಿಸಿ ಸುಬಾಹು ಎಂಬ ಆ್ಯಪ್ ರೂಪಿಸಿರುವುದು ಅರ್ಥಪೂರ್ಣವಾದ ಸಂಗತಿ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ವಿಜಯಪುರ ಜಿಲ್ಲಾ ಪೊಲೀಸ್ ಇಲಾಖೆಯ ಚಿಂತನ್ ಹಾಲ್‍ನಲ್ಲಿ ನಡೆದ ಬೀಟ್ ವ್ಯವಸ್ಥೆ ಬಲಪಡಿಸುವ ಸುಬಾಹು ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಪೊಲೀಸ್ ಆಡಳಿತ ವ್ಯವಸ್ಥೆ ಸುಧಾರಣೆಗೆ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದ್ದು, ಡಿಜಿ ನೀಲಮಣಿ ರಾಜು ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಹೊಸ ಸುಧಾರಣೆ ತರುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸಲಾಗುತ್ತಿದೆ ಎಂದರು.

ಬಹುತೇಕರಲ್ಲಿ ರಾಜಕೀಯ ಪ್ರಭಾವ ಹೊಂದಿರುವ ಪೊಲೀಸ್ ಅಧಿಕಾರಿಗಳಿಗೆ ಮಾತ್ರ ಎಕ್ಸಿಕ್ಯೂಟಿವ್ ಹುದ್ದೆ ಸಿಗುತ್ತದೆ ಎಂಬ ಭಾವನೆ ಮನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಅಧಿಕಾರಿ ಇಂತಿಷ್ಟು ವರ್ಷ ಎಕ್ಸಿಕ್ಯೂಟಿವ್, ಇಂತಿಷ್ಟು ವರ್ಷ ನಾನ್ ಎಕ್ಸಿಕ್ಯೂಟಿವ್, ಪೊಲೀಸ್ ಟ್ರೈನಿಂಗ್ ಶಾಲೆಯಲ್ಲಿ ಕಡ್ಡಾಯವಾಗಿ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ನಿಯಮಾವಳಿ ರೂಪಿಸಲಾಗುವುದು ಎಂದರು. ಸಿಐಡಿಗೆ ನಿಯೋಜನೆ ಮಾಡಿದರೆ ಒಂದು ರೀತಿಯ ಶಿಕ್ಷೆ ಎಂಬಂತಹ ಭಾವನೆ ಅನೇಕ ಅಧಿಕಾರಿಗಳಲ್ಲಿ ಮನೆ ಮಾಡಿದೆ. ಈ ರೀತಿಯ ಮನೋಭಾವನೆ ದೂರ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಲಾಗುತ್ತಿದೆ. 

ಅದರಂತೆ ಒಂದು ಸ್ಥಳಕ್ಕೆ ನಿಯೋಜಿತರಾಗುವ ಪೊಲೀಸ್ ಅಧಿಕಾರಿಗಳು ಕನಿಷ್ಠ 2 ವರ್ಷ ಅದೇ ಸ್ಥಳದಲ್ಲಿ ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ನಿಯಮಾವಳಿ ರೂಪಿಸುವ ನಿಟ್ಟಿನಲ್ಲಿ ಚಿಂತನೆ ಮಾಡಲಾಗುತ್ತಿದ್ದು, ಶೀಘ್ರದಲ್ಲಿಯೇ ಸಾಧ್ಯಾಸಾಧ್ಯತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಈ ಹಿಂದೆಯೂ 2 ವರ್ಷ ಅವಧಿಯಿತ್ತು. ಆರ್.ಅಶೋಕ್ ಅವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಅವಧಿಯನ್ನು 1ವರ್ಷಕ್ಕೆ ಸೀಮಿತ ಮಾಡಲಾಗಿತ್ತು. ಆದರೆ 1 ವರ್ಷದಲ್ಲಿ ಆ ಅಧಿಕಾರಿ ತನ್ನ ಸರಹದ್ದಿನ ಬಗ್ಗೆ ತಿಳಿದುಕೊಳ್ಳಲು ತಿಂಗಳು ಬೇಕಾಗುತ್ತವೆ. ಹೀಗಾಗಿ ಅದನ್ನು ಮಾರ್ಪಾಡು ಮಾಡಿ ಪುನ: 2 ವರ್ಷಕ್ಕೆ ಏರಿಕೆ ಮಾಡುವ ನಿಟ್ಟಿನಲ್ಲಿ ಚರ್ಚಿಸಲಾಗುವುದು ಎಂದು ಪಾಟೀಲ್ ತಿಳಿಸಿದರು. 

ತೆಲಗಾಂಣದಲ್ಲಿರುವ ಅಕ್ಟೋಪಸ್ ಫೋರ್ಸ್, ಮಹಾರಾಷ್ಟ್ರದ ಕಮಾಂಡೋ ಫೋರ್ಸ್ ಮಾದರಿಯಲ್ಲಿ ರಾಜ್ಯದ 'ಗರುಡ ಪಡೆ'ಯನ್ನು ಇನ್ನಷ್ಟು ಸಧೃಡಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ.ಮನಗೂಳಿ ಮಾತನಾಡಿ, ಪೊಲೀಸ್ ಇಲಾಖೆಯ ಅಧಿಕಾರಿಗಳು ನ್ಯಾಯ, ನೀತಿ, ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸಬೇಕು. ಜನಪ್ರತಿನಿಧಿಗಳು ಕರೆ ಮಾಡುವುದಕ್ಕಿಂತ ಮುಂಚೆ ನೀವೇ ನಿಮ್ಮ ಜವಾಬ್ದಾರಿ ನಿಭಾಯಿಸಿಬಿಡಿ. ಶಾಸಕ, ಸಚಿವರ ಕರೆ ಬರುವುದಕ್ಕಿಂತ ಸತ್ಯ, ನ್ಯಾಯ, ನೀತಿ ಧರ್ಮ ಆಧರಿಸಿ ನಿರ್ಧಾರ ಕೈಗೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News