×
Ad

ಮಾಜಿ ಶಾಸಕಿ ದಮಯಂತಿ ಬೋರೇಗೌಡ ನಿಧನ

Update: 2019-02-20 19:46 IST

ಶ್ರೀರಂಗಪಟ್ಟಣ, ಫೆ.20: ಕ್ಷೇತ್ರದ ಮಾಜಿ ಶಾಸಕಿ ದಮಯಂತಿ ಬೋರೇಗೌಡ(92) ಬುಧವಾರ ಸಂಜೆ 4.20 ಕ್ಕೆ ಸ್ವಗ್ರಾಮ ಶ್ರೀರಂಗಪಟ್ಟಣದ ಮನೆಯಲ್ಲಿ ಕೊನೆಯುಸೆರೆಳೆದಿದ್ದಾರೆ. 

ಇವರು ಮಂಡ್ಯ ಜಿಲ್ಲೆಯ ಮೊದಲ ಮಹಿಳಾ ಶಾಸಕಿಯಾಗಿದ್ದರು. 1957ರಲ್ಲಿ ಪಾಂಡವಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಅವರು, ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ 1972-77 ಹಾಗೂ 1989-94ರ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕಿಯಾಗಿದ್ದರು.

ಲೋಕಪಾವನಿ ಮಹಿಳಾ ಬ್ಯಾಂಕ್, ರಂಗನಾಯಕಿ ಸ್ತ್ರೀ ಸಮಾಜದ ಸಂಸ್ಥಾಪಕ ಅಧ್ಯಕ್ಷರಾಗಿ, ಭಾರತೀಯ ಮಹಿಳಾ ಸಂಘದ ಅಧ್ಯಕ್ಷರಾಗಿ 25 ವರ್ಷ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ವಿಭೂತಿಪುರದಲ್ಲಿ ಅನಾಥ ಮಕ್ಕಳಿಗಾಗಿ ಆಶ್ರಮ ಸ್ಥಾಪಿಸಿದ್ದರು. 1973ರಲ್ಲಿ ಕರಿಘಟ್ಟ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು, ತಾಲೂಕಿನ ಕೊಡಿಯಾಲ, ಬೆಳಗೊಳ, ಕೆ.ಶೆಟ್ಟಹಳ್ಳಿಯಲ್ಲಿ ಪಶು ಆಸ್ಪತ್ರೆ ಆರಂಭಕ್ಕೆ ಕಾರಣರಾಗಿದ್ದರು. 

ಅರಕೆರೆಯಲ್ಲಿ ಬಿಸಿಎಂ ಹಾಸ್ಟೆಲ್ ಆರಂಭಿಸಿ, ಪಟ್ಟಣದ ಸರಕಾರಿ ಜೂನಿಯರ್ ಕಾಲೇಜನ್ನು ಮೇಲ್ದರ್ಜೆಗೇರಿಸಿದ್ದರು. ಇಂದಿರಾಗಾಂಧಿ, ದೇವರಾಜ ಅರಸು ಜತೆ ನಿಕಟ ಸಂಪರ್ಕ ಹೊಂದಿದ್ದ ದಮಯಂತಿ ಅವರಿಗೆ 2007ರಲ್ಲಿ 'ಬದುಕಿನ ಹೆಜ್ಜೆಗಳು' ಅಭಿನಂದನಾ ಗ್ರಂಥ ಸಮರ್ಪಣೆ ಮಾಡಲಾಗಿತ್ತು. 2001ರಲ್ಲಿ ರಾಜ್ಯ ಸರಕಾರದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News