ಶಾಸಕರಿಂದ ‘ಆ್ಯಕ್ಸಿಡೆಂಟ್’: ಉತ್ತರವಿಲ್ಲದ ಪ್ರಶ್ನೆಗಳು

Update: 2019-02-20 06:59 GMT

ದಶಕಗಳ ಹಿಂದೆ ಖ್ಯಾತ ಕಲಾವಿದ ಶಂಕರ್‌ನಾಗ್ ಅವರ ‘ಆಕ್ಸಿಡೆಂಟ್’ ಎನ್ನುವ ಚಿತ್ರ ಹಲವು ಕಾರಣಗಳಿಗಾಗಿ ಸುದ್ದಿಯಾಗಿತ್ತು. ಮದ್ಯ, ಡ್ರಗ್ಸ್ ಇತ್ಯಾದಿಗಳ ಬೆನ್ನ ಹಿಂದೆ ಹೋಗುವ ಯುವ ಸಮೂಹ ಹೇಗೆ ದುರಂತವನ್ನು ಆಹ್ವಾನಿಸಿಕೊಳ್ಳುತ್ತಿದೆ ಎನ್ನುವುದನ್ನು ಹೇಳುವ ಚಿತ್ರ. ರಾಜಕಾರಣಿಯ ಮಗನೊಬ್ಬ ಅಮಲು ಪದಾರ್ಥ ಸೇವಿಸಿ, ಫುಟ್‌ಪಾತ್‌ನಲ್ಲಿ ಮಲಗಿದ ಕಾರ್ಮಿಕರ ಮೇಲೆ ಕಾರನ್ನು ಹರಿಸುವ ಕಥಾವಸ್ತುವನ್ನು ಇದು ಹೊಂದಿದೆ. ಈ ಸಿನೆಮಾ ವಾಸ್ತವಕ್ಕೆ ಎಷ್ಟು ಹತ್ತಿರವಿತ್ತು ಎಂದರೆ, ಆ ಬಳಿಕ ಇಂತಹದೇ ಹಲವು ಘಟನೆಗಳು ದೇಶಾದ್ಯಂತ ಸುದ್ದಿಯಾದವು. ಫುಟ್‌ಪಾತ್‌ನಲ್ಲಿ ಮಲಗಿರುವವರ ಮೇಲೆ ಹರಿದ ಕಾರುಗಳೆಲ್ಲ ದೇಶದ ಪ್ರತಿಷ್ಠಿತ ಜನರದ್ದೇ ಆಗಿತ್ತು. ಸಲ್ಮಾನ್ ಖಾನ್ ಇಂತಹದೇ ಒಂದು ದುರಂತಕ್ಕೆ ಕಾರಣರಾಗಿ, ಬಳಿಕ ತನ್ನ ಹಣ, ವರ್ಚಸ್ಸಿನಿಂದ ನಿರಪರಾಧಿಯಾಗಿ ಹೊರ ಬಂದರು. ಇದೀಗ ತುಮಕೂರು ಬಳಿ ಸೋಮವಾರ ತಡರಾತ್ರಿ ನಡೆದ ‘ಆಕ್ಸಿಡೆಂಟ್’ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. ಇಲ್ಲಿ ಆಕ್ಸಿಡೆಂಟ್‌ಗೆ ಕಾರಣನಾದವರು ಯಾವುದೋ ರಾಜಕಾರಣಿಯ ಮಗನಲ್ಲ, ಬದಲಿಗೆ ಸ್ವತಃ ಬಿಜೆಪಿಯ ನಾಯಕ, ಶಾಸಕ ಸಿ.ಟಿ. ರವಿ.

