ಬಾಲಕ ಸೇರಿ ನಾಲ್ವರು ಸರಗಳ್ಳರ ಬಂಧನ: 4.20 ಲಕ್ಷ ರೂ. ಮೌಲ್ಯದ ಸೊತ್ತು ವಶ

Update: 2019-02-19 18:08 GMT

ದಾವಣಗೆರೆ,ಫೆ.19: ಸುಲಭ ಹಾದಿಯಲ್ಲಿ ಹಣ ಗಳಿಸಬೇಕೆಂಬ ದುರಾಸೆಯಿಂದ ಸರಗಳ್ಳತನ ಮಾಡುತ್ತಿದ್ದ ಓರ್ವ ಬಾಲಕ ಸೇರಿ ನಾಲ್ವರು ಸರಗಳ್ಳರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ಎಸ್ಪಿ ಚೇತನ್.ಆರ್ ತಿಳಿಸಿದರು.

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಸಿದ್ದಪುರ ಗ್ರಾಮದ ವೀರಯ್ಯ ಯಲ್ಬುರ್ಗಿ ಮಠ, ಈಚಲಯಲ್ಲಾಪುರ ಗ್ರಾಮದ ಗಣೇಶ್, ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿ ಸೈಯದ್ ಅಲಿ ಹಾಗೂ ಓರ್ವ ಬಾಲಕ ಬಂಧಿತರು. ಇವರಿಂದ 1,75,800 ರೂ. ಮೌಲ್ಯದ 58.6 ಗ್ರಾಂ ಬಂಗಾರದ ಸರ, ಒಂದು ಉಮಾಗೋಲ್ಡ್ ಸರ, 45 ಸಾವಿರ ರೂ. ಮೌಲ್ಯದ ಹೋಂಡಾ ಡಿಯೋ ಸ್ಕೂಟರ್, 2 ಲಕ್ಷ ರೂ. ಮೌಲ್ಯದ 2 ಪಲ್ಸರ್ ಬೈಕ್ ಸೇರಿದಂತೆ ಒಟ್ಟು 4.20 ಲಕ್ಷ ರೂ. ಮೌಲ್ಯದ ಸೊತ್ತು ವಶಕ್ಕೆ ಪಡೆಯಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು. 

ಒಂಟಿ ಮಹಿಳೆಯರ ಸರಗಳ್ಳತನ ಪ್ರಕರಣಗಳು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಆರೋಪಿಗಳ ಮತ್ತು ಸೊತ್ತು ಪತ್ತೆಗಾಗಿ ಸಿಪಿಐ ಆನಂದ್.ಇ ಹಾಗೂ ವಿದ್ಯಾನಗರ ಠಾಣೆ ಪಿಎಸ್‍ಐ ಪ್ರಸಾದ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿ, ವಿದ್ಯಾನಗರ ಠಾಣೆ ವ್ಯಾಪ್ತಿಯ 2 ಸರಗಳ್ಳತನ ಹಾಗೂ ಒಂದು ಬೈಕ್ ಕಳ್ಳತನ ಪ್ರಕರಣ, ಹಾವೇರಿ ಜಿಲ್ಲೆ ರಾಣೆಬೆನ್ನೂರು ಗ್ರಾಮಾಂತರ ಠಾಣೆಯಲ್ಲಿ 1 ಸರಗಳ್ಳತನ ಪ್ರಕರಣ, ಲಕ್ಷ್ಮೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಒಂದು ಸರಗಳ್ಳತನ ಪ್ರಕರಣ ಹಾಗೂ ಒಂದು ಬೈಕ್ ಕಳ್ಳತನ ಪ್ರಕರಣ ಭೇದಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳಾದ ಚನ್ನಬಸವ ಹಾಗೂ ರಘುನಾಥ್ ಅವರಿಗೆ ವೈಯಕ್ತಿಕ ಬಹುಮಾನ ಹಾಗೂ ತಂಡಕ್ಕೂ ಬಹುಮಾನ ನೀಡಲಾಗುವುದು ಎಂದು ಹೇಳಿದರು.

ಈ ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು ಐದು ಸರಗಳ್ಳತನ ಪ್ರಕರಣಗಳು ನಡೆದಿದೆ. ಈಗಾಗಲೇ 2 ಪ್ರಕರಣಗಳ ಆರೋಪಿಗಳನ್ನು ಬಂಧಿಸಿದ್ದು, ಇನ್ನೂ ಮೂರು ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ವೃತ್ತ ನಿರೀಕ್ಷಕ ಆನಂದ್.ಇ ಇತರರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News