ಸಿಟಿ ರವಿ ತಮ್ಮ ಕಾರಿನಲ್ಲಿ ಮಧ್ಯರಾತ್ರಿ ಚೆನ್ನೈಗೆ ತೆರಳುತ್ತಿರುವಾಗ ಅಪಘಾತ ಸಂಭವಿಸಿದೆ. ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿದ್ದ ಯುವಕರ ಮೇಲೆ ಹರಿದು ಇಬ್ಬರ ಸಾವಿಗೆ ಕಾರಣವಾಗಿದೆ. ಕಾರು ನಿಯಂತ್ರಣ ಕಳೆದುಕೊಳ್ಳಲು ಕಾರಣವೇನು ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಒಂದೆಡೆ ಸ್ವತಃ ಶಾಸಕ ಸಿ.ಟಿ. ರವಿಯವರೇ ಕಾರು ಚಲಾಯಿಸುತ್ತಿದ್ದರು ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಜೊತೆಗೆ ಅವರು ಮದ್ಯಪಾನ ಮಾಡಿದ್ದರು ಎಂದೂ ಹೇಳಲಾಗುತ್ತಿದೆ. ಇದೇ ಸಂದರ್ಭದಲ್ಲಿ ಈ ಎರಡೂ ಆರೋಪಗಳನ್ನು ಶಾಸಕ ಸಿ. ಟಿ. ರವಿ ನಿರಾಕರಿಸಿದ್ದಾರೆ. ‘‘ನಾನು ಮದ್ಯಪಾನ ಮಾಡುವುದಿಲ್ಲ, ಕಾರನ್ನು ನಾನು ಚಲಾಯಿಸಿದ್ದಲ್ಲ, ದುರಂತ ಸಂಭವಿಸುವಾಗ ನಾನು ನಿದ್ದೆಯಲ್ಲಿದ್ದೆ’’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಘಟನೆ ದುರದೃಷ್ಟಕರ ಎಂದೂ ವಿಷಾದ ವ್ಯಕ್ತಪಡಿಸಿದ್ದಾರೆ. ಘಟನೆ ನಡೆದ ಸಂದರ್ಭದಲ್ಲಿ ಶಾಸಕ ಸಿ.ಟಿ. ರವಿಯವರ ವರ್ತನೆ ಮಾತ್ರ ಹತ್ತು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಅಪಘಾತದ ಬಳಿಕ ಅವರ ನಡೆಗಳೆಲ್ಲವೂ ಅನುಮಾನಾಸ್ಪದವಾಗಿದೆ ಮತ್ತು ಪ್ರಶ್ನಾರ್ಹವಾಗಿದೆ. ಕಾರು ನಿಯಂತ್ರಣ ಕಳೆದುಕೊಳ್ಳಲು ಕಾರಣವೇನು ಎನ್ನುವುದಕ್ಕೆ ಅವರು ನೀಡಿರುವ ಸ್ಪಷ್ಟನೆ ನಂಬುವುದಕ್ಕೆ ಅರ್ಹವಲ್ಲ. ಲಾರಿಯೊಂದು ಎದುರಾದ ಕಾರಣದಿಂದ ಕಾರನ್ನು ರಸ್ತೆ ಬದಿಗೆ ತಿರುಗಿಸಬೇಕಾಯಿತು ಎಂದು ಚಾಲಕ ಅವರಿಗೆ ಹೇಳಿದನಂತೆ. ಒಂದಂತೂ ಸ್ಪಷ್ಟ, ಕಾರು ವೇಗದ ಮಿತಿಯಲ್ಲಿದ್ದರೆ ಈ ಪರಿಯ ದುರಂತ ಸಂಭವಿಸುತ್ತಿರಲಿಲ್ಲ. ಕಾರು ಅತಿ ವೇಗದಲ್ಲಿತ್ತು ಎನ್ನುವುದನ್ನಂತೂ ನಾವು ಊಹಿಸಬಹುದು. ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನುವುದೇ ಅಪಘಾತದ ಭೀಕರತೆಯನ್ನು ಹೇಳುತ್ತದೆ. ಒಬ್ಬ ಯುವಕ ‘ಮನುಷ್ಯ ಜೀವಕ್ಕೆ ಬೆಲೆ ಇಲ್ವಾ ಸಾರ್?’ ಎಂದು ಚೀರಾಡುವ ವೀಡಿಯೊ ದೃಶ್ಯ ವೈರಲ್ ಆಗಿದೆ. ಅವನು ಅಷ್ಟೆಲ್ಲ ಚೀರಾಡುತ್ತಿದ್ದರೂ ಶಾಸಕರು ಆ ಕಣ್ಣೀರಿಗೆ ಸ್ಪಂದಿಸದೇ ಸ್ಥಳದಿಂದ ತೆರಳುತ್ತಾರೆ. ಪೊಲೀಸರೇ ಅವರನ್ನು ಸ್ಥಳದಿಂದ ತೆರಳಲು ಅವಕಾಶ ನೀಡುತ್ತಾರೆ. ಅಪಘಾತದ ಕಾರಿನಲ್ಲಿ ಶಾಸಕರೂ ಇದ್ದುದರಿಂದ ದುರಂತಕ್ಕೆ ಕಾರಣವಾದ ಇನ್ನೊಬ್ಬ ಆರೋಪಿ ಅವರು. ತನ್ನ ಕುರಿತಂತೆ ತಾನೇ ಕ್ಲೀನ್ ಚಿಟ್ ನೀಡಿ ಅಲ್ಲಿಂದ ತೆರಳುವುದು ಎಷ್ಟು ಸರಿ? ಮುಖ್ಯವಾಗಿ ಒಬ್ಬ ಶಾಸಕರಾಗಿಯಲ್ಲದಿದ್ದರೂ ಒಬ್ಬ ಮನುಷ್ಯರಾಗಿ ಆ ಯುವಕರ ಮೃತದೇಹಗಳನ್ನು ಅಲ್ಲಿಂದ ಎತ್ತುವವರೆಗೂ ಶಾಸಕರು ತೆರಳಬಾರದಿತ್ತು. ಯುವಕರಿಗೆ ಸಂಪೂರ್ಣ ಸಾಂತ್ವನ ಹೇಳಿ, ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದರಿಂದ ಹಿಡಿದು ಎಲ್ಲ ಕಾರ್ಯಗಳಿಗೂ ಜೊತೆಯಾಗಬೇಕಾಗಿತ್ತು. ಸಂತ್ರಸ್ತರು ಕೂಗಿ ಕೂಗಿ ಶಾಸಕರಲ್ಲಿ ಮೊರೆಯಿಡುತ್ತಿದ್ದರೂ ಅವರು ಅವಸರವಸರವಾಗಿ ಸ್ಥಳದಿಂದ ತೆರಳಿರುವುದು ಅವರಿಂದ ಘಟಿಸಿದ ಎರಡನೇ ಅಪರಾಧವಾಗಿದೆ.

ಸಿ.ಟಿ. ರವಿ ಸಾರ್ವಜನಿಕ ವ್ಯಕ್ತಿ. ನಾಳೆ ಸಾರ್ವಜನಿಕವಾಗಿ ಹುಟ್ಟುವ ಪ್ರಶ್ನೆಗಳಿಗೆ ಉತ್ತರ ನೀಡುವ ಹೊಣೆಗಾರಿಕೆ ಅವರಿಗಿರುತ್ತದೆ. ಈ ಹಿನ್ನೆಲೆಯಲ್ಲಿ ಅವರು ನೇರವಾಗಿ ಮನೆಗೆ ನಡೆಯದೇ ಪೊಲೀಸ್ ಠಾಣೆಗೆ ಹೋಗಬೇಕಾಗಿತ್ತು. ಪೊಲೀಸರು ತಕ್ಷಣ ಮಾಡಬೇಕಾಗಿದ್ದ ಕೆಲಸವೆಂದರೆ, ‘ಶಾಸಕರು ಕುಡಿದಿದ್ದಾರೆಯೇ ಇಲ್ಲವೇ?’ ಎನ್ನುವುದನ್ನು ಪರೀಕ್ಷಿಸುವುದು. ಅಂತಹ ಪರೀಕ್ಷೆ ಏನಾದರೂ ನಡೆದಿದೆಯೇ ಎಂಬ ಪ್ರಶ್ನೆಗೆ ಪೊಲೀಸರು ಸ್ಪಷ್ಟವಾಗಿ ಉತ್ತರಿಸುತ್ತಿಲ್ಲ. ದುರಂತ ಸಂಭವಿಸಿದ ಬಳಿಕ ಯಾವ ಆರೋಪಿಯೂ ‘ನಾನು ಸ್ವಲ್ಪ ಕುಡಿದಿದ್ದೆ, ಆದುದರಿಂದ ಕಾರಿನ ನಿಯಂತ್ರಣ ತಪ್ಪಿತು’ ಎಂಬ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡುವುದಿಲ್ಲ. ಅವರು ಕುಡಿದಿದ್ದಾರೆಯೇ ಇಲ್ಲವೇ? ಎನ್ನುವುದನ್ನು ಹೇಳಬೇಕಾದವರು ಪೊಲೀಸರು. ಒಂದು ವೇಳೆ ಘಟನೆ ನಡೆದ ತಕ್ಷಣ ಶಾಸಕರ ಪರೀಕ್ಷೆ ನಡೆದಿಲ್ಲ ಎಂದಾದರೆ, ಸಿ. ಟಿ. ರವಿಯ ಹೇಳಿಕೆಗೆ ಯಾವ ತೂಕವೂ ಇಲ್ಲ. ಸಾಧಾರಣವಾಗಿ ಸಮಾಜದ ಪ್ರತಿಷ್ಠಿತ ಜನರು ತಮ್ಮ ಕೈಯಲ್ಲಿ ಅಪಘಾತ ಸಂಭವಿಸಿದರೆ ಅದಕ್ಕೆ ಇನ್ನೊಬ್ಬರನ್ನು ಬಲಿಪಶು ಮಾಡಿ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಪರಂಪರೆಯಾಗಿ ಬಂದಿದೆ. ಸಲ್ಮಾನ್‌ಖಾನ್ ಪ್ರಕರಣದಲ್ಲಿ ಆತನೂ ತನ್ನ ಮೇಲಿನ ಆರೋಪವನ್ನು ಚಾಲಕನಿಗೆ ವರ್ಗಾಯಿಸಿ ಬಚಾವಾದರು. ಇಲ್ಲಿ ಅಂತಹದೇನಾದರೂ ಸಂಭವಿಸಿದೆಯೇ? ಎನ್ನುವುದು ತನಿಖೆಯಿಂದ ಹೊರಬರಬೇಕು.

 ಎಲ್ಲಕ್ಕಿಂತ ಅಚ್ಚರಿಯ ವಿಷಯವೆಂದರೆ, ದುರಂತಕ್ಕೆ ಸಂಬಂಧಿಸಿ ಶಾಸಕರ ಹೆಸರನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿಲ್ಲ. ದೂರುದಾರರು ಶಾಸಕರ ಮೇಲೆ ದೂರು ನೀಡಿಲ್ಲ ಎನ್ನುವುದು ಸಮಜಾಯಿಶಿ. ಕಾರಿನಲ್ಲಿ ಶಾಸಕರು ಇದ್ದರು. ಜೊತೆಗೆ ಆ ರಾತ್ರಿ ಏನು ಸಂಭವಿಸಿತು ಎನ್ನುವುದು ಕುಟುಂಬಸ್ಥರಿಗೆ ತಿಳಿದಿಲ್ಲ. ಹೀಗಿರುವಾಗ ದೂರಿನಲ್ಲಿ ಶಾಸಕರ ಹೆಸರನ್ನು ಕೈ ಬಿಡಲು ಕಾರಣವೇನು ? ಯಾವುದಾದರೂ ರಾಜಕೀಯ ಒತ್ತಡ ಅಥವಾ ಪೊಲೀಸರ ಒತ್ತಡಕ್ಕೆ ಬೆದರಿ ಅವರು ಶಾಸಕರ ಹೆಸರನ್ನು ಉಲ್ಲೇಖಿಸಲಿಲ್ಲವೇ? ಈ ಪ್ರಶ್ನೆಗೂ ಉತ್ತರ ಸಿಗಬೇಕಾಗಿದೆ. ಘಟನೆಗೆ ಸಂಬಂಧಿಸಿ ಶಾಸಕರು ‘ದುರದೃಷ್ಟಕರ’ ಎಂದಷ್ಟೇ ಹೇಳಿ ಜಾರಿಗೊಂಡಿದ್ದಾರೆ.

ಶಾಸಕರು ಕುಟುಂಬಸ್ಥರ ಕ್ಷಮೆಯಾಚಿಸಬೇಕಾಗಿದೆ. ಜೊತೆಗೆ ಮೃತರಾದ ಯುವಕರಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು. ಅವರಲ್ಲಿರುವ ಸಂಪತ್ತಿಗೆ ಹೋಲಿಸಿದರೆ, ಅವರು ಮಾಡಿದ ಅವಘಡಕ್ಕೆ ಹೋಲಿಸಿದರೆ ಈ ಪರಿಹಾರ ಅಲ್ಪಪ್ರಮಾಣದ್ದು. ಈಗಾಗಲೇ ಕೋಮು ಅಮಲನ್ನು ತಲೆಗೇರಿಸಿ ಅದನ್ನು ಸಾರ್ವಜನಿಕರಿಗೆ ಕುಡಿಸಿ ಅಮಾಯಕರ ಹತ್ಯೆಗಳ ಮೂಲಕವೇ ರಾಜಕೀಯ ನಡೆಸುತ್ತಾ ಬಂದಿರುವ ಸಿ. ಟಿ. ರವಿ, ಮೃತರಾದವರು ಹಿಂದೂ ಯುವಕರು ಎಂಬ ಕಾರಣಕ್ಕಾಗಿಯಾದರೂ ಮಾನವೀಯವಾಗಿ ಸ್ಪಂದಿಸಬಹುದಿತ್ತು. ಒಂದು ವೇಳೆ ಈ ದುರ್ಘಟನೆ ಇನ್ನೊಂದು ಸಮುದಾಯದ ರಾಜಕೀಯ ನಾಯಕನಿಂದ ಸಂಭವಿಸಿದ್ದಿದ್ದರೆ ಆ ಹೆಣಗಳ ಸುತ್ತ ಸಿ.ಟಿ. ರವಿಯೂ ಸೇರಿದಂತೆ ಬಿಜೆಪಿಯ ನಾಯಕರು ರಣಹದ್ದುಗಳಂತೆ ನೆರೆಯುತ್ತಿದ್ದರು ಎಂಬುದನ್ನೂ ಮರೆಯಬಾರದು. ನಿನ್ನೆಯ ಅಪಘಾತದಲ್ಲಿ ಶಾಸಕರು ನೇರವಾಗಿ ಭಾಗಿಯಾಗಿದ್ದರೆ ಯಾವ ಕಾರಣಕ್ಕೂ ಅವರು ಕಾನೂನಿನ ಕುಣಿಕೆಯಿಂದ ಪಾರಾಗಬಾರದು. ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿ ರಾಜ್ಯದ ಗೃಹ ಸಚಿವರು ಮಧ್ಯಪ್ರವೇಶಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